ದಾವಣಗೆರೆ: ಭತ್ತ, ಮೆಕ್ಕೆಜೋಳ ಹಾಗೂ ಅಡಿಕೆ ಸೇರಿ ತೋಟಗಾರಿಕೆ ಬೆಳೆಗಳನ್ನೇ ಮುಖ್ಯವಾಗಿ ಬೆಳೆಯುತ್ತಿರುವ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಾಫಿ ಬೆಳೆಯ ಪ್ರಮಾಣವೂ ಹೆಚ್ಚುತ್ತಿದೆ. ಆ ಮೂಲಕ ಜಿಲ್ಲೆಯಲ್ಲೂ ಕಾಫಿ ಬೆಳೆಯ ಘಮಲು ಹರಡುತ್ತಿದೆ.
ರಾಜ್ಯದ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಾಫಿ ಬೆಳೆಯಲಾಗುತ್ತಿದೆ. ಜೊತೆಗೆ ಶಿವಮೊಗ್ಗ ಸೇರಿದಂತೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ರೈತರು ಕಾಫಿ ಬೆಳೆಯನ್ನು ನೆಚ್ಚಿಕೊಂಡಿದ್ದು, ದಾವಣಗೆರೆ ಜಿಲ್ಲೆಗೂ ವ್ಯಾಪ್ತಿ ವಿಸ್ತರಣೆಯಾಗಿದೆ.
‘ಐದಾರು ವರ್ಷಗಳಿಂದ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳಲ್ಲಿ ರೈತರು ಅಡಿಕೆ ಗಿಡಗಳ ಮಧ್ಯದಲ್ಲಿ ಅಂತರ ಬೆಳೆಯಾಗಿ ಕಾಫಿ ಬೆಳೆಯುತ್ತಿದ್ದಾರೆ. ಈ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ 40ಕ್ಕೂ ಹೆಚ್ಚು ಹೆಕ್ಟೇರ್‌ಗಳಲ್ಲಿ ಬೆಳೆದಿರುವ ಕಾಫಿ ಬೆಳೆಯು ಈಗಾಗಲೇ ಫಸಲು ನೀಡುತ್ತಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.
‘ಕಾಫಿ ಬೆಳೆಯು ಗಿಡ ನೆಟ್ಟ 2–3 ವರ್ಷದ ನಂತರ ಫಸಲು ನೀಡಲು ಆರಂಭಿಸುತ್ತದೆ. 4–5 ವರ್ಷಗಳ ಹಿಂದೆ ಕಾಫಿ ಕೃಷಿ ಕೈಗೊಂಡಿದ್ದವರು ಈಗಾಗಲೇ ಉತ್ತಮ ಇಳುವರಿ ಹಾಗೂ ಆದಾಯ ಕಾಣುತ್ತಿದ್ದಾರೆ. ಅವರನ್ನೇ ಮಾದರಿಯಾಗಿಸಿಕೊಂಡು ಕಳೆದ 2–3 ವರ್ಷಗಳಿಂದ ಕಾಫಿ ಬೆಳೆಯಲು ಮುಂದಾಗುವವರ ಪ್ರಮಾಣ ದೊಡ್ಡಮಟ್ಟದಲ್ಲಿದೆ. ಪ್ರಸಕ್ತ ವರ್ಷ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲೇ 100ಕ್ಕೂ ಹೆಚ್ಚು ಎಕರೆಯಲ್ಲಿ ರೈತರು ಕಾಫಿ ಸಸಿ ತರಿಸಿ ನೆಟ್ಟಿದ್ದಾರೆ. ಕೆಲ ರೈತರಿಗೆ ನಾನೇ ಸಸಿ ತರಿಸಿಕೊಟ್ಟಿದ್ದೇನೆ’ ಎನ್ನುತ್ತಾರೆ ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ರೈತ ಎಸ್.ಕೆ. ಚಂದ್ರಶೇಖರ್.
‘ಕಾಫಿ ಗಿಡಗಳಿಗೆ ನೆರಳು ಅಗತ್ಯ. ಹೀಗಾಗಿ 3 ಎಕರೆ ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಕಾಫಿ ಬೆಳೆದಿದ್ದೇನೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಫಸಲು ನೀಡುತ್ತದೆ. 15–20 ದಿನಕ್ಕೊಮ್ಮೆ ಹಣ್ಣು ಕೀಳುತ್ತೇವೆ (ಕೊಯ್ಲು). ಈಗಾಗಲೇ 4 ಬಾರಿ ಹಣ್ಣು ಕಿತ್ತಿದ್ದು, ಅವುಗಳನ್ನು ಒಣಗಿಸಿ ಮಾರಾಟ ಮಾಡುತ್ತೇವೆ. ಕ್ವಿಂಟಲ್‌ಗೆ ₹ 25,000ದವರೆಗೆ ದರ ದೊರೆಯುತ್ತಿದೆ. ಒಣಗಿಸಿ ಸಿಪ್ಪೆ ತೆಗೆದು ಕಾಫಿ ಬೀಜ ಮಾರಾಟ ಮಾಡಿದರೆ ಹೆಚ್ಚಿನ ಆದಾಯ (ಕ್ವಿಂಟಲ್‌ಗೆ ₹ 35,000) ದೊರೆಯುತ್ತದೆ. ಆದರೆ, ಅದಕ್ಕೆ ಹೆಚ್ಚಿನ ಸಮಯ ಹಾಗೂ ಕೌಶಲ ಬೇಡುವುದರಿಂದ ನಾವು ಒಣಗಿಸಿ ನೇರವಾಗಿ ಮಾರಾಟ ಮಾಡುತ್ತೇವೆ’ ಎಂದು ಅವರು ವಿವರಿಸಿದರು.
ಚಿಕ್ಕಮಗಳೂರು ಭಾಗದಲ್ಲಿ ‘ಅರೇಬಿಕಾ’ ಹಾಗೂ ‘ರೋಬಸ್ಟಾ’ ತಳಿಯ ಗಿಡಗಳನ್ನು ಹೆಚ್ಚು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಇಲ್ಲಿನ ವಾತಾವರಣಕ್ಕೆ ಅನುಕೂಲವಾಗುವ ‘ಚಂದ್ರಗಿರಿ’ ತಳಿಯನ್ನು ರೈತರು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.
‘ರೈತರು ಅಡಿಕೆ ಬೆಳೆಯನ್ನು ಭಾರಿ ಪ್ರಮಾಣದಲ್ಲಿ ನೆಚ್ಚಿಕೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ದರ ಕುಸಿತವಾಗಬಹುದು. ಹೀಗಾಗಿ ರೈತರು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಪರಿಣಾಮವಾಗಿ ರೈತರು ಕಾಫಿ, ಏಲಕ್ಕಿ, ಕಾಳು ಮೆಣಸು ಬೆಳೆಗಳತ್ತಲೂ ಕಣ್ಣು ಹಾಯಿಸುತ್ತಿದ್ದಾರೆ’ ಎಂದು ಸಾಸ್ವೆಹಳ್ಳಿ ಹೋಬಳಿಯ ಸಹಾಯಕ ತೋಟಗಾರಿಕಾ ಅಧಿಕಾರಿ ರಮೇಶ್ ಇಪ್ಪಿಕೊಪ್ಪ ಹೇಳುತ್ತಾರೆ.
‘ಕಾಫಿಯು 20ರಿಂದ 30 ವರ್ಷದ ಬಹು ವಾರ್ಷಿಕ ಬೆಳೆಯಾಗಿದೆ. ಗಿಡಗಳಿಗೆ ಗೊಬ್ಬರ ಹಾಕುವುದು, ವರ್ಷಕ್ಕೊಮ್ಮೆ ಕೊಂಬೆ ಸವರುವುದು ಹಾಗೂ ಡ್ರಿಪ್ ಅಥವಾ ಸ್ಪ್ರಿಂಕ್ಲರ್ ಮೂಲಕ 4–5 ದಿನಕ್ಕೊಮ್ಮೆ ನೀರುಣಿಸುವ ಮೂಲಕ ನಿರ್ವಹಿಸಬಹುದು’ ಎಂದು ಅವರು ತಿಳಿಸಿದರು.
ಈ ಭಾಗದ ವಾತಾವರಣಕ್ಕೆ ಕಾಫಿ ಬೆಳೆ ಉತ್ತಮ ಫಸಲು ನೀಡುತ್ತಿದೆ. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಹೋಬಳಿಯ ಬೆನಕನಹಳ್ಳಿ, ಚಿಕ್ಕಬಾಸೂರು, ಬೈರನಹಳ್ಳಿ, ಕ್ಯಾಸಿನಕೆರೆ, ಬೀರಗೊಂಡನಹಳ್ಳಿ, ಲಿಂಗಾಪುರ ಮತ್ತು ಹೊಸಹಳ್ಳಿ ಭಾಗದಲ್ಲಿ ಕಾಫಿ ಬೆಳೆಯುತ್ತಿದ್ದಾರೆ ಎಂದು
ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಜಿ.ಪಿ ತಿಳಿಸಿದರು.
ಜಿಲ್ಲೆಯಲ್ಲಿ ಕಾಫಿ ಕಾಳು ಮೆಣಸು ಬೆಳೆ ಬೆಳೆದ ಹಲವು ರೈತರು ಆರ್ಥಿಕವಾಗಿ ಲಾಭ ಕಂಡಿದ್ದಾರೆ. ಬೆಳೆಗಾರರಿಗೆ ಇಲಾಖೆಯಿಂದ ಅಗತ್ಯ ಸಲಹೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆರಾಘವೇಂದ್ರ ಪ್ರಸಾದ್ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಚನ್ನಗಿರಿ ತಾಲ್ಲೂಕಿನಲ್ಲಿ ರೈತರು ಕಾಫಿ ಮಾತ್ರವಲ್ಲದೆ 250ರಿಂದ 300 ಹೆಕ್ಟೇರ್‌ನಲ್ಲಿ ಕಾಳುಮೆಣಸನ್ನೂ ಬೆಳೆಯುತ್ತಿದ್ದಾರೆ. ಇಲಾಖೆಯಿಂದ ಕಾಳುಮೆಣಸು ಬೆಳೆಗೆ ಸಬ್ಸಿಡಿಯನ್ನೂ ನೀಡಲಾಗುತ್ತಿದೆಶ್ರೀಕಾಂತ್ ಕೆ.ಎಸ್.ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಒಟ್ಟು 7 ಎಕರೆಯಲ್ಲಿ ಕಾಫಿ ಬೆಳೆ ಬೆಳೆದಿದ್ದೇನೆ. ಕಾಫಿ ಹಣ್ಣನ್ನು ಒಣಗಿಸಿ ಮಾರಾಟ ಮಾಡಿದ್ದು ಕ್ವಿಂಟಲ್‌ಗೆ ₹ 25000 ದರ ಸಿಕ್ಕಿದೆ. ವ್ಯಾಪಾರಿಗಳೇ ಬೆಳೆಗಾರರಿಂದ ನೇರವಾಗಿ ಒಣಗಿದ ಕಾಫಿ ಹಣ್ಣು ಖರೀದಿಸುತ್ತಿದ್ದಾರೆಎಂ.ಪಿ.ಸ್ವಾಮಿ ರೈತ ಬೈರನಹಳ್ಳಿ ಹೊನ್ನಾಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.