ADVERTISEMENT

ಮೆಟ್ರೊ ದರ ಏರಿಕೆಯು ಕೇಂದ್ರ ಸರ್ಕಾರದ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 13:06 IST
Last Updated 9 ಫೆಬ್ರುವರಿ 2026, 13:06 IST
ಸಿದ್ದರಾಮಯ್ಯ, ಮುಖ್ಯಮಂತ್ರಿ 
ಸಿದ್ದರಾಮಯ್ಯ, ಮುಖ್ಯಮಂತ್ರಿ    

ಹರಿಹರ (ದಾವಣಗೆರೆ): ‘ನಮ್ಮ ಮೆಟ್ರೊ’ ದರ ಏರಿಕೆ ಮಾಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ನಿಯೋಜಿಸಿದ ‘ಬಿಎಂಆರ್‌ಸಿಎಲ್‌’ ಅಧ್ಯಕ್ಷರು ಕೈಗೊಳ್ಳುತ್ತಾರೆ. ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರ ಯಾವುದೇ ಶಿಫಾರಸು ಮಾಡಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮೆಟ್ರೊ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಸಂಸದ ತೇಜಸ್ವಿ ಸೂರ್ಯ ಮಾಡಿದ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಭಾರತ ಮತ್ತು ಅಮೆರಿಕ ನಡುವೆ ಆಗಿರುವ ಒಪ್ಪಂದದಿಂದ ರೈತರಿಗೆ ಅನ್ಯಾಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾದ ಒತ್ತಡಕ್ಕೆ ಮಣಿದಿದ್ದಾರೆ’ ಎಂದು ದೂರಿದರು.

‘ವಾಲ್ಮೀಕಿ ಸಮುದಾಯದ ಇಬ್ಬರು ಸಚಿವರು ಕಾರಣಾಂತರಗಳಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಸೃಷ್ಟಿಯಾಯಿತು. ಸಚಿವ ಸ್ಥಾನ ನೀಡುವಂತೆ ಸಮುದಾಯ ಬೇಡಿಕೆ ಇಟ್ಟಿದೆ. ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಪರಿಗಣಿಸಲಾಗುವುದು’ ಎಂದರು.

‘ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅವರು ನನ್ನನ್ನು ಭೇಟಿ ಮಾಡಿಲ್ಲ. ಬಜೆಟ್‌ ಮಂಡನೆಗೆ ಶೀಘ್ರವೇ ದಿನ ನಿಗದಿಪಡಿಸಲಾಗುವುದು’ ಎಂದು ತಿಳಿಸಿದರು. ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.