ಮಸಣಿಕೆರೆ(ಚನ್ನಗಿರಿ): ಮಸಣಿಕೆರೆ ಹಾಗೂ ಗಂಗಗೊಂಡನಹಳ್ಳಿ ಕೆರೆಗಳನ್ನು ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ತುಂಬಿಸುವ ಪೈಪ್‌ಲೈನ್ ಕಾಮಗಾರಿಗೆ ₹ 7.75 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಶಾಸಕ ಬಡವರಾಜು ವಿ. ಶಿವಗಂಗಾ ತಿಳಿಸಿದರು.
ತಾಲ್ಲೂಕಿನ ಮಸಣಿಕೆರೆ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಯೋಗದಲ್ಲಿ ಸೋಮವಾರ ನಡೆದ ಕೆರೆ ತುಂಬಿಸುವ ಪೈಪ್‌ಲೈನ್ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
2023ರಲ್ಲಿ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಈ ಕಾಮಗಾರಿಯ ಭೂಮಿಪೂಜೆಯನ್ನು ನೆರವೇರಿಸಿತ್ತು. ಆದರೆ, ಗುತ್ತಿಗೆದಾರ ಈ ಕಾಮಗಾರಿಯನ್ನು ಮಾಡುವುದಿಲ್ಲ ಎಂದು ಹಿಂದೆ ಸರಿದ ಕಾರಣ, ಈಗ ಮತ್ತೆ ಕಾಮಗಾರಿಯ ಭೂಮಿಪೂಜೆಯನ್ನು ನೆರವೇರಿಸಲಾಗುತ್ತಿದೆ. ಅದೇ ರೀತಿ ಸಾಸ್ವೆಹಳ್ಳಿ ಹಾಗೂ ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ಬಾಕಿ ಉಳಿದಿರುವ ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ₹ 361 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ. ಶೀಘ್ರದಲ್ಲಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲು ಬದ್ಧನಾಗಿದ್ದೇನೆ. ಬೀಡುಗೊಂಡನಹಳ್ಳಿ ಗ್ರಾಮದ ಸಣ್ಣ ತಾಂಡದ ಕೆರೆ ಅಭಿವೃದ್ಧಿ ಕಾಮಗಾರಿಗೆ ₹ 2.50 ಕೋಟಿ ಅನುದಾನ ಬಿಡುಗಡೆಯಾಗಿದೆ. 2028ರ ಚುನಾವಣೆಯಲ್ಲೂ ನಾನೇ ಶಾಸಕನಾಗಿ ಆಯ್ಕೆಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆ ಅಡಿ ಜಿಲ್ಲೆಯಲ್ಲಿ ಇದುವರೆಗೆ 56 ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಯೋಜನೆ ಅಡಿ ದಾವಣಗೆರೆ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಡಿಸೆಂಬರ್ ಅಂತ್ಯದೊಳಗೆ ಒಟ್ಟು 100 ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಗುರಿಯನ್ನು ತಲುಪಲಿದ್ದೇವೆ ಎಂದು ಹೇಳಿದರು.
ತಹಶೀಲ್ದಾರ್ ಎನ್.ಜೆ. ನಾಗರಾಜ್, ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಇಇ ಸೋಮ್ಲಾನಾಯ್ಕ, ಎಇಇ ಎಂ.ಬಿ. ಲೋಹಿತ್, ತಾವರೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ರುದ್ರಮುನಿ, ನೆಲ್ಲಿಹಂಕಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎ. ದಿನೇಶ್ ಉಪಸ್ಥಿತರಿದ್ದರು.
ಎಡೆಯೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.