ADVERTISEMENT

ಹೋರಾಟವೇ ಜೀವನವಲ್ಲ, ಕಾಯಕವೂ ಬೇಕು: ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ಚನ್ನಗಿರಿ: ನಗರ ಶಾಖೆಯ ಲೋಕಾರ್ಪಣೆ, ಜನ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:42 IST
Last Updated 24 ನವೆಂಬರ್ 2025, 4:42 IST
ಚನ್ನಗಿರಿಯಲ್ಲಿ ಭಾನುವಾರ ನಡೆದ ಮಾದಾರ ಚನ್ನಯ್ಯ ಸೇವಾ ಸಮಿತಿ ನಗರ ಘಟಕ ಲೋಕಾರ್ಪಣೆ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು
ಚನ್ನಗಿರಿಯಲ್ಲಿ ಭಾನುವಾರ ನಡೆದ ಮಾದಾರ ಚನ್ನಯ್ಯ ಸೇವಾ ಸಮಿತಿ ನಗರ ಘಟಕ ಲೋಕಾರ್ಪಣೆ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು   

ಚನ್ನಗಿರಿ: ‘ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮುದಾಯ ಬೆಳೆದಾಗ ಮಾತ್ರ ಎಲ್ಲರೂ ಗೌರವ ಕೊಡುತ್ತಾರೆ. ಹೋರಾಟವೇ ಜೀವನವಲ್ಲ, ಕಾಯಕವೂ ಅಗತ್ಯ. ಮಾದಿಗ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಡೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ’ ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ನಗರ ಘಟಕ ಲೋಕಾರ್ಪಣೆ ಹಾಗೂ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಾತಿ ವ್ಯವಸ್ಥೆ ಈಗ ನಿಧಾನವಾಗಿ ಬದಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಈ ಸಮುದಾಯದವರೂ ಬದಲಾವಣೆಯಾಗುವ ಕಡೆಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು. 

ADVERTISEMENT

‘ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ದೂರವಾಗುತ್ತಿದೆ. ಜಾತಿ ನಿರ್ಮೂರ್ಲನೆ ಆಗುವವರೆಗೆ ಹೋರಾಟ ಅನಿವಾರ್ಯ ಹಾಗೂ ನಿರಂತರವಾಗಿರುತ್ತದೆ. ರಾಜಕೀಯ ಪಕ್ಷಗಳು ಜಾತಿ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಶೋಷಿತ ಸಮುದಾಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ’ ಎಂದು ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಹೇಳಿದರು.

‘ಸಮಾಜವನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟಕರ ಕೆಲಸ. ಬಡವರಾಗಿ ಹುಟ್ಟಿ ಬಡವರಾಗಿಯೇ ಸಾಯುವುದು ಬೇಡ. ಬದಲಾವಣೆಯಾಗಬೇಕು ಎಂಬ ನಿಶ್ಚಲ ಮನಃಸ್ಥಿತಿ ಹೊಂದಬೇಕು. ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಮಾದಿಗ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು’ ಎಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಮಾದಾರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ್, ಕಾರ್ಯದರ್ಶಿ ಪರುಶುರಾಮ್, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬಿ.ಎಂ. ಶಿವಪ್ಪ, ಕಾರ್ಯಾಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ, ನಗರ ಘಟಕದ ಅಧ್ಯಕ್ಷ ಎನ್. ಮಂಜಪ್ಪ, ಖಜಾಂಚಿ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ಶಿವಲಿಂಗಪ್ಪ ಉಪಸ್ಥಿತರಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಜಿ. ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.