
ಚನ್ನಗಿರಿ: 2022-23ನೇ ಸಾಲಿನ ಪುರಸಭೆಯ ಎಸ್ಎಫ್‌ಸಿ ಯೋಜನೆ ಅಡಿಯಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣ ನವೀಕರಣ ಕಾಮಗಾರಿಗೆ ₹1.34 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಇದುವರೆಗೂ ಕಾಮಗಾರಿ ಆರಂಭಗೊಂಡಿರಲಿಲ್ಲ. ಮೂರು ವರ್ಷದ ನಂತರ ಬಸ್ ನಿಲ್ದಾಣದ ನವೀಕರಣ ಕಾಮಗಾರಿಯನ್ನು ಜನವರಿ 15ರಂದು ಆರಂಭಿಸಲು ಪುರಸಭೆ ಸಜ್ಜಾಗಿದೆ.
2002-2003ನೇ ಸಾಲಿನಲ್ಲಿ ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಅಂದಿನ ಶಾಸಕ ವಡ್ನಾಳ್ ರಾಜಣ್ಣ ನಿರ್ಮಿಸಿದ್ದರು. ಬಸ್ ನಿಲ್ದಾಣ ನಿರ್ಮಾಣಗೊಂಡು 23 ವರ್ಷಗಳಾಗಿವೆ. 4–5 ವರ್ಷಗಳ ಹಿಂದೆಯೇ ಖಾಸಗಿ ಬಸ್ ನಿಲ್ದಾಣದ ತಗಡಿನ ಶೀಟ್‌ಗಳು ಸಂಪೂರ್ಣವಾಗಿ ಒಡೆದು ಹೋಗಿ ಮಳೆಗಾಲದಲ್ಲಿ ಬಸ್ ನಿಲ್ದಾಣ ಸೋರುತ್ತಿತ್ತು.
ಇಲ್ಲಿರುವ ವಾಣಿಜ್ಯ ಮಳಿಗೆಗಳು ಕೂಡಾ ಸುಣ್ಣಬಣ್ಣ ಕಾಣದೇ ಹಳೆಯ ಕಟ್ಟಡಗಳಂತೆ ಕಾಣುತ್ತಿದ್ದವು. ಖಾಸಗಿ ಬಸ್ ನಿಲ್ದಾಣದ ದುರಸ್ತಿ ಕಾರ್ಯ ಮಾಡಬೇಕೆಂದು ಹಲವು ಬಾರಿ ಸಾರ್ವಜನಿಕರು ಜನಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
‘ಸೋರುತಿಹುದು ಬಸ್ ನಿಲ್ದಾಣದ ಮೇಲ್ಛಾವಣಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಪತ್ರಿಕೆಯಲ್ಲಿ 6 ತಿಂಗಳ ಹಿಂದೆ ವಿಸ್ತೃತ ವರದಿ ಪ್ರಕಟಗೊಂಡಿತ್ತು.
ಸಾರ್ವಜನಿಕರ ಮನವಿಯನ್ನು ಪರಿಗಣಿಸಿ 2022-23ನೇ ಸಾಲಿನಲ್ಲಿ ಅಂದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುರಸಭೆಯ ಎಸ್ಎಫ್‌ಸಿ ಯೋಜನೆಯಡಿ ₹1.34 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ಇದೀಗ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಪಿ. ಮಹೇಶ್ ಅವರಿಗೆ ಕಾಮಗಾರಿಯ ಗುತ್ತಿಗೆಯನ್ನು ವಹಿಸಲಾಗಿದೆ.
‘2022-23ನೇ ಸಾಲಿನಲ್ಲಿ ಈ ಬಸ್ ನಿಲ್ದಾಣದ ನವೀಕರಣ ಕಾಮಗಾರಿಗೆ ₹1.34 ಕೋಟಿ ಬಿಡುಗಡೆಯಾಗಿತ್ತು. ಆದರೆ, ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರು ಮುಂದೆ ಬಂದಿರಲಿಲ್ಲ. ಜ. 15 ರಂದು ನವೀಕರಣ ಕಾಮಗಾರಿ ಆರಂಭಗೊಳ್ಳಲಿದೆ. ಈ ಅನುದಾನದಲ್ಲಿ ಹೊಸದಾಗಿ ಚಾವಣಿ ನಿರ್ಮಿಸಲಾಗುವುದು. ಜತೆಗೆ ಕಟ್ಟಡಗಳ ದುರಸ್ತಿ, ವಿದ್ಯುತ್ ಸಂಪರ್ಕ ಕಾಮಗಾರಿ ಮತ್ತು ವಾಣಿಜ್ಯ ಮಳಿಗೆಗಳಿಗೆ ಸುಣ್ಣಬಣ್ಣ ಬಳಿಸುವ ಕಾಮಗಾರಿ ನಡೆಸಲಾಗುವುದು. ಒಂದು ತಿಂಗಳು ವ್ಯಾಪಾರ ವಹಿವಾಟು ನಡೆಸದಿರಲು ವಾಣಿಜ್ಯ ಮಳಿಗೆಗಳ ಬಾಡಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸುಸಜ್ಜಿತವಾದ ಖಾಸಗಿ ಬಸ್ ನಿಲ್ದಾಣ ಸಿದ್ಧವಾಗಲಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.