ADVERTISEMENT

ನ್ಯಾಮತಿ: ಅಪರಿಚಿತರಿಂದ ವಂಚನೆಗೊಳಾದ ರೈತರು

ಏಲಕ್ಕಿ ಬೆಳೆಯ ಆಸೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 7:37 IST
Last Updated 12 ನವೆಂಬರ್ 2023, 7:37 IST
ಒಣಗಿರುವ ಏಲಕ್ಕಿ ಸಸಿಗಳನ್ನು ತೋರಿಸುತ್ತಿರುವ ನ್ಯಾಮತಿಯ ರೈತರು
ಒಣಗಿರುವ ಏಲಕ್ಕಿ ಸಸಿಗಳನ್ನು ತೋರಿಸುತ್ತಿರುವ ನ್ಯಾಮತಿಯ ರೈತರು   

ನ್ಯಾಮತಿ: ವ್ಯವಸಾಯದಲ್ಲಿ ಹೊಸದು ಏನಾದರೂ ಮಾಡಬೇಕು ಎಂಬ ಆಸೆಯಿಂದ ಅಡಕೆ ತೋಟದಲ್ಲಿ ಏಲಕ್ಕಿ ಗಿಡಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಲು ಹೊರಟ ರೈತರು ಅಪರಿಚಿತರಿಂದ ಪಟ್ಟಣ ಹಾಗೂ ಸುತ್ತಲಿನ ಕೆಲ ಗ್ರಾಮಗಳ 14 ಜನರ ರೈತರು ವಂಚನೆಗೆ ಒಳಗಾಗಿದ್ದಾರೆ. ಸಸಿಗಳು ಮೊಳಕೆ ಬರದೆ ರೈತರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಏಲಕ್ಕಿ ಬೆಳೆಗೆ ಉತ್ತಮ ಮಾರುಕಟ್ಟೆ ಇದೆ. ಏಲಕ್ಕಿ ಬೆಳೆದು ಲಾಭ ಗಳಿಸಬಹುದು ಎಂದು ರೈತರನ್ನು ನಂಬಿಸಿ, ಒಂದು ಗಿಡಕ್ಕೆ ₹ 88ರಂತೆ ರೈತರಿಗೆ ಸಸಿಗಳನ್ನು ಮಾರಾಟ ಮಾಡಿದ ವಂಚಕರು ಕೆಲ ರೈತರಿಗೆ ₹40,000, ₹ 50,000 ವಂಚಿಸಿದ್ದಾರೆ. 

‘ಗಿಡಗಳ ಪೋಷಣೆ ಬಗ್ಗೆ ವಾರಕ್ಕೆ ಒಮ್ಮೆ ಬಂದು ಮಾರ್ಗದರ್ಶನ ನೀಡುತ್ತೇವೆ. ಒಂದು ಗಿಡ 3 ಕೆ.ಜಿ. ಏಲಕ್ಕಿ ಕೊಡುತ್ತದೆ. ಒಂದು ಕೆಜಿಗೆ ₹ 3 ಸಾವಿರ ಬೆಲೆ ಇದೆ. ಶಿವಮೊಗ್ಗ ಮತ್ತು ಸಕಲೇಶಪುರದಲ್ಲಿ ಏಲಕ್ಕಿ ಮಾರುಕಟ್ಟೆ ಇದೆ‘ ಎಂದು ನಂಬಿಸಿ ನ್ಯಾಮತಿ, ಫಲವನಹಳ್ಳಿ, ಸಾಲಬಾಳು ಸೇರಿದಂತೆ ಕೆಲ ಗ್ರಾಮಗಳ 14 ಜನ ರೈತರಿಗೆ 300ರಿಂದ 500 ಸಸಿಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ.

ADVERTISEMENT

‘ಸಸಿಗಳನ್ನು ನೆಟ್ಟು ಒಂದು ತಿಂಗಳಾದರೂ ಒಂದು ಗಿಡ ಮೊಳಕೆ ಬಂದಿಲ್ಲ. ಆರೈಕೆ ಮಾಡಿದರೂ ಒಣಗಿ ಹೋಗಿವೆ. ಇದರಿಂದ ಆತಂಕಗೊಂಡು ಸಸಿ ಕೊಟ್ಟವರಿಗೆ ಕರೆ ಮಾಡಿದರೆ ಅಸಡ್ಡೆಯ ಉತ್ತರ ನೀಡಿ, ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದಾರೆ’ ಎಂದು ರೈತರಾದ ಕೆ. ಶಿವಕುಮಾರ, ಬಿ.ವಿ.ಸತೀಶ, ಗಾಯತ್ರಮ್ಮ ಒಳಗೊಂಡಂತೆ 14 ಜನರು  ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ರುದ್ರೇಶ, ಶ್ರೀನಿವಾಸ, ರೂಪ್ಲನಾಯ್ಕ, ಮದನ್ ಮತ್ತು ಓಂಕಾರ ಅವರ ವಿರುದ್ಧ ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಏಲಕ್ಕಿ ಸಸಿಗಳನ್ನು ಪಡೆದು ನಾನೂ ಹಣ ಕಳೆದುಕೊಂಡಿದ್ದೇನೆ’ ಎಂದು ಹಸಿರು ಸೇನೆಯ ಮುಖಂಡ ಸಾಲಬಾಳು ಎಸ್.ಎನ್. ಗೋಪಾಲನಾಯ್ಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.