ADVERTISEMENT

ಸಿಎಂ ಸ್ಥಾನಕ್ಕೆ ಪರಮೇಶ್ವರ್‌ ಪರಿಗಣಿಸಿ: ಎನ್‌. ರುದ್ರಮುನಿ

ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹ, ಹೋರಾಟ ನಡೆಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:21 IST
Last Updated 4 ಡಿಸೆಂಬರ್ 2025, 6:21 IST
ಎನ್‌.ರುದ್ರಮುನಿ
ಎನ್‌.ರುದ್ರಮುನಿ   

ದಾವಣಗೆರೆ: ಮುಖ್ಯಮಂತ್ರಿ ಬದಲಾವಣೆ ಮಾಡುವ ಪರಿಸ್ಥಿತಿ ನಿರ್ಮಾಣವಾದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಯಕರಿಗೆ ಅವಕಾಶ ಕಲ್ಪಿಸಬೇಕು. ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಈ ಹುದ್ದೆಗೆ ಪರಿಗಣಿಸಬೇಕು ಎಂದು ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಎನ್‌. ರುದ್ರಮುನಿ ಒತ್ತಾಯಿಸಿದರು.

‘ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದರು. ಗೃಹ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಪರಿಸ್ಥಿತಿ ಸೃಷ್ಟಿಯಾದರೆ ಜಿ. ಪರಮೇಶ್ವರ ಅವರಿಗೆ ಈ ಅವಕಾಶ ಸಿಗಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮಾಜಿ ಸಚಿವರಾದ ಬಿ. ಬಸವಲಿಂಗಪ್ಪ, ಕೆ.ಎಚ್‌. ರಂಗನಾಥ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದೆ. ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಯಕರಿಗೆ ಈವರೆಗೆ ಮುಖ್ಯಮಂತ್ರಿ ಗಾದಿ ಸಿಕ್ಕಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಈ ನಿಟ್ಟಿನಲ್ಲಿ ಆಲೋಚನೆ ಮಾಡುವುದು ಒಳಿತು’ ಎಂದು ಮಹಾಸಭಾದ ಗೌರವಾಧ್ಯಕ್ಷ ಎಸ್. ಶೇಖರಪ್ಪ ಒತ್ತಾಯಿಸಿದರು.

ADVERTISEMENT

‘ಲಿಂಗಾಯತರು, ಬ್ರಾಹ್ಮಣರು, ಒಕ್ಕಲಿಗರೂ ಸೇರಿದಂತೆ ಹಿಂದುಳಿದ ವರ್ಗದ ನಾಯಕರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಈ ಅವಕಾಶ ಸಿಕ್ಕಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಸಮುದಾಯದ ನಾಯಕರನ್ನು ಪರಿಗಣಿಸದೇ ಇದ್ದರೆ ಹೋರಾಟ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎ.ಡಿ. ಕೊಟ್ರಬಸಪ್ಪ, ಮುಖಂಡರಾದ ಜಯಣ್ಣ, ಟಿ.ಎಸ್. ರಾಮಯ್ಯ, ಸಾರಥಿ ಬಸವರಾಜ್ ಹಾಜರಿದ್ದರು.