ADVERTISEMENT

ದಾವಣಗೆರೆಯಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಆಕರ್ಷಕ ಗೋದಲಿ ನಿರ್ಮಾಣ* ಮಾನವೀಯತೆಯ ಬದುಕಿನ ಸಂದೇಶ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 16:20 IST
Last Updated 24 ಡಿಸೆಂಬರ್ 2021, 16:20 IST
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ದಾವಣಗೆರೆಯ ಸಂತ ಥಾಮಸರ ಚರ್ಚ್ ಆವರಣದಲ್ಲಿ ಯೇಸುವಿನ ಭಾವಚಿತ್ರವನ್ನು ಜೋಡಿಸುತ್ತಿರುವುದು ಕಂಡುಬಂತು    –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ದಾವಣಗೆರೆಯ ಸಂತ ಥಾಮಸರ ಚರ್ಚ್ ಆವರಣದಲ್ಲಿ ಯೇಸುವಿನ ಭಾವಚಿತ್ರವನ್ನು ಜೋಡಿಸುತ್ತಿರುವುದು ಕಂಡುಬಂತು    –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕ್ರಿಸ್‌ಮಸ್ ಅಂಗವಾಗಿ ನಗರದ ಕ್ರಿಶ್ಚಿಯನ್ನರ ಮನೆಗಳಲ್ಲಿ ಸಂಭ್ರಮ ಮನೆಮಾಡಿದೆ. ಹಬ್ಬ ಆಚರಣೆಗೆ ಭರದ ಸಿದ್ಧತೆ ನಡೆದಿದೆ.

ಮನೆಗಳಲ್ಲಿ ಪುಟ್ಟ ಗೋದಲಿ, ದೀಪಗಳ ಅಲಂಕಾರ ಮಾಡಲಾಗಿತ್ತು. ನಕ್ಷತ್ರದ ಆಕೃತಿ ವಿದ್ಯುದ್ದೀಪಗಳು, ಹಬ್ಬಕ್ಕೆ ಶುಭ ಕೋರುವ ಗ್ರೀಟಿಂಗ್‌ಗಳು ಗಮನ ಸೆಳೆದವು. ಬೇಕರಿಗಳಲ್ಲಿ ಕ್ರಿಸ್‌ಮಸ್ ಕೇಕ್‌ಗಳಿಗೆ ಬೇಡಿಕೆ ಇತ್ತು.

ನಗರದ ಪಿ.ಜೆ. ಬಡಾವಣೆಯಲ್ಲಿರುವ ಸೇಂಟ್ ಥಾಮಸ್‌ ಚರ್ಚ್‌ ಅನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಆಕರ್ಷಕ ಗೋದಲಿ ನಿರ್ಮಾಣ ಮಾಡಲಾಗಿದೆ. ಶುಕ್ರವಾರ ರಾತ್ರಿ ಯೇಸು ಕ್ರಿಸ್ತನ ಜನನೋತ್ಸವದ ದಿವ್ಯ ಬಲಿಪೂಜೆ ಸಂಭ್ರಮದಿಂದ ನಡೆಯಿತು. ಮಕ್ಕಳು ದೇವದೂತರ ವೇಷ ಧರಿಸಿ ನೃತ್ಯ ಮಾಡಿದರು.

ADVERTISEMENT

‘ಶನಿವಾರ ಬೆಳಿಗ್ಗೆ 8.30ಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ನಡೆಯಲಿದ್ದು, ಚರ್ಚ್‌ಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ ಸ್ಯಾನಿಟೈಸರ್ ಅನ್ನು ಚರ್ಚ್ ಹೊರಗಡೆ ಇಡಲಾಗುವುದು’ ಎಂದು ಸಂತ ಥಾಮಸರ ದೇವಾಲಯದ ಧರ್ಮಗುರು ಫಾದರ್ ಆಂಥೋನಿ ನಜೆರತ್ ತಿಳಿಸಿದರು.

‘ಚರ್ಚ್‌ನಲ್ಲಿ 300 ಮಂದಿಗೆ ಅವಕಾಶವಿದ್ದರೂ ಒಂದು ಬಾರಿಗೆ 150 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಚರ್ಚ್‌ ವೀಕ್ಷಿಸಲು ಬರುವವರಿಗೆ ಅಲ್ಲಿ ನಿಲ್ಲಲು ಅವಕಾಶ ನೀಡುವುದಿಲ್ಲ. ವೀಕ್ಷಣೆ ಮಾಡಿದ ಬಳಿಕ ಹೊರಗೆ ಹೋಗುವಂತೆ ಸೂಚಿಸಲಾಗುವುದು. ಜನಸಂದಣಿಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

3 ಹೊಸ ಶಿಲುಬೆ:‘ಚರ್ಚ್‌ಗೆ ನಗರಪಾಲಿಕೆಯಿಂದ ಮೂರು ಹೊಸ ಶಿಲುಬೆಗಳನ್ನು ಅಳವಡಿಸಲಾಗಿದೆ. ಅಲ್ಲದೇ ಸೋಲಾರ್ ಬೀದಿ ದೀಪಗಳನ್ನು ಕಲ್ಪಿಸಿಕೊಟ್ಟಿದೆ. ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಿದೆ’ ಎಂದು ಫಾದರ್ ಆಂಥೋನಿ ನಜೆರತ್ ಮಾಹಿತಿ ನೀಡಿದರು.

ಆಕರ್ಷಕ ಗೋದಲಿ:ಕ್ರಿಸ್‌ಮಸ್ ಪ್ರಯುಕ್ತ ಇಲ್ಲಿನ ಸಂತ ಥಾಮಸರ ಚರ್ಚ್‌ನಲ್ಲಿ ನಿರ್ಮಿಸಿರುವ ಗೋದಲಿ ಕಣ್ಮನ ಸೆಳೆಯಿತು. ವಿಶ್ವಗುರು ಫ್ರಾನ್ಸಿಸ್ ಅವರ ಆಣತಿಯಂತೆ ಡಿಸೆಂಬರ್ 2020ರಿಂದ 2021 ವರ್ಷವನ್ನು ಸಂತ ಜೋಸೆಫರ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದ್ದು, ಆ ಪರಿಕಲ್ಪನೆಯಲ್ಲಿ ಗೋದಲಿ ನಿರ್ಮಿಸಲಾಗಿದೆ.

ಚರ್ಚ್‌ನ ಪಕ್ಕದಲ್ಲಿಯೇ ನಿರ್ಮಿಸಿರುವ ಗೋದಲಿಯಲ್ಲಿ ಯೇಸುವಿನ ಜನನದ ಬಗೆಗಿನ ಅಂಶಗಳನ್ನು ಚಿತ್ರಿಸಲಾಗಿದೆ. ಗೋದಲಿ ಪ್ರವೇಶಿಸುತ್ತಿದ್ದಂತೆ ಮೋಡದ ವಾತಾವರಣದ ಅನುಭವಾಗುತ್ತದೆ. ಆರಂಭದಲ್ಲಿ ಯೇಸುವಿನ ತಂದೆ ಜೋಸೆಫ್ ಹಾಗೂ ತಾಯಿ ಮರಿಯಾ ಅವರಿಗೆ ನಿಶ್ಚಿತಾರ್ಥದ ದೃಶ್ಯ ಗಮನ ಸೆಳೆಯುತ್ತದೆ. ಯೇಸು ಜನನಕ್ಕೆ ಜಾಗ ಕೊಡದೇ ಕೊನೆಗೆ ದನದ ಕೊಟ್ಟಿಗೆಯಲ್ಲಿ ಯೇಸುವಿನ ಜನನವಾಗುವ ಕಲಾಕೃತಿಗಳನ್ನು ಶಿಲ್ಪಿಗಳು ಚಿತ್ರಿಸಿದ್ದಾರೆ. ಕ್ರಿಸ್‌ಮಸ್ ಬಳಿಕವೂ ಎರಡು ವಾರ ಗೋದಲಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಅಲ್ಲದೇ ಪುಟ್ಟದೊಂದು ಅರಮನೆ, ಕ್ರಿಸ್‌ಮಸ್‌ ಟ್ರೀ ಹಾಗೂ ನಕ್ಷತ್ರಗಳನ್ನು ನಿರ್ಮಿಸಿ ದೀಪಾಲಂಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.