ADVERTISEMENT

ದಾವಣಗೆರೆ | ಶಾಸಕರ ವಿರುದ್ಧ ಪ್ರಕರಣ: ಹೋರಾಟಕ್ಕೆ ನಿರ್ಧಾರ

ವೈಮನಸು ಬಿಟ್ಟು ಒಗ್ಗೂಡಲು ಒಲವು ತೋರಿದ ಬಿಜೆಪಿ ಬಣಗಳು, ಜಿಎಂಐಟಿ ಅತಿಥಿ ಗೃಹದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:23 IST
Last Updated 17 ಜನವರಿ 2026, 7:23 IST
ಬಿ.ಪಿ. ಹರೀಶ್
ಬಿ.ಪಿ. ಹರೀಶ್   

ದಾವಣಗೆರೆ: ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣದಿಂದ ಆಕ್ರೋಶಗೊಂಡ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಈವರೆಗೆ ಭಿನ್ನ ಬಣಗಳಲ್ಲಿ ಗುರುತಿಸಿಕೊಂಡಿದ್ದ ನಾಯಕರು ವೈಮನಸು ಬಿಟ್ಟು ಒಗ್ಗೂಡಲು ಒಲವು ತೋರಿದ್ದಾರೆ.

ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶುಕ್ರವಾರ ಸಭೆ ನಡೆಸಿ ಒಗ್ಗೂಡಿ ಹೋರಾಟ ನಡೆಸಲು ಸಮ್ಮತಿ ಸೂಚಿಸಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್‌ ನೇತೃತ್ವದ ನಿಯೋಗ ಕಚೇರಿಯಲ್ಲಿ ಸಭೆ ಸೇರಲು ನೀಡಿದ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ. ಜ.18ರಂದು ಎರಡು ಬಣಗಳು ಸಭೆ ಸೇರುವ ಸಾಧ್ಯತೆ ಇದೆ.

ಜ.12ರಂದು ತಾಲ್ಲೂಕಿನ ಕಾಡಜ್ಜಿ ಕೆರೆಯ ಅಂಗಳದಲ್ಲಿ ನಡೆಯುತ್ತಿದ್ದ ಮಣ್ಣು ಗಣಿಗಾರಿಕೆಯನ್ನು ತಡೆಯಲು ಶಾಸಕ ಬಿ.ಪಿ. ಹರೀಶ್‌ ಪ್ರಯತ್ನಿಸಿದ್ದರು. ಆಗ ಸ್ಥಳದಲ್ಲಿದ್ದ ಕೆಲವರೊಂದಿಗೆ ವಾಗ್ವಾದ ನಡೆದಿತ್ತು. ಶಾಸಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮದ ಎಚ್‌. ಕಾಂತರಾಜ್ ಎಂಬುವರು ಜ.14ರಂದು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ADVERTISEMENT

‘ಕೆರೆಯ ಮಣ್ಣನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಒಡೆತನಕ್ಕೆ ಸೇರಿದ ಭೂಮಿಗೆ ಬಳಸಿಕೊಳ್ಳಲಾಗಿದೆ’ ಎಂದು ಶಾಸಕ ಬಿ.ಪಿ. ಹರೀಶ್‌ ಆರೋಪಿಸಿದ್ದರು. ಎರಡು ದಿನಗಳ ಬಳಿಕ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣ ರಾಜಕೀಯ ಸ್ವರೂಪ ಪಡೆದಿತ್ತು.

ಬಿ.ಪಿ. ಹರೀಶ್‌ ಪರವಾಗಿ ಧ್ವನಿಯತ್ತಲು ಸಿದ್ದೇಶ್ವರ ಬಣ ಸಜ್ಜಾಗಿದೆ. ಸಿದ್ದೇಶ್ವರ ನೇತೃತ್ವದಲ್ಲಿ ಕರೆದ ಸಭೆಗೆ 100ಕ್ಕೂ ಹೆಚ್ಚು ಬಿಜೆಪಿ ನಾಯಕರು ಸೇರಿದ್ದರು. ಒಗ್ಗೂಡಿ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆಗೆ ಹಾಜರಾದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ನೇತೃತ್ವದ ನಿಯೋಗ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ತೀರ್ಮಾನಿಸಲು ಮನವಿ ಮಾಡಿದೆ. ಇದಕ್ಕೆ ಸಿದ್ದೇಶ್ವರ ಬಣ ಒಪ್ಪಿಕೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮಾಜಿ ಶಾಸಕ ಎಚ್‌.ಪಿ. ರಾಜೇಶ್‌, ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ್‌, ಯಶವಂತರಾವ್‌ ಜಾಧವ್‌, ಜಗದೀಶ್‌, ಹನಗವಾಡಿ ವೀರೇಶ್‌ ಹಾಜರಿದ್ದರು.

ಜಿ.ಎಂ. ಸಿದ್ದೇಶ್ವರ
ಎನ್‌. ರಾಜಶೇಖರ್‌

‘ಧ್ವನಿ ಎತ್ತಿದ್ದಕ್ಕೆ ದೂರು ದಾಖಲು’

‘ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರ ಭ್ರಷ್ಟಾಚಾರವನ್ನು ಪ್ರಶ್ನಿಸಿದ ಕಾರಣಕ್ಕೆ ಶಾಸಕ ಬಿ.ಪಿ. ಹರೀಶ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಆರೋಪಿಸಿದರು. ‘ಶಾಸಕರು ಅಕ್ರಮ ತಡೆದಾಗ ಕಾಂತರಾಜು ಕೆರೆಯ ಅಂಗಳದಲ್ಲಿ ಇರಲಿಲ್ಲ. ಎರಡು ದಿನಗಳ ಬಳಿಕ ಪ್ರಕರಣ ದಾಖಲಿಸಿದ್ದು ದುರುದ್ದೇಶಪೂರ್ವಕ. ಶಾಸಕರ ವಿರುದ್ಧ ದೂರು ದಾಖಲಿಸುವ ಮುನ್ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಿಶೀಲನೆ ನಡೆಸಬೇಕಿತ್ತು’ ಎಂದು ಸುದ್ದಿಗಾರರ ಬಳಿ ಆಕ್ರೋಶ ವ್ಯಕ್ತಪಡಿಸಿದರು.

‘ಕುಟುಂಬದ ಸ್ಪರ್ಧೆ ಇಲ್ಲ’

‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ನಮ್ಮ ಕುಟುಂಬದ ಯಾರೊಬ್ಬರೂ ಸ್ಪರ್ಧೆ ಮಾಡುವುದಿಲ್ಲ’ ಎಂದು ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದರು. ‘ಕ್ಷೇತ್ರ ವ್ಯಾಪ್ತಿಯಲ್ಲಿ ಅಹಿಂದ ಮತದಾರರ ಸಂಖ್ಯೆ ಹೆಚ್ಚಿದೆ. ಅಹಿಂದ ವರ್ಗಕ್ಕೆ ಸೇರಿದ ನಾಯಕರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಹಲವರು ಆಕಾಂಕ್ಷಿಗಳಿದ್ದು ಆಸಕ್ತರ ಅಭಿಪ್ರಾಯಗಳನ್ನು ಪಕ್ಷ ಪಡೆಯಲಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಭಿನ್ನಾಭಿಪ್ರಾಯಗಳು ನಿವಾರಣೆ ಆಗುತ್ತಿವೆ. ಶಾಸಕ ಹರೀಶ್‌ ವಿರುದ್ಧ ದಾಖಲಿಸಿದ ಪ್ರಕರಣ ರಾಜಕೀಯ ಪ್ರೇರಿತವಾಗಿದೆ.
–ಜಿ.ಎಂ. ಸಿದ್ದೇಶ್ವರ, ಕೇಂದ್ರದ ಮಾಜಿ ಸಚಿವ
ಶಾಸಕರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ಪಡೆದು ಹೋರಾಟ ರೂಪಿಸಲಾಗುತ್ತಿದೆ.
–ಎನ್‌.ರಾಜಶೇಖರ್‌, ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.