ADVERTISEMENT

ಕ್ರಿಸ್‌ಮಸ್‌, ಹೊಸವರ್ಷಕ್ಕೆ ವಿಶೇಷ ಡ್ಯಾನ್ಸ್‌, ಪಾರ್ಟಿಗೆ ಅವಕಾಶವಿಲ್ಲ

ಸರಳ ಆಚರಣೆಗೆ ಅಡ್ಡಿ ಇಲ್ಲ: ಮಾರ್ಗಸೂಚಿ ಹೊರಡಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:29 IST
Last Updated 20 ಡಿಸೆಂಬರ್ 2020, 4:29 IST
ಕ್ರಿಸ್‌ಮಸ್‌ ಟ್ರಿ ದೀಪಗಳಿಂದ ಕಂಗೊಳಿಸುತ್ತಿರುವುದು  (ಸಾಂದರ್ಭಿಕ ಚಿತ್ರ)
ಕ್ರಿಸ್‌ಮಸ್‌ ಟ್ರಿ ದೀಪಗಳಿಂದ ಕಂಗೊಳಿಸುತ್ತಿರುವುದು  (ಸಾಂದರ್ಭಿಕ ಚಿತ್ರ)   

ದಾವಣಗೆರೆ: ಕ್ರಿಸ್‌ಮಸ್‌ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮವನ್ನು ಸರಳವಾಗಿ, ಭಕ್ತಿಯಿಂದ ಅರ್ಥಗರ್ಭಿತವಾಗಿ ಆಚರಿಸಬೇಕು. ಆದರೆ ಡಿ.ಜೆ. ಹಾಕಿ ವಿಶೇಷ ನೃತ್ಯ ಮಾಡುವುದು, ಸಾಮೂಹಿಕವಾಗಿ ಸೇರಿ ಪಾರ್ಟಿ ಮಾಡಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೋವಿಡ್ ನಿಯಂತ್ರಣ ಮತ್ತು ಜಾಗ್ರತೆಗೆ ಸಂಬಂಧಿಸಿ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ನೀಡಿದ್ದು, ಈ ಆದೇಶ ಡಿ. 31ರವರೆಗೆ ಜಾರಿಯಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಚರ್ಚ್‌ಗಳಲ್ಲಿ ಒಮ್ಮೆಲೇ ಹೆಚ್ಚು ಜನರು ಸೇರಬಾರದು. ಅಂತರ ಕಾಯ್ದುಕೊಳ್ಳಬೇಕು. ಹಸಿರು ಪಟಾಕಿ ಬಿಟ್ಟು ಬೇರೆ ಸಿಡಿಮದ್ದು ಬಳಸುವಂತಿಲ್ಲ. ಸಾರ್ವಜನಿಕ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಲಾಗಿದೆ. ಕ್ಲಬ್, ಪಬ್, ರೆಸ್ಟೊರಂಟ್ ಹಾಗೂ ಅದೇ ತೆರನಾದ ಸ್ಥಳಗಳಲ್ಲಿ ಜನ ಸೇರಿ ಪಾರ್ಟಿ ಮಾಡುವಂತಿಲ್ಲ. ಎಂದಿನಂತೆ ತೆರೆಯುವುದಕ್ಕೆ ನಿರ್ಬಂಧವಿಲ್ಲ. 65 ವರ್ಷ ಮೇಲಿನ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು. ಪ್ರಾಂಗಣಗಳಲ್ಲಿ, ಉಪಾಹಾರ ಸ್ಥಳಗಳಲ್ಲಿ ವ್ಯವಸ್ಥಿತ ಕಟ್ಟಡ ಸಮುಚ್ಚಯಗಳಲ್ಲಿ ಜನರು ಕಡ್ಡಾಯವಾಗಿ ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು.

ADVERTISEMENT

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ, ಇತರ ಇಲಾಖೆಗಳು, ಪ್ರಾಧಿಕಾರಗಳ, ಸ್ಥಳೀಯ ಸಂಸ್ಥೆಗಳು ಹೊರಡಿಸುವ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಇಲಾಖೆಗಳು ನಿಗಾ ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.