
ಚನ್ನಗಿರಿ: ‘ಸರ್ಕಾರವು ಹೊಸದಾಗಿ ಜಾರಿಗೆ ತರಲು ಹೊರಟಿರುವ ಕಾವೇರಿ 2.0 ಮತ್ತು 3.0 ತಂತ್ರಾಂಶದಿಂದ ಪತ್ರ ಬರಹಗಾರರ ಭವಿಷ್ಯ ನಾಶವಾಗಲಿದೆ’ ಎಂದು ದೂರಿ ತಾಲ್ಲೂಕು ಪತ್ರ ಬರಹಗಾರರ ಸಂಘದವರು ಪಟ್ಟಣದ ಉಪ ನೋಂದಣಿ ಕಚೇರಿಯ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
‘ಈ ತಂತ್ರಾಂಶ ಜಾರಿಗೊಂಡರೆ ಪತ್ರ ಬರಹಗಾರರು ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ. ಇದನ್ನೇ ನಂಬಿಕೊಂಡಿರುವ ಕುಟುಂಬಗಳು ಬೀದಿ ಪಾಲಾಗಲಿವೆ. ರಾಜ್ಯದಲ್ಲಿ 18,000ಕ್ಕೂ ಹೆಚ್ಚು ಪತ್ರ ಬರಹಗಾರರಿದ್ದು, ಕಚೇರಿಯಲ್ಲಿ ಸಹಾಯಕರು, ಸಿಬ್ಬಂದಿ ಸೇರಿ 1 ಲಕ್ಷದಷ್ಟು ಜನರು ಪತ್ರ ಬರಹವನ್ನೇ ಆಶ್ರಯಿಸಿದ್ದಾರೆ’ ಎಂದು ಹೇಳಿದರು.
‘ಸರ್ಕಾರದ ಹೊಸ ನಿಯಮದಿಂದ ಎಲ್ಲರೂ ನಿರುದ್ಯೋಗಿಗಳಾಗಲಿದ್ದಾರೆ. ಹಾಗಾಗಿ, ಕಾವೇರಿ 2.0 ಮತ್ತು 3.0 ತಂತ್ರಾಂಶವನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಡಿ. 16ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಪತ್ರ ಬರಹಗಾರರ ಮನವಿ ಪುರಸ್ಕರಿಸದೇ, ಬೇಡಿಕೆ ಈಡೇರಿಸಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ತಿಳಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯು. ಬಸವರಾಜ್, ಕೆ.ಆರ್. ಮಂಜುನಾಥ್, ಹಾಲಪ್ಪ, ಜಯಪ್ಪ, ಶಿವಮೂರ್ತಿ, ನಾಗರಾಜ್, ಶಿವಕುಮಾರ್, ಕೆ.ಪಿ.ಎಂ. ಸ್ವಾಮಿ, ಶ್ರೀಕಾಂತ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನೆ ಆರಂಭಕ್ಕೂ ಮೊದಲು ಶಾಸಕ ಶಿವಶಂಕರಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.