ADVERTISEMENT

ಮನವಿ ಸಲ್ಲಿಕೆಗೆ ಸಿಗದ ಅವಕಾಶ: ಮುಖ್ಯಮಂತ್ರಿ ಕಾರು ತಡೆದ ರೈತರು

ಪೊಲೀಸರ ವಿರುದ್ಧ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 9:22 IST
Last Updated 16 ಜೂನ್ 2025, 9:22 IST
   

ದಾವಣಗೆರೆ: ಮನವಿ ಸಲ್ಲಿಸಲು ಅವಕಾಶ ನೀಡದ ಪೊಲೀಸರ ವರ್ತನೆಯಿಂದ ಅಸಮಾಧಾನಗೊಂಡ ರೈತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ತಡೆದು ಆಕ್ರೋಶ ಹೊರಹಾಕಿದರು. ರೈತರ ಅಹವಾಲು ಆಲಿಸಿದ ಸಿದ್ದರಾಮಯ್ಯ, ಬಳಿಕ ಪ್ರಯಾಣ ಮುಂದುವರಿಸಿದರು.

ನಗರದ ಸರ್ಕೀಟ್‌ ಹೌಸ್‌ನಲ್ಲಿ ಸೋಮವಾರ ಪೊಲೀಸರ ಗೌರವ ವಂದನೆ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರ್ವಜನಿಕರ ಅಹವಾಲು ಆಲಿಸಲು ಮುಂದಾದರು. ಈ ವೇಳೆ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿಯ ರೈತರ ನಿಯೋಗವನ್ನು ಪೊಲೀಸರು ತಡೆದಿದ್ದು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತು.

ಸರ್ಕೀಟ್‌ ಹೌಸ್‌ನಿಂದ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನು ರೈತರು ಏಕಾಏಕಿ ತಡೆದು ಮನವಿ ಸ್ವೀಕರಿಸುವಂತೆ ಪಟ್ಟುಹಿಡಿದರು. ಮುಖ್ಯಮಂತ್ರಿಯ ಕಾರು ಚಾಲನೆ ಮಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ರೈತರ ಮನವೊಲಿಸಲು ಪ್ರಯತ್ನಿಸಿದರು.

ADVERTISEMENT

‘ಜಿಲ್ಲೆಯ 538 ಕೆರೆಗಳಲ್ಲಿ 100 ಕೆರೆಗಳ ಹೂಳು ತೆಗೆಯಲಾಗಿದೆ. ಉಳಿದ ಕೆರೆಗಳ ಹೂಳು ತೆಗೆದರೆ ರೈತರಿಗೆ ಅನುಕೂಲವಾಗಲಿದೆ. ಜಲ ಸಂರಕ್ಷಣೆಯ ದೃಷ್ಟಿಯಿಂದ ಕೆರೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಇದಕ್ಕೆ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಪೊಲೀಸರು ಅವಕಾಶ ಮಾಡಿಕೊಡಲಿಲ್ಲ’ ಎಂದು ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿಯ ರಾಜ್ಯ ಸಂಚಾಲಕ ಬಲ್ಲೂರು ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿಯೇ ರೈತರನ್ನು ಪೊಲೀಸರು ಅವಮಾನಿಸಿದ್ದಾರೆ. ರೈತರನ್ನು ಎಳೆದಾಡಿದ ಹಾಗೂ ಹಲ್ಲೆಗೆ ಯತ್ನಿಸಿದ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.