ADVERTISEMENT

ಕುಂದವಾಡ ಕೆರೆ ಒತ್ತುವರಿ ತೆರವುಗೊಳಿಸಿ

ಯುವ ಭಾರತ್‌ ಗ್ರೀನ್ ಬ್ರಿಗೇಡ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:17 IST
Last Updated 14 ಸೆಪ್ಟೆಂಬರ್ 2021, 7:17 IST

ದಾವಣಗೆರೆ: ಕುಂದವಾಡ ಕೆರೆಯ ಒತ್ತುವರಿಗಳನ್ನು ಎರಡು ತಿಂಗಳ ಒಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಕೋರ್ಟ್‌ ಮೊರೆ ಹೋಗಲಾಗುವುದು ಎಂದು ಯುವ ಭಾರತ್‌ ಗ್ರೀನ್ ಬ್ರಿಗೇಡ್‌ ಎಚ್ಚರಿಕೆ ನೀಡಿದೆ.

ಕುಂದವಾಡ ಕೆರೆ ಒಳವ್ಯಾಪ್ತಿ 180 ಎಕರೆ ಇದೆ. ಅದರ ಬಫರ್‌ಜೋನ್‌ 30 ಮೀಟರ್‌ ಎಂದು ಕೋರ್ಟ್‌ ಆದೇಶದಲ್ಲಿ ತಿಳಿಸಿದೆ. ಈ ಬಫರ್‌ಜೋನ್‌ನಲ್ಲಿಯೇ ಸುಮಾರು 65 ಎಕರೆ ಪ್ರದೇಶ ಒತ್ತುವರಿಯಾಗಿದೆ. ಇದಲ್ಲದೇ ಇನ್ನೂ 30 ಎಕರೆ ಒತ್ತುವರಿ ಆಗಿರುವ ಗುಮಾನಿ ಇದ್ದು, ಕೆರೆಯ ಸರ್ವೆ ನಡೆಸಿದರೆ ಗೊತ್ತಾಗಲಿದೆ ಎಂದು ಗ್ರೀನ್‌ ಬ್ರಿಗೇಡ್‌ನ ನಾಗರಾಜ ಸುರ್ವೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಎಲ್ಲ ಕೆರೆಗಳ ಸುತ್ತಲಿನ 30 ಮೀಟರ್‌ ಜಾಗ ಹಾಗೂ ಆಂತರಿಕ ಜಾಗದ ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು 2012ರಲ್ಲಿಯೇ ಹೈಕೋರ್ಟ್‌ ಆದೇಶಿಸಿತ್ತು. ಈ ಆದೇಶದ ಅನ್ವಯ ಕುಂದವಾಡ ಕೆರೆಯ ಹದ್ದುಬಸ್ತು ಮಾಡಬೇಕು. ಅಕ್ರಮ ಲೇಔಟ್‌, ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು
ಆಗ್ರಹಿಸಿದರು.

ADVERTISEMENT

ಸೈಕಲ್‌ ಟ್ರ್ಯಾಕ್‌ಗೆ ಅವಕಾಶವಿಲ್ಲ: ‘ಅಭಿವೃದ್ಧಿ ನೆಪದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕುಂದವಾಡ ಕೆರೆಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೆರೆಯ ನೀರು ಸಂಗ್ರಹ ಪ್ರದೇಶವನ್ನು ಕಡಿಮೆಗೊಳಿಸುತ್ತಿದ್ದಾರೆ. ಸುತ್ತ ಪ್ಲಾಸ್ಟಿಕ್‌ ಬಳಸುತ್ತಿದ್ದಾರೆ ಎಂದು ಹೈಕೋರ್ಟ್‌ಗೆ ಹೋಗಿದ್ದೆವು. ಮಾರ್ಚ್‌ನಲ್ಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತೇವೆ ಎಂದು ಸ್ಮಾರ್ಟ್‌ ಸಿಟಿಯವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅದರಂತೆ ಜುಲೈಯಲ್ಲಿ ತಡೆಯಾಜ್ಞೆ ತೆರವಾಗಿತ್ತು’ ಎಂದು ತಿಳಿಸಿದರು.

‘ಸೀಪೇಜ್‌ ಇರುವಲ್ಲಿ ಮಾತ್ರ ಪ್ಲಾಸ್ಟಿಕ್‌ ಬಳಸುತ್ತೇವೆ ಎಂದು ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿಯವರು ತಿಳಿಸಿದ್ದಾರೆ. ಸೈಕಲ್‌ ಟ್ರ್ಯಾಕ್‌ ಮಾಡದಂತೆ ಹೈಕೋರ್ಟ್‌ ಆಗಸ್ಟ್‌ 13ರಂದು ಆದೇಶ ನೀಡಿದೆ’ ಎಂದು ಹೇಳಿದರು.

‘ಕುಂದವಾಡ ಕೆರೆಯೇ ಅಲ್ಲ. ಅದು ಟ್ಯಾಂಕ್‌ ಅಂದರೆ ನೀರು ಸಂಗ್ರಹಾಗಾರ ಎಂದು ಮೊದಲು ಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿಯವರು ವಾದಿಸಿದ್ದರು. ನಾವು ಅದರ ದಾಖಲೆಗಳನ್ನು ಹುಡುಕಿ ತೆಗೆದು ಸಲ್ಲಿಸಿದ ಮೇಲೆ ಕೆರೆ ಎಂಬುದು ಸಾಬೀತಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ರಿಗೇಡ್‍ನ ಗಿರೀಶ್ ದೇವರಮನೆ, ಮಂಜುನಾಥ್ ನೆಲ್ಲಿ, ಪ್ರಸನ್ನ ಬೆಳೆಕೆರೆ, ಎಸ್‌. ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.