
ದಾವಣಗೆರೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ನೀಡಿರುವ ‘ಚೊಂಬು’ ಜಾಹೀರಾತಿಗೆ ಕಿಡಿಕಾರಿರುವ ಬಿಜೆಪಿ, ಏ.22ರಂದು ರಾಜ್ಯದಾದ್ಯಂತ ‘ಚಿಪ್ಪು ಚಳವಳಿ’ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತೆಂಗಿನಕಾಯಿಯ ‘ಚಿಪ್ಪು’ ಪ್ರದರ್ಶಿಸಿದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಕಾಂಗ್ರೆಸ್ ಪಕ್ಷವು ನಾಡಿನ ಜನತೆಗೆ ಚಿಪ್ಪು ನೀಡಿದೆ ಎಂದರು.
ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾದರೂ ಕ್ರಮ ಕೈಗೊಂಡಿಲ್ಲ. ರೈತರಿಗೆ ಬರ ಪರಿಹಾರ ನೀಡಿಲ್ಲ, ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಜೆಪಿ ಸರ್ಕಾರವಿದ್ದಾಗ ನೀಡುತ್ತಿದ್ದ ₹ 4,000 ರದ್ದು ಮಾಡಿ ರೈತರಿಗೆ ಚಿಪ್ಪು ನೀಡಿದೆ. ವಿದ್ಯಾರ್ಥಿವೇತನ ರದ್ದು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ, ಹಾಲಿನ ಪ್ರೋತ್ಸಾಹಧನ ರದ್ದು ಮಾಡಿ ಹಾಲು ಉತ್ಪಾದಕರಿಗೆ, ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ₹ 11,146 ಕೋಟಿಯನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಪರಿಶಿಷ್ಟರ ಕೈಗೂ ಈ ಸರ್ಕಾರ ಚಿಪ್ಪು ನೀಡಿದೆ. ಇದನ್ನು ಖಂಡಿಸಿ ದಾವಣಗೆರೆಯಲ್ಲಿ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
‘ಮೈ ಬ್ರದರ್’ ಪಾಲಿಸಿಯಿಂದ ದುಷ್ಕೃತ್ಯ ಹೆಚ್ಚಳ:
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭಯೋತ್ಪಾದಕರು ಹಾಗೂ ಉಗ್ರಗಾಮಿಗಳ ಓಲೈಸುತ್ತಿದೆ. ಸರ್ಕಾರದ ‘ಮೈ ಬ್ರದರ್’ ಪಾಲಿಸಿಯಿಂದ ದುಷ್ಕೃತ್ಯಗಳು ಹೆಚ್ಚಾಗಿವೆ. ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಮಾಡಿದವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಎಸ್‌ಡಿಪಿಐ, ಪಿಎಫ್‌ಐ, ಕೆಎಫ್‌ಡಿ ಮೇಲಿದ್ದ 175 ಪ್ರಕರಣಗಳನ್ನು ರದ್ದುಪಡಿಸಿ 1,600 ಜನರನ್ನು ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸೈಬರ್ ಅಪರಾಧ ಶೇ 41ರಷ್ಟು ಜಾಸ್ತಿ ಆಗಿದೆ’ ಎಂದು ಅವರು ಆರೋಪಿಸಿದರು.
‘ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ‘ವೈಯಕ್ತಿಕ’ ಎಂದು ಗೃಹ ಸಚಿವರು ಹೇಳುವ ಮೂಲಕ ಪ್ರಕರಣ ಮುಚ್ಚಿಹಾಕುವ ಕೆಲಸ ಮಾಡಲಾಗುತ್ತಿದೆ ಎಂದೂ ಅವರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.