ADVERTISEMENT

ಚನ್ನಗಿರಿ | ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ

ಚನ್ನಗಿರಿ  ಉಬ್ರಾಣಿ ಹೋಬಳಿಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:44 IST
Last Updated 18 ಜುಲೈ 2025, 6:44 IST
ಚನ್ನಗಿರಿ ತಾಲ್ಲೂಕು ಮರವಂಜಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಕಾಣಿಸಿದೆ
ಚನ್ನಗಿರಿ ತಾಲ್ಲೂಕು ಮರವಂಜಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಕಾಣಿಸಿದೆ   

ಚನ್ನಗಿರಿ: ತಾಲ್ಲೂಕು ಉಬ್ರಾಣಿ ಹೋಬಳಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಒಂಟಿ ಸಲಗದ ಕಾಟ ಹೆಚ್ಚಾಗಿದ್ದು, ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವುದು, ನೀರು ಹರಿಸಿ  ಬೆಳೆಗಳನ್ನು ಬೆಳೆಸಲು ತೋಟಗಳಿಗೆ ಹೋಗಲು  ಭಯಪಡುವಂತಾಗಿದೆ. 

ಕುಕ್ಕುವಾಡೇಶ್ವರಿ ರಕ್ಷಿತಾ ಅರಣ್ಯ ಪ್ರದೇಶ, ಜೋಳದಹಾಳ್ ಹಾಗೂ ಮಾವಿನಕಟ್ಟೆ ಭದ್ರಾ ರಾಜ್ಯ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಒಂದು ವಾರದಿಂದ ಅಲ್ಲಲ್ಲಿ ಕಾಡಾನೆ ಕಾಣಿಸಿಕೊಳ್ಳುತ್ತಿದ್ದು, ತೋಟ, ಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ತಿಂದು, ನಾಶ ಮಾಡುತ್ತಿದೆ.

ಒಟ್ಟು 304 ಕಿ.ಮೀ. ವ್ಯಾಪ್ತಿಯಲ್ಲಿ ದಟ್ಟ ಅರಣ್ಯವಿದೆ. ಈ ಪ್ರದೇಶ ವ್ಯಾಪ್ತಿಯ ಮರವಂಜಿ, ಉಬ್ರಾಣಿ, ದುರ್ವಿಗೆರೆ, ಬಂಡಿಗುಡ್ಡ, ಮಾನಮಟ್ಟಿ, ಕಗ್ಗಿ, ಮುಗಳಿಹಳ್ಳಿ, ಚಿಕ್ಕಮಳಲಿ ತಾಂಡಾ, ಚಿಕ್ಕಮಳಲಿ, ಕೊಡಕಿಕೆರೆ, ಚಿಕ್ಕಸಂಧಿ ಮುಂತಾದ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುವ ಕಾಡಾನೆ, ರಾತ್ರಿ ವೇಳೆ ತೋಟಗಳಿಗೆ ನುಗ್ಗಿ ಅಡಿಕೆ ಮರ, ತೆಂಗು, ಮರಗಳನ್ನು ಬೀಳಿಸಿ, ಹಲಸು ಬಾಳೆಯನ್ನು ತಿಂದು, ಕೆಡವಿ ಹಾಕುತ್ತಿದೆ. ಮೆಕ್ಕೆಜೋಳ, ರಾಗಿ, ಮುಂತಾದ ಬೆಳೆಗಳನ್ನು ನಾಶ ಮಾಡಿ ಬೆಳಗಾಗುತ್ತಿದ್ದಂತೆ ಕಾಡಿಗೆ ಮರಳಿ ಹೋಗುತ್ತಿದೆ.  

ADVERTISEMENT

ಉಪಟಳ ಕೊಡುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯುವಂತೆ ರೈತರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.

‘ಈ ಅರಣ್ಯ ಪ್ರದೇಶದಲ್ಲಿ ಮೂರು ಕಾಡಾನೆಗಳು ಇದ್ದವು. ಇದರಲ್ಲಿ ಈಗಾಗಲೇ ಎರಡನ್ನು ನಮ್ಮ ಅರಣ್ಯ ಪ್ರದೇಶದ ಗಡಿ ದಾಟಿಸಲಾಗಿದೆ. ಇನ್ನೊಂದು ಕಾಡಾನೆ ಇದೆ. ಕಾಡಂಚಿನ ಗ್ರಾಮಗಳಲ್ಲಿನ ಜನರನ್ನು ಎಚ್ಚರಿಸುವ ಸಲುವಾಗಿ ಪ್ರತಿ ದಿನ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಹಾಗೆಯೇ ದಾನಿಗಳಿಂದ ಹಣ ಸಂಗ್ರಹಿಸಿ, ಪಟಾಕಿಗಳನ್ನು ಖರೀದಿಸಿ, ಪಟಾಕಿ ಸಿಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಜತೆಗೆ ರೈತರು ಕೂಡಾ ತಮ್ಮ ಜಮೀನುಗಳಲ್ಲಿ ಪಟಾಕಿ ಸಿಡಿಸಿ, ಶಬ್ದವನ್ನು ಕೂಡಾ ಮಾಡುತ್ತಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ಎಸ್. ಶ್ವೇತಾ ತಿಳಿಸಿದರು.

ಮನವಿ: ವಿದ್ಯುತ್ ತ್ರಿಫೇಸ್ ರಾತ್ರಿ ಹೊತ್ತು ಕೊಡುತ್ತಾರೆ. ಆದರೆ, ಕಾಡಾನೆ ಭಯದಿಂದ ರೈತರು ಹೋಗುತ್ತಿಲ್ಲ. ಅಷ್ಟೇ ಅಲ್ಲ, ಹಗಲು ವೇಳೆಯಲ್ಲಿ ಕೂಡಾ ರೈತರು ಗುಂಪು ಗುಂಪಾಗಿ ತೋಟಗಳಿಗೆ ಹೋಗುವಂತಾಗಿದೆ. ಕಾಡಾನೆಯನ್ನು ಸೆರೆ ಹಿಡಿದು ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಅರಣ್ಯ ಇಲಾಖೆ ಮುಂದಾಗಬೇಕಾಗಿದೆ ಎಂದು ಮರವಂಜಿ ತಾಂಡಾ ಗ್ರಾಮದ ಅಣ್ಣಪ್ಪ ಮನವಿ ಮಾಡಿದ್ದಾರೆ.

ಬಾಳೆ ಬೆಳೆಯನ್ನು ಕಾಡಾನೆ ನಾಶ ಮಾಡಿರುವುದು
ಚನ್ನಗಿರಿ ತಾಲ್ಲೂಕು ಉಬ್ರಾಣಿ ಹೋಬಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆಯ ಹೆಜ್ಜೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ  ಪರಿಶೀಲಿಸಿದರು

- ಕಾಡಂಚಿನ ಗ್ರಾಮಗಳಲ್ಲಿ ನುಗ್ಗುವ ಒಂಟಿ ಸಲಗ ಅಡಿಕೆ, ತೆಂಗು, ಬಾಳೆ, ಭತ್ತ ನಾಶ ಹಗಲು ಹೊತ್ತಿನಲ್ಲೂ ಗದ್ದೆಗೆ ಹೋಗಲು ರೈತರಿಗೆ ಭಯ

ಅನುಮತಿ ಸಿಕ್ಕ ಕೂಡಲೇ ಕಾರ್ಯಾಚರಣೆ ‘ಸದ್ಯದ ಪರಿಸ್ಥಿತಿಯಲ್ಲಿ ಆನೆ ಸೆರೆ ಕಾರ್ಯಪಡೆ (ಎಲಿಫೆಂಟ್ ಟಾಸ್ಕ್‌ಪೋರ್ಸ್) ತರಬೇತಿಯನ್ನು ಪಡೆದ ನಾಲ್ನರು ಸಿಬ್ಬಂದಿ ತಂಡ ರಚಿಸಿದ್ದು ಅವರು ಕಾಡಂಚಿನ ಗ್ರಾಮಗಳಲ್ಲಿ ಹಗಲು– ರಾತ್ರಿ ಗಸ್ತು ಮಾಡುತ್ತಿದ್ದಾರೆ. ಚಾಮರಾಜನಗರದ ಅರಣ್ಯ ಪ್ರದೇಶದಿಂದ ಚನ್ನಗಿರಿ ಅರಣ್ಯ ಪ್ರದೇಶದವರೆಗೆ ಆನೆ ಕಾರಿಡಾರ್ ಇರುವ ಕಾರಣ ಆನೆಗಳು ಬರುತ್ತವೆ. ಪುಂಡಾನೆಯನ್ನು ಸೆರೆ ಹಿಡಿಯಲು ಈಗಾಗಲೇ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ಕೂಡಲೇ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿಯಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಎಸ್. ಶ್ವೇತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.