ಬಸವಾಪಟ್ಟಣ: ಶತಮಾನಗಳ ಇತಿಹಾಸ ಹೊಂದಿರುವ ಇಲ್ಲಿನ ಚಿನ್ಮೂಲಾದ್ರಿ ಬೆಟ್ಟ ಶ್ರೇಣಿಯಲ್ಲಿ ನೆಲೆಸಿರುವ ಪಾರ್ವತಿ ದೇವಿಯ ಸ್ವರೂಪವಾದ ಚಿಕ್ಕಗುಡ್ಡದಮ್ಮನವರ ಶ್ರಾವಣ ಮಾಸದ ಕೊನೆಯ ಮಂಗಳವಾರದ ವಿಶೇಷ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ದಾಗಿನಕಟ್ಟೆ, ಮರಬನಹಳ್ಳಿ ಮತ್ತು ಯಲೋದಹಳ್ಳಿ ಕಡೆಗಳಿಂದ ಸಾವಿರಾರು ಭಕ್ತರು ಉಧೋ ಉಧೋ ಎನ್ನುತ್ತಾ ಬೆಟ್ಟ ಹತ್ತಿ ಚಿಕ್ಕಗುಡ್ಡದಮ್ಮನ ಉತ್ಸವದಲ್ಲಿ ಭಾಗವಹಿಸಿದರು.
ಉತ್ಸವದ ಅಂಗವಾಗಿ ದುರ್ಗಾ ಹೋಮ, ದೇವಿಗೆ ಪಂಚಾಮೃತ ಅಭಿಷೇಕದೊಂದಿಗೆ ದುರ್ಗಾ ಸಹಸ್ರನಾಮಾರ್ಚನೆ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ನೆರವೇರಿತು. ವಿವಾಹವಾಘ ಬಯಸುವ ಯುವಕ ಯುವತಿಯರು, ಸಂತಾನವಿಲ್ಲದ ದಂಪತಿ, ನೂತನ ಸತಿಪತಿ, ಆರೋಗ್ಯ ರಕ್ಷಣೆ ಬೇಡಿ ಬಂದವರು, ವಿವಿಧ ಸಮಸ್ಯೆಗಳಿಂದ ಬಳಲುವವರು ಸೇರಿ ಅಪಾರ ಭಕ್ತರು ದೇವಿಗೆ ಉಡಿ ತುಂಬುವುದರ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ದಾಗಿನಕಟ್ಟೆಯ ರಂಗನಾಥಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಚಿಕ್ಕಗುಡ್ಡದಮ್ಮನ ಉತ್ಸವಮೂರ್ತಿಯನ್ನು ಸೋಮವಾರ ಸಂಜೆ ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದು ಸಾಂಪ್ರದಾಯಕ ಪೂಜೆ ನೆರವೇರಿಸಲಾಯಿತು. ನಂತರ ದಾಗಿನಕಟ್ಟೆ ರಂಗನಾಥಸ್ವಾಮಿ, ಬಸವೇಶ್ವರ ಭಜನಾ ಮಂಡಲಿ, ಹರೋಸಾಗರದ ಕುಕ್ಕುವಾಡದಮ್ಮ ಭಜನಾ ಮಂಡಲಿ, ಯಲೋದಹಳ್ಳಿಯ ಮಾರುತಿ ಭಜನಾ ಮಂಡಲಿಯಿಂದ ಇಡೀ ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು ಎಂದು ದಾಗಿನಕಟ್ಟೆಯ ಟಿ.ಜಿ.ಬಸವನಗೌಡ ಮತ್ತು ಎಸ್.ಡಿ.ಗುರುಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.