
ಚನ್ನಗಿರಿ: ನಗರ ದೇವತೆ ಕೆರೆಏರಿ ಚೌಡೇಶ್ವರಿ ಅಮ್ಮನವರ ಐದು ದಿನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದರು.
ಬೆಳಿಗ್ಗೆ 9 ರಿಂದಲೇ ಭಕ್ತರು ದೇವಸ್ಥಾನದ ಆವರಣದಲ್ಲಿ ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದರು. ದೇವಿಗೆ ಹಣ್ಣು ಕಾಯಿ ಹಾಗೂ ಸಿಹಿ ಅಡುಗೆಯ ನೈವೇದ್ಯ ಅರ್ಪಿಸಿದರು. ಎರಡು ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಬಂದು ದೇವಿಗೆ ಹರಕೆ ತೀರಿಸಿದರು.
ಬೆಳಿಗ್ಗೆ 9 ಗಂಟೆಯಿಂದ ದುರ್ಗಾಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಮಹಾ ನೈವೇದ್ಯ, ಮಂಗಳಾರತಿಯ ನಂತರ ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ 3 ಗಂಟೆಯಿಂದ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಅಡ್ಡ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಕಾಳಿಕಾಂಬ, ಅಂತರಘಟ್ಟಮ್ಮ, ಅಂಬಾ ಭವಾನಿ, ಕುಕ್ಕುವಾಡೇಶ್ವರಿ ಪರಿವಾರ ದೇವತೆಗಳೊಂದಿಗೆ ರಾಜಬೀದಿ ಉತ್ಸವ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.