ADVERTISEMENT

ಆಗಸ್ಟ್ 5ರಿಂದ ಸಿನಿಮಾ ಮಂದಿರ, ಜಿಮ್‌ಗಳ ಆರಂಭ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 7:47 IST
Last Updated 2 ಆಗಸ್ಟ್ 2020, 7:47 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ ಕಡೆ ತೆರವು–3ರ ಅವಧಿಯಲ್ಲಿ ಇನ್ನಷ್ಟು ಸಡಿಲಗೊಳಿಸಲಾಗಿದ್ದು, ಆಗಸ್ಟ್‌ 5ರಿಂದಸಿನಿಮಾ ಮಂದಿರಗಳು, ಈಜುಕೊಳಗಳು ಹಾಗೂ ಮನೋರಂಜನಾ ಉದ್ಯಾನಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ.

ಇವುಗಳ ಜೊತೆಗೆ ಬಾರ್‌ಗಳು, ಸಭಾಂಗಣಗಳು, ಅಸೆಂಬ್ಲಿ ಹಾಲ್‌ಗಳು, ಯೋಗ ಕೇಂದ್ರಗಳು ಹಾಗೂ ಜಿಮ್ನಾಷಿಯಂಗಳ ಆರಂಭಕ್ಕೂ ಅನುಮತಿ ನೀಡಲಾಗಿದೆ. ಶಾಲಾ–ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಆಗಸ್ಟ್ 31ರವರೆಗೆ ಮುಚ್ಚಲಿದ್ದು, ಆನ್‌ಲೈನ್, ದೂರ ಶಿಕ್ಷಣ ಕಲಿಕೆಗೆ ಅನುಮತಿ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಅನುಮತಿ

ADVERTISEMENT

ಜಿಲ್ಲೆ, ತಾಲ್ಲೂಕು, ಉಪವಿಭಾಗ, ಮುನ್ಸಿಪಲ್, ಪಂಚಾಯಿತಿ ವ್ಯಾಪ್ತಿಗಳಲ್ಲಿ ಹಾಗೂ ಮನೆಗಳಲ್ಲಿ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಬಹುದು.

ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು ಮತ್ತು ಪ್ರಯಾಣದ ವೇಳೆ ಮಾಸ್ಕ್ ಕಡ್ಡಾಯ. ಮಾಸ್ಕ್ ಧರಿಸದೇ ಇದ್ದರೆ ನಗರ ಪ್ರದೇಶಗಳಲ್ಲಿ ₹200 ಮತ್ತು ಗ್ರಾಮೀಣ ಭಾಗಗಳಲ್ಲಿ ₹100 ದಂಡ ವಿಧಿಸಲಾಗುವುದು.ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿ ಅಂತರವ ಕಾಯ್ದುಕೊಳ್ಳಬೇಕು. ಮದುವೆಗಳಲ್ಲಿ 50 ಹಾಗೂ ಶವ ಸಂಸ್ಕಾರದಲ್ಲಿ 20 ಜನರಿಗಿಂತ ಹೆಚ್ಚು ಇರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್, ಗುಟ್ಕಾ, ತಂಬಾಕುಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಕೆಲಸದ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಅನುಸರಿಬೇಕು. ಅಲ್ಲದೇ ಪಾಳಿಯ ಪದ್ಧತಿಯನ್ನು ಅನುಸರಿಸಬೇಕು. ಕೆಲಸದ ಸ್ಥಳಗಳಲ್ಲಿ ವ್ಯಕ್ತಿಗಳ ನಡುವೆ, ಊಟದ ವಿರಾಮದ ವೇಳೆ ಅಂತರ ಕಾಯ್ದುಕೊಳ್ಳಬೇಕು. ಈ ಬಗ್ಗೆ ಮೇಲ್ವಿಚಾರಕರು ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.