ADVERTISEMENT

ಬದುಕಿನ ರಣರಂಗದಿಂದ ದೂರವಾಗಲು ಚದುರಂಗ ಆಡಿ

ರಾಜ್ಯ ಮಟ್ಟದ ಚೆಸ್‌ ಟೂರ್ನಿ ಉದ್ಘಾಟಿಸಿದ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 13:43 IST
Last Updated 20 ಜನವರಿ 2019, 13:43 IST
ದಾವಣಗೆರೆಯ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಚೆಸ್‌ ಟೂರ್ನಿಗೆ ಶಿವಮೂರ್ತಿ ಮುರುಘಾ ಶರಣರು ಕಾಯಿ ನಡೆಸುವ ಮೂಲಕ ಚಾಲನೆ ನೀಡಿದರು.
ದಾವಣಗೆರೆಯ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಚೆಸ್‌ ಟೂರ್ನಿಗೆ ಶಿವಮೂರ್ತಿ ಮುರುಘಾ ಶರಣರು ಕಾಯಿ ನಡೆಸುವ ಮೂಲಕ ಚಾಲನೆ ನೀಡಿದರು.   

ದಾವಣಗೆರೆ: ‘ಬದುಕು ರಣರಂಗ ಆಗಬಾರದು ಎಂದಾದರೆ ಬುದ್ಧಿಮತ್ತೆ ಹೆಚ್ಚಿಸುವ ಚದುರಂಗವನ್ನು ಆಡಬೇಕು’ ಎಂದು ಚಿತ್ರದುರ್ಗದ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಕಿವಿಮಾತು ಹೇಳಿದರು.

ಶಿವಯೋಗಾಶ್ರಮ ಟ್ರಸ್ಟ್‌, ದಾವಣಗೆರೆ ಚೆಸ್‌ ಕ್ಲಬ್‌, ಜೈನ್‌ ಸೋಷಿಯಲ್‌ ಗ್ರೂಪ್‌ ಹಾಗೂ ರೋಟರಿ ಕ್ಲಬ್‌ ದಾವಣಗೆರೆ ಆಶ್ರಯದಲ್ಲಿ ಲಿಂಗೈಕ್ಯ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ ಅಂಗವಾಗಿ ಭಾನುವಾರ ಗುರುಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಚೆಸ್‌ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವನ ಬದುಕು ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಸಣ್ಣ ಪುಟ್ಟ ಕಾರಣಗಳಿಗೂ ಮಾರಾಮರಿ ನಡೆಯುತ್ತಿದೆ. ಹಣದ ಹಪಾಪಪಿ, ದುರಾಸೆಗೆ ಒಳಗಾಗಿ ದುಃಖವನ್ನು ತಂದುಕೊಳ್ಳುತ್ತಿದ್ದಾರೆ. ಬದುಕನ್ನು ರಣರಂಗದಿಂದ ದೂರ ಇಡಲು ಅದಕ್ಕೆ ಸಾಂಸ್ಕೃತಿಕ ಪರಿಸರ ನಿರ್ಮಿಸಿಕೊಡಬೇಕು. ಕ್ರೀಡೆಯು ಸಾಂಸ್ಕೃತಿಕ ಪರಿಸರದ ಭಾಗವಾಗಿದೆ. ಚದುರಂಗ ಆಡುವುದರಿಂದ ಮೆದುಳಿನ ಬಳಕೆಯಾಗುತ್ತದೆ; ಅದು ಕ್ರಿಯಾಶೀಲವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಚದುರಂಗದಿಂದ ಮಕ್ಕಳು ಸ್ಮಾರ್ಟ್‌ ಆಗುತ್ತಾರೆ. ಅವರ ಬುದ್ಧಿಮತ್ತೆ ಹೆಚ್ಚುತ್ತದೆ. ಚದುರಂಗ ಬೌದ್ಧಿಕ ಆಟವಾಗಿರುವುದರಿಂದ ಪೋಷಕರು ಮಕ್ಕಳಿಗೆ ಚದುರಂಗ ಆಡಲು ಪ್ರೋತ್ಸಾಹಿಸಬೇಕು’ ಎಂದು ಸಲಹೆ ನೀಡಿದರು.

ದಾವಣಗೆರೆ ಚೆಸ್‌ ಕ್ಲಬ್‌ನ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಚೆಸ್‌ ಕ್ಲಬ್‌ನ ಉಪಾಧ್ಯಕ್ಷ ಟಿ. ಯುವರಾಜ್‌, ಕಾರ್ಯದರ್ಶಿ ಟಿ. ಕರಿಬಸಪ್ಪ ಹಾಜರಿದ್ದರು.

ನ್ಯಾಷನಲ್‌ ಅಮೆಚೂರ್‌ ಚೆಸ್‌ ಚಾಂಪಿಯನ್‌ ಆಗಿರುವ ಮೈಸೂರಿನ ಅಜಿತ್‌ ಎಂ.ಪಿ. ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಮುಕ್ತ ವಿಭಾಗದಲ್ಲಿ 70 ಆಟಗಾರರು, 16 ವರ್ಷದೊಳಗಿನವರ ವಿಭಾಗದಲ್ಲಿ 90 ಹಾಗೂ 12 ವರ್ಷದೊಳಗಿನವರ ವಿಭಾಗದಲ್ಲಿ 95 ಆಟಗಾರರು ಪಾಲ್ಗೊಂಡಿದ್ದರು.

ಪ್ರವೇಶ ಶುಲ್ಕ ಗೊಂದಲ
ಟೂರ್ನಿಗೆ ಮುಕ್ತ ವಿಭಾಗದಲ್ಲಿ ₹ 400 ಹಾಗೂ 16 ವರ್ಷದೊಳಗಿನವರ ವಿಭಾಗದಲ್ಲಿ ₹ 350 ಪ್ರವೇಶ ಶುಲ್ಕ ಹಾಗೂ ರಾಜ್ಯ ಅಸೋಸಿಯೇಷನ್‌ ಶುಲ್ಕ ₹ 50 ನಿಗದಿಪಡಿಸಲಾಗಿತ್ತು. ಪ್ರವೇಶ ಶುಲ್ಕದ ಮಾಹಿತಿ ಇಲ್ಲದೇ ಬಂದಿದ್ದ ಕೆಲವು ವಿದ್ಯಾರ್ಥಿಗಳು ಅದನ್ನು ಭರಿಸಲು ಸಾಧ್ಯವಾಗದೇ ನಿರಾಸೆಯಿಂದ ವಾಪಸ್‌ ತೆರಳಿದರು.

‘ಈಚೆಗೆ ನಡೆದ ಜಿಲ್ಲಾ ಮಟ್ಟದ ಶಾಲಾ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಪಡೆದಿದ್ದೆ. ಮುಂದಿನ ವಾರದಿಂದ ಎಸ್‌.ಎಸ್‌.ಎಸ್‌.ಪಿ ಪೂರಕ ಪರೀಕ್ಷೆ ಇದೆ. ಶಾಲೆಯಲ್ಲಿ ವಿಶೇಷ ತರಗತಿ ನಡೆಯುತ್ತಿದ್ದರೂ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕು ಎಂದು ಅದನ್ನು ಬಿಟ್ಟು ಟೂರ್ನಿಗೆ ಬಂದಿದ್ದೆ. ಶುಲ್ಕ ನಿಗದಿಗೊಳಿಸಿರುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ₹ 350 ಶುಲ್ಕವನ್ನು ಪಾವತಿಸಲು ಸಾಧ್ಯವಾಗದೇ ವಾಪಸ್‌ ಹೋಗುತ್ತಿದ್ದೇನೆ’ ಎಂದು ನಿಟುವಳ್ಳಿಯ ಸರ್ಕಾರಿ ಪ್ರೌಢಶಾಲೆ (ಆರ್‌.ಎಂ.ಎಸ್‌.ಎ) 10ನೇ ತರಗತಿ ವಿದ್ಯಾರ್ಥಿ ನರಸಿಂಹ ಬೇಸರದಿಂದಲೇ ಅಳಲು ತೋಡಿಕೊಂಡರು.

ಜಯದೇವ ಮರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವದ ಸಂದರ್ಭದಲ್ಲಿ ನಡೆಸುತ್ತಿರುವ ಟೂರ್ನಿಯಲ್ಲಿ ಪ್ರವೇಶ ಶುಲ್ಕವನ್ನು ಪಡೆಯದೇ ನಡೆಸಬಹುದಾಗಿತ್ತು ಎಂಬ ಮಾತುಗಳು ಕೆಲವು ಪೋಷಕರಿಂದ ಕೇಳಿ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.