ADVERTISEMENT

ಬಸವಾಪಟ್ಟಣ: ಕೋಟೆಹಾಳ್ ರೈತರಿಗೆ ಸೊಪ್ಪೇ ಆಸರೆ

ನೂರಾರು ವರ್ಷಗಳಿಂದ ಸೊಪ್ಪು ಬೆಳೆಯುತ್ತಿರುವ ರೈತ ಕುಟುಂಬಗಳು

ಎನ್.ವಿ.ರಮೇಶ್
Published 26 ಜನವರಿ 2022, 3:29 IST
Last Updated 26 ಜನವರಿ 2022, 3:29 IST
ಬಸವಾಪಟ್ಟಣ ಸಮೀಪದ ಕೋಟೆಹಾಳು ಗ್ರಾಮದಲ್ಲಿ ರೈತರು ಬೆಳೆದಿರುವ ವಿವಿಧ ಬಗೆಯ ಸೊಪ್ಪು
ಬಸವಾಪಟ್ಟಣ ಸಮೀಪದ ಕೋಟೆಹಾಳು ಗ್ರಾಮದಲ್ಲಿ ರೈತರು ಬೆಳೆದಿರುವ ವಿವಿಧ ಬಗೆಯ ಸೊಪ್ಪು   

ಬಸವಾಪಟ್ಟಣ: ಸಮೀಪದ ಕೋಟೆಹಾಳಿನ ಹಲವಾರು ರೈತ ಕುಟುಂಬಗಳವರು ನೂರಾರು ವರ್ಷಗಳಿಂದ ವಿವಿಧ ಬಗೆಯ ಸೊಪ್ಪಿನ ಬೆಳೆಯನ್ನೇ ತಮ್ಮ ಬದುಕಿಗೆ ಆಸರೆಯನ್ನಾಗಿ ಮಾಡಿಕೊಂಡಿದ್ದಾರೆ.

ಅರಿವೆ, ಮೆಂತ್ಯೆ, ಸಬ್ಬಸಿಗೆ, ಕೊತ್ತಂಬರಿ, ಚಿರ್ಕಸಾಲಿ, ಪಾಲಕ, ಪುದಿನ ಮುಂತಾದ ರೀತಿಯ ಸೊಪ್ಪುಗಳನ್ನು ಬೆಳೆದು ಪ್ರತಿದಿನ ಮುಂಜಾನೆ ತಾವೇ ಹಳ್ಳಿ ಹಳ್ಳಿಗಳಿಗೆ ತಿರುಗಿ ಮಾರುವ ಕಾಯಕ ನಡೆಸುತ್ತಿದ್ದಾರೆ.

ನೂರಾರು ವರ್ಷಗಳ ಹಿಂದೆ ಇಲ್ಲಿ ಗೆ ಬಂದು ನೆಲೆಸಿದ್ದ ಉಪ್ಪಾರ ಜನಾಂಗದವರು ಸೊಪ್ಪು ಬೆಳೆಯಲು ಅನುಕೂಲವಾದ ಭೂಮಿ ಮತ್ತು ಇಲ್ಲಿ ಯಾವಾಗಲೂ ಹರಿಯುವ ಹಳ್ಳದ ನೀರನ್ನು ಆಧಾರವಾಗಿಟ್ಟುಕೊಂಡು ಅದರ ಸುತ್ತಲಿನಲ್ಲಿ ವಿವಿಧ ಸೊಪ್ಪು ಬೆಳೆಯಲು ಆರಂಭಿಸಿದರು. ಆಗ ಈಗಿನಂತೆ ಬೀನ್ಸ್‌, ಕ್ಯಾರೆಟ್‌, ಕೋಸು, ಬೀಟ್‌ರೂಟ್‌, ಟೊಮೆಟೊ, ಬಟಾಣಿಯಂತಹ ತರಕಾರಿಗಳಿರಲಿಲ್ಲ. ಈ ಭಾಗದ ಜನರಿಗೆ ಕೋಟೆಹಾಳಿನ ಸೊಪ್ಪೊಂದೇ ನಿತ್ಯದ ತರಕಾರಿಯಾಗಿತ್ತು. ಕೇವಲ ಕೊಟ್ಟಿಗೆ ಗೊಬ್ಬರ ಬಳಸಿ ಸೊಪ್ಪನ್ನು ಬೆಳೆಯುತ್ತಿದ್ದರು. ಈಗ ರಾಸಾಯನಿಕ ಗೊಬ್ಬರ ಬಳಸಿ ಅತಿ ವೇಗವಾಗಿ ವಿವಿಧ ಸೊಪ್ಪನ್ನು ಬೆಳೆಯುತ್ತಿದ್ದಾರೆ. ಮಳೆಗಾಲದಲ್ಲಿ ಮೂಲಂಗಿಯನ್ನು ಇದರೊಂದಿಗೆ ಬೆಳೆಯುತ್ತಿದ್ದರು. ಈಗ ವಿವಿಧ ತರಕಾರಿಗಳು ಮಾರುಕಟ್ಟೆಗೆ ಬಂದಿದ್ದರೂ ಕೋಟೆಹಾಳಿನ ಸೊಪ್ಪಿಗೆ ಮೊದಲಿನಂತೆ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ ಇಲ್ಲಿನ ಹಿರಿಯರಾದ ನಿವೃತ್ತ ಶಿಕ್ಷಕ ತೀರ್ಥಪ್ಪ.

ADVERTISEMENT

ಈಗ ಕೋಟೆಹಾಳಿನಲ್ಲಿ 15ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಸೊಪ್ಪನ್ನು ಬೆಳೆಯುತ್ತಿದ್ದಾರೆ. ತಮಗಿರುವ ತುಂಡು ಭೂಮಿಯಲ್ಲಿ ವರ್ಷವಿಡೀ ನಿರಂತರವಾಗಿ ಬರುವ ಸೊಪ್ಪನ್ನು ಬೆಳೆದು ಮಾರುವ ಬುದ್ಧಿಮತ್ತೆ ಇವರಿಗಿದೆ. ತಮ್ಮ ಹೊಲವನ್ನು ಹಲವಾರು ಭಾಗದಲ್ಲಿ ವಿಂಗಡಿಸಿಕೊಂಡು ಒಂದಾದಮೇಲೆ ಒಂದು ಸೊಪ್ಪು ಕೊಯಿಲಿಗೆ ಬರುವಂತೆ ಬೆಳೆಯುತ್ತಿದ್ದಾರೆ. ಮೊದಲು ಹಳ್ಳದಿಂದ ನೀರನ್ನು ಹೊತ್ತು ಹಾಕುತ್ತಿದ್ದ ಕೆಲಸವನ್ನು ಈಗ ಯಂತ್ರಗಳು ಮಾಡುತ್ತಿವೆ.

‘ದಿನಂಪ್ರತಿ ತಲೆಯ ಮೇಲೆ ಬುಟ್ಟಿಗಳನ್ನು ಇಟ್ಟುಕೊಂಡು ಮಾರುತ್ತಿದ್ದೆವು. ಈಗ ವಾಹನಗಳಲ್ಲಿ ಕೊಂಡೊಯ್ದು ಮಾರುತ್ತಿದ್ದೇವೆ. ಅಗ್ಗದಲ್ಲಿ ಸಿಗುವ ಬಡವರ ತರಕಾರಿಯಾದ ಇಲ್ಲಿನ ಸೊಪ್ಪಿಗೆ ಯಾವಾಗಲೂ ಬೇಡಿಕೆ ಹೆಚ್ಚು. ಇದೇ ಗ್ರಾಮದವನಾದ ನಾನು ನಿತ್ಯ ಸೊಪ್ಪನ್ನು ಮಾರುತ್ತಿದ್ದು, ಇತರರಿಂದ ಖರೀದಿಸಿ ಸಂತೆಗಳಲ್ಲಿ ಮಾರುತ್ತಿದ್ದೇನೆ’ ಎನ್ನುತ್ತಾರೆ ಸೊಪ್ಪಿನ ವ್ಯಾಪಾರಿ ಗುರುದೇವಯ್ಯ.

‘ಮಾರುವ ಹಿಂದಿನ ದಿನವೇ ಸೊಪ್ಪನ್ನು ಕೊಯಿಲು ಮಾಡಿಕೊಂಡು ಮನೆಗೆ ತಂದು ತೊಳೆದು, ಕಟ್ಟುಗಳನ್ನಾಗಿ ಮಾಡಿ, ಸಿದ್ಧಪಡಿಸಬೇಕು. ವಿವಿಧ ಕಾರಣಗಳಿಂದ ಸೊಪ್ಪು ಮಾರಾಟವಾಗದಿದ್ದರೆ ಅದು ಹಾಳಾಗಿ ನಷ್ಟವಾಗುತ್ತದೆ. ಈ ರೀತಿ ವರ್ಷದ ಹಲವು ದಿನಗಳಲ್ಲಿ ನಷ್ಟವಾಗುತ್ತಿರುತ್ತದೆ. ಕೊರೊನಾ ಕಾಲದಲ್ಲಂತೂ ನಾವು ಬೆಳೆದ ಸೊಪ್ಪನ್ನು ಮಾರಲಾರದೇ ಅತೀವ ತೊಂದರೆಗೊಳಗಾದೆವು. ಎಲ್ಲರ ಭೋಜನಕ್ಕೆ ರುಚಿಯಾದ ಸೊಪ್ಪನ್ನು ನೀಡುವ ನಾವು ಕೊರೊನಾ ಕಾಲದಲ್ಲಿ ಸಂಕಷ್ಟ ಅನುಭವಿಸಿದಾಗ ಸಮಾಜ, ಸರ್ಕಾರ ನಮ್ಮ ಸಹಾಯಕ್ಕೆ ಬರಲಿಲ್ಲ’ ಎಂದು ಹನುಮಂತಪ್ಪ, ಕರಿಯಪ್ಪ, ಪ್ರಸನ್ನಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಇವರು ಬೆಳೆಯುವ ಸೊಪ್ಪುಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಅರಿವೆ ಸೊಪ್ಪು. ಇದರಲ್ಲಿ ಪ್ರಮುಖ ಪೋಷಕಾಂಶಗಳು ಮತ್ತು ರೋಗ ನಿರೋಧಕ ಅಂಶಗಳಿದ್ದು, ಆರೋಗ್ಯಕರವಾದ ತರಕಾರಿಯಾಗಿದೆ. ನಾರಿನಾಂಶವು ಹೆಚ್ಚಾಗಿದ್ದು, ದೇಹದ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್‌ ತಗ್ಗಿಸಲು ಸಹಕಾರಿಯಾಗಿದೆ. ಇದರಲ್ಲಿ ಎ, ಬಿ, ಸಿ, ಕೆ ವಿಟಮಿನ್‌ಗಳಿದ್ದು, ಹಳದಿ, ಕೆಂಪು, ಹಸಿರು, ಮತ್ತು ನೇರಳೆ ಬಣ್ಣದಲ್ಲಿ ದೊರೆಯುವ ಅರಿವೆ ಸೊಪ್ಪು ಪೋಷಕಾಂಶಗಳ ಆಗರವಾಗಿದೆ.

ಮೆಂತ್ಯೆ ಸೊಪ್ಪಿನಲ್ಲಿಯೂ ಎ.ಬಿ.ಸಿ ವಿಟಮಿನ್‌ಗಳಿದ್ದು, ಸಕ್ಕರೆ ಕಾಯಿಲೆಯ ನಿಯಂತ್ರಣ, ಪಿತ್ತ ಶಮನ, ಶ್ವಾಸಕೋಶಗಳ ಸಂಬಂಧಿತ ಕಾಯಿಲೆಗಳ ನಿವಾರಣೆಯಾಗುತ್ತದೆ. ಬಾಣಂತಿಯರು ಇದರ ಖಾದ್ಯ ಸೇವಿಸಿದರೆ ಎದೆಯ ಹಾಲು ಹೆಚ್ಚಲು ಅನುಕೂಲವಾಗುತ್ತದೆ. ಅದರಂತೆ ಪುದಿನ ಸೊಪ್ಪು 12 ಕಾಯಿಲೆಗಳಿಗೆ ರಾಮಬಾಣವಾಗಿದೆ. ಇತರ ಸೊಪ್ಪುಗಳ ದಿನಂಪ್ರತಿ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ ಎನ್ನುತ್ತಾರೆ ಆಹಾರ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.