ADVERTISEMENT

ದಾವಣಗೆರೆ: ಹೊಸ ವಿದ್ಯಾರ್ಥಿಗಳ ನೆರವಿಗೆ ಹಳೆ ವಿದ್ಯಾರ್ಥಿಗಳ ಪ್ರತಿಷ್ಠಾನ

ಆದಾಯದ ಶೇ 10ರಷ್ಟನ್ನು ಮೀಸಲಿಡಲು ನಿರ್ಧಾರ

ಸಿದ್ದಯ್ಯ ಹಿರೇಮಠ
Published 9 ಆಗಸ್ಟ್ 2025, 23:09 IST
Last Updated 9 ಆಗಸ್ಟ್ 2025, 23:09 IST
ದಾವಣಗೆರೆ ಜಿಲ್ಲೆಯ ಭಾನುವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸ್ನೇಹ ಸಂಭ್ರಮ ಚಾರಿಟಿ ಫೌಂಡೇಷನ್‌’ಗೆ ಚಾಲನೆ ನೀಡಿದ ನಿವೃತ್ತ ಶಿಕ್ಷಕರು 
ದಾವಣಗೆರೆ ಜಿಲ್ಲೆಯ ಭಾನುವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸ್ನೇಹ ಸಂಭ್ರಮ ಚಾರಿಟಿ ಫೌಂಡೇಷನ್‌’ಗೆ ಚಾಲನೆ ನೀಡಿದ ನಿವೃತ್ತ ಶಿಕ್ಷಕರು    

ದಾವಣಗೆರೆ: ಕುಗ್ರಾಮದಲ್ಲಿ ‘ಉದ್ಯೋಗ ಮೇಳ’ ಆಯೋಜಿಸಿ 400ಕ್ಕೂ ಅಧಿಕ ಗ್ರಾಮೀಣ ಯುವಕ– ಯುವತಿಯರು ಜೀವನದಲ್ಲಿ ನೆಲೆ ಕಂಡುಕೊಳ್ಳಲು ನೆರವಾಗಿದ್ದ ಈ ಊರಿನ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ಜಿಲ್ಲೆಯ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1995–96ರ ಬ್ಯಾಚ್‌ನ (7ನೇ ತರಗತಿ) 66 ಜನ ವಿದ್ಯಾರ್ಥಿಗಳು ಇದೀಗ ‘ಸ್ನೇಹ ಸಂಭ್ರಮ ಚಾರಿಟಿ ಫೌಂಡೇಷನ್‌’ ಸ್ಥಾಪಿಸುವ ಮೂಲಕ ತಮ್ಮೂರು ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದಕ್ಕೆ ಸಹಾಯಹಸ್ತ ಚಾಚಲು ಮುಂದಾಗಿದ್ದಾರೆ.

ವಿವಿಧ ಉದ್ಯೋಗದಲ್ಲಿ ಇರುವವರು ತಮ್ಮ ಮಾಸಿಕ ಸಂಬಳದಲ್ಲಿ ಹಾಗೂ ಕೃಷಿ, ವ್ಯಾಪಾರದಲ್ಲಿ ತೊಡಗಿದವರು ವಾರ್ಷಿಕ ಆದಾಯದಲ್ಲಿ ಶೇ 10ರಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ನೀಡಲು ನಿರ್ಧರಿಸಿದ್ದು, ಆರಂಭದಲ್ಲಿ ₹ 5 ಲಕ್ಷ ಕಲೆ ಹಾಕಿದ್ದಾರೆ. ಬಡ, ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಸ್ಕಾಲರ್‌ಶಿಪ್‌ ಒದಗಿಸುವುದು, ಗ್ರಾಮೀಣ ಪ್ರದೇಶದಲ್ಲೇ ತರಬೇತಿ ಶಿಬಿರಗಳನ್ನು ಆಯೋಜಿಸುವುದು ಈ ಪ್ರತಿಷ್ಠಾನದ ಉದ್ದೇಶವಾಗಿದೆ.

ADVERTISEMENT

ಹಳೆಯ ವಿದ್ಯಾರ್ಥಿಗಳ ಪೈಕಿ 11 ಜನ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಾದರಿ ಕಾರ್ಯದ ರೂವಾರಿಗಳಾಗಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ 32 ಕಂಪನಿಗಳನ್ನು ಕರೆಸಿ ತಮ್ಮೂರು ಭಾನುವಳ್ಳಿಯಲ್ಲೇ ‘ಉದ್ಯೋಗ ಮೇಳ’ ಆಯೋಜಿಸಿ 417 ಜನರ ಉದ್ಯೋಗಕ್ಕೆ ನೆರವಾಗಿದ್ದಲ್ಲದೆ, ಏಪ್ರಿಲ್‌ನಲ್ಲಿ ತಜ್ಞ ವೈದ್ಯರನ್ನು ಆಹ್ವಾನಿಸಿ ನೂರಾರು ಜನರ ಆರೋಗ್ಯ ಉಚಿತ ತಪಾಸಣೆ, ಚಿಕಿತ್ಸೆ, ರಕ್ತದಾನ ಶಿಬಿರ ನಡೆಸುವ ಮೂಲಕ ಗಮನ ಸೆಳೆದಿದ್ದರು.

‘ಗ್ರಾಮೀಣ ಪ್ರದೇಶದ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ವೃತ್ತಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ ಏರ್ಪಡಿಸುವುದು. ನೇಮಕಾತಿ ವೇಳೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಅಣಿಗೊಳಿಸುವುದು ಮಾತ್ರವಲ್ಲದೆ, ಪ್ರಾಥಮಿಕ, ಪ್ರೌಢ ಶಿಕ್ಷಣದ ಹಂತದಲ್ಲೇ ನೈತಿಕತೆ ರೂಢಿಸಿಕೊಳ್ಳುವಂತೆ ಅವರನ್ನು ಪ್ರೇರೇಪಿಸಬೇಕೆಂಬ ಉದ್ದೇಶದಿಂದ ಪ್ರತಿಷ್ಠಾನ ಸ್ಥಾಪಿಸಿ ನೋಂದಣಿ ಮಾಡಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಲೆಯ ಹಳೆಯ ವಿದ್ಯಾರ್ಥಿ, ದಾವಣಗೆರೆಯ ಜಿ.ಎಂ. ಯೂನಿವರ್ಸಿಟಿಯ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟೀಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿವಿಧ ಕಾರ್ಪೊರೇಟ್‌ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿ ಶಿಕ್ಷಣ, ಆರೋಗ್ಯ, ತರಬೇತಿ, ನೈರ್ಮಲ್ಯ ಮತ್ತಿತರ ಉತ್ತಮ ಉದ್ದೇಶಕ್ಕೆ ಅನುದಾನ ಮೀಸಲಿಡುತ್ತಿವೆ. ಇದರಲ್ಲಿ ಸ್ವಲ್ಪ ಭಾಗವನ್ನು ನಮ್ಮ ಭಾಗದ ಬಡ, ಹಿಂದುಳಿದ ಯುವಕ– ಯುವತಿಯರ ಅಭ್ಯುದಯಕ್ಕೆ ನೀಡುವಂತೆ ಮನವರಿಕೆ ಮಾಡಿ ಅನುದಾನ ತರಲು ಶ್ರಮಿಸುತ್ತೇವೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳಿಗೆ ನೆರವಾಗುವ ಗುರಿಯನ್ನು ಪ್ರತಿಷ್ಠಾನ ಹೊಂದಿದೆ’ ಎಂದು ಅವರು ವಿವರಿಸಿದರು.

ಹಳೆಯ ವಿದ್ಯಾರ್ಥಿಗಳಾದ ಎಚ್‌.ಎಂ. ಶಿವಕುಮಾರ್‌, ಡಿ.ಬಿ. ರಾಮನಗೌಡ, ಆರ್‌.ಬಿ. ಫಕೀರಪ್ಪ, ವಿಶ್ವನಾಥ, ಜಿ.ಜೆ. ಮಹದೇವಗೌಡ, ಡಿ.ಉಮೇಶ, ಬೀರಪ್ಪ, ಬಸವರಾಜ ರೆಡ್ಡಿ, ಗೀತಾ ಮತ್ತು ಕೆ.ಎಸ್‌. ಸರಳಾ ಕಾರ್ಯಕಾರಿ ಸಮಿತಿಯಲ್ಲಿದ್ದಾರೆ.

ತೇಜಸ್ವಿ ಕಟ್ಟೀಮನಿ
ನಮಗೆ ಕಲಿಸಿದ ಗುರುಗಳೇ ಈ ಪ್ರತಿಷ್ಠಾನಕ್ಕೆ ಚಾಲನೆ ನೀಡಿದ್ದಾರೆ. ನಮ್ಮ ಬ್ಯಾಚ್‌ನ 66 ಸದಸ್ಯರಲ್ಲದೇ ಶಾಲೆಯ ಒಟ್ಟು 108 ಜನ ಹಳೆಯ ವಿದ್ಯಾರ್ಥಿಗಳು ಪ್ರತಿಷ್ಠಾನದ ಕಾರ್ಯಕ್ಕೆ ಕೈಜೋಡಿಸಲಿದ್ದಾರೆ
ತೇಜಸ್ವಿ ಕಟ್ಟೀಮನಿ ಸ್ನೇಹ ಸಂಭ್ರಮ ಚಾರಿಟಿ ಪ್ರತಿಷ್ಠಾನದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.