ADVERTISEMENT

ಮಕ್ಕಳು ಸಹಜ ಬಾಲ್ಯ ಕಳೆಯಲಿ: ನ್ಯಾ. ಅಂಬಾದಾಸ ಕುಲಕರ್ಣಿ

‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಮುದಾಯ ಸಹಕರಿಸಲಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 12:39 IST
Last Updated 20 ಡಿಸೆಂಬರ್ 2018, 12:39 IST
ದಾವಣಗೆರೆಯಲ್ಲಿ ಗುರುವಾರ ಬಾಲಕಾರ್ಮಿಕ ಪದ್ಧತಿ ಕುರಿತು ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಅಂಬಾದಾಸ ಕುಲಕರ್ಣಿ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಗುರುವಾರ ಬಾಲಕಾರ್ಮಿಕ ಪದ್ಧತಿ ಕುರಿತು ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಅಂಬಾದಾಸ ಕುಲಕರ್ಣಿ ಉದ್ಘಾಟಿಸಿದರು   

ದಾವಣಗೆರೆ: ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯ ಬಂದು ಹೋಗುತ್ತವೆ. ಯೌವನ–ವೃದ್ಧಾಪ್ಯದಲ್ಲಿ ಬದುಕು ಚೆನ್ನಾಗಿರಬೇಕೆಂದರೆ ಬಾಲ್ಯ ಸಂತಸದಿಂದಿರಬೇಕು. ಮಕ್ಕಳಿಗೆ ಸಹಜ ಬಾಲ್ಯ ಅನುಭವಿಸುವಂಥ ವಾತಾವರಣ ನಿರ್ಮಾಣವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಅಂಬಾದಾಸ ಕುಲಕರ್ಣಿ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಗರಪಾಲಿಕೆ, ಕಾರ್ಮಿಕ ಇಲಾಖೆ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಹಯೋಗದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧ–ನಿಯಂತ್ರಣ ಕಾಯ್ದೆ 1986 ಹಾಗೂ 2016ರ ತಿದ್ದುಪಡಿ ಕುರಿತು ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಡಿ, ನಲಿಯಬೇಕಾದ ಮಕ್ಕಳನ್ನು ಕೆಲವರು ಕೆಲಸ, ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಹೀಗಾಗಿ, ಸರ್ಕಾರ ಬಾಲಕಾರ್ಮಿಕ ನಿಷೇಧ ಪದ್ಧತಿ ಜಾರಿಗೆ ತಂದಿದೆ. ಆದರೆ, ಅನಿಷ್ಟ ಪದ್ಧತಿಯ ನಿರ್ಮೂಲನೆಗೆ ಪ್ರಯತ್ನಿಸುತ್ತಿದೆ. ಇದಕ್ಕೆ ಪ್ರತಿಯೊಬ್ಬ ಪ್ರಜೆಯೂ ಸಹಕಾರ ನೀಡಬೇಕು ಎಂದು ತಿಳಿಸಿದರು.

ADVERTISEMENT

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್, ‘ಸಂವಿಧಾನ ಒಪ್ಪಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡು 70 ವರ್ಷ ಕಳೆದರೂ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿರುವುದು ಬೇಸರದ ಸಂಗತಿ. ಶಾಸಕಾಂಗ ಕಾನೂನುಗಳನ್ನು ಜಾರಿಗೆ ತಂದರೂ ಅನುಷ್ಠಾನದ ಹಂತದಲ್ಲಿ ಕಾರ್ಯಾಂಗ ಸೋಲುತ್ತಿರುವುದು ಇದಕ್ಕೆ ಕಾರಣ. ನಾಗರಿಕರೂ ಅನಿಷ್ಟ ಪದ್ಧತಿ ನಿರ್ಮೂಲನೆಗೊಳಿಸುವುದಕ್ಕೆ ಸಹಕಾರ ನೀಡಬೇಕು’ ಎಂದರು.

1980ರಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಆಗಿದ್ದು, 30 ವರ್ಷ ಕಳೆದರೂ ಬಾಲಕಾರ್ಮಿಕ ಪದ್ಧತಿ ಮುಕ್ತ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಕೊಪ್ಪಳ್ಳದಲ್ಲಿ ಒಂದು ಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಹಿಕ್ಕಿಂಗೆರೆಯನ್ನು ಬಾಲ ಕಾರ್ಮಿಕಮುಕ್ತ ಗ್ರಾಮ ಘೋಷಣೆ ಮಾಡಲಾಗಿದೆ. ಇದು ಎಲ್ಲೆಡೆಯೂ ಆಗಬೇಕು ಎಂದು ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಬಾಲಕಾರ್ಮಿಕ ಪದ್ಧತಿಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸ್ವಸಹಾಯ ಸಂಘಗಳ ಸದಸ್ಯೆಯರೊಂದಿಗೆ ಸಂವಾದ ನಡೆಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್ ಮಾತನಾಡಿದರು. ಆರ್‌ಎಲ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಪಂಕಜಾ ಉಪನ್ಯಾಸ ನೀಡಿದರು.

ಪಾಲಿಕೆ ಕಂದಾಯಾಧಿಕಾರಿ ನಾಗರಾಜ್, ಸಹಾಯಕ ಕಾರ್ಮಿಕ ಆಯುಕ್ತ ಮೊಹಮದ್ ಜಹೀರ್ ಪಾಷಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.