ADVERTISEMENT

ಕಾಲೇಜು ಅಂಗಳದಲ್ಲಿ ತಿನಿಸುಗಳ ಘಮ

‘ಎವಿಕೆ ಸ್ವಾದ’ ಆಹಾರ ಮೇಳದಲ್ಲಿ ಖಾದ್ಯ ತಯಾರಿಸಿ ಸಂಭ್ರಮಿಸಿ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:16 IST
Last Updated 20 ಸೆಪ್ಟೆಂಬರ್ 2025, 5:16 IST
ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿನಿಯರು ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿ ಗಮನ ಸೆಳೆದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿನಿಯರು ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿ ಗಮನ ಸೆಳೆದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಮನೆಯಲ್ಲೇ ಸಿದ್ಧಪಡಿಸಿ ತಂದಿದ್ದ ಜಾಮೂನಿನ ಬಿಸಿ ಇನ್ನೂ ಆರಿರಲಿಲ್ಲ. ಪಕ್ಕದಲ್ಲೇ ಇದ್ದ ಜಿಲೇಬಿಯ ಬಣ್ಣ ಕಣ್ಮನ ಸೆಳೆಯುತ್ತಿತ್ತು. ಮೊಹರಂ ಹಬ್ಬದಲ್ಲಷ್ಟೇ ಸಿಗುತ್ತಿದ್ದ ‘ಚೋಂಗೆ’ ಬಾಯಲ್ಲಿ ನೀರೂರಿಸುತ್ತಿತ್ತು. ಬಾಣಲೆಯಿಂದ ಮೇಲೆದ್ದು ಪಾತ್ರೆಗೆ ಬಿದ್ದಿದ್ದ ‘ಬನಾನ 65’ಗೆ ಮನ ಸೋಲುತ್ತಿತ್ತು.

ನಿತ್ಯ ಶೈಕ್ಷಣಿಕ ಚಟುವಟಿಕೆಯಿಂದ ಕೂಡಿರುತ್ತಿದ್ದ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಶುಕ್ರವಾರ ಭಿನ್ನವಾಗಿ ಕಾಣುತ್ತಿತ್ತು. ‘ಎವಿಕೆ ಸ್ವಾದ’ ಆಹಾರ ಮೇಳದಲ್ಲಿ ತರಹೇವಾರಿ ಖಾದ್ಯಗಳು ತಿನಿಸು ಪ್ರಿಯರನ್ನು ಆಕರ್ಷಿಸಿದವು. ಹಳ್ಳಿ ಮನೆಯ ರೊಟ್ಟಿಯಿಂದ ಸ್ಟಾರ್‌ ಹೋಟೆಲ್‌ನ ಸ್ಯಾಂಡ್ವಿಚ್‌, ಕ್ರಿಮ್‌ ಕಸ್ಟರ್ಡ್‌ವರೆಗೆ ತರಹೇವಾರಿ ಖಾದ್ಯಗಳು ತಿಂಡಿಪೋತರ ಹೊಟ್ಟೆ ಸೇರಿದವು.

ಕಾಲೇಜು ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಆಹಾರ ಮೇಳದಲ್ಲಿ 63 ಮಳಿಗೆಗಳಿದ್ದವು. ಪದವಿ ವಿದ್ಯಾರ್ಥಿನಿಯರು ಆಹಾರ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆಹಾರದ ಹೊಸತನ, ರುಚಿ, ತಯಾರಿಸುವ ವಿಧಾನ, ಮಾರಾಟದ ತಂತ್ರಗಾರಿಕೆಯ ಆಧಾರದ ಮೇರೆಗೆ ಬಹುಮಾನವನ್ನು ಇಡಲಾಗಿತ್ತು.

ADVERTISEMENT

‘ಆಹಾರ ಮೇಳಕ್ಕೆ ಐದು ದಿನಗಳಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಐವರು ಗೆಳತಿಯರು ಒಗ್ಗೂಡಿ ಖಾದ್ಯ ಆಯ್ಕೆ ಮಾಡಿಕೊಂಡೆವು. ಪ್ರತಿಯೊಬ್ಬರು ಒಂದೊಂದು ತಿನಿಸನ್ನು ಮನೆಯಲ್ಲೇ ಸಿದ್ಧಪಡಿಸಿ ಮೇಳಕ್ಕೆ ತಂದಿದ್ದೇವೆ. ರುಚಿಕಟ್ಟಾದ ಅಡುಗೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಆಹಾರ ಮೇಳದಲ್ಲಿ ಪಾಲ್ಗೊಂಡಿರುವುದು ಖುಷಿ ಕೊಟ್ಟಿದೆ’ ಎಂದು ಸಂತಸ ಹಂಚಿಕೊಂಡರು 2ನೇ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಅಮೂಲ್ಯ.

ಪ್ರತಿ ಮಳಿಗೆಗೆ ಒಂದೊಂದು ಹೆಸರು ಇಡಲಾಗಿತ್ತು. ‘ಹಳ್ಳಿ ಮನೆ’, ‘ಬಂಜಾರ ಸೊಗಡು’, ‘ರುಚಿಪಾಕ’, ‘ಗಿಚ್ಚಿ ಗಿಲಿ–ಗಿಲಿ ಗಿರ್ಮಿಟ್‌’, ‘ಬ್ಯಾಕ್‌ ಬೆಂಚರ್ಸ್‌’ನಂತಹ ಮಳಿಗೆಯ ಹೆಸರುಗಳು ಗಮನ ಸೆಳೆದವು. ಪ್ರತಿ ಮಳಿಗೆಯ ಎದುರು ಖಾದ್ಯ ಹಾಗೂ ದರವನ್ನು ಪ್ರದರ್ಶಿಸಲಾಗಿತ್ತು. ಇಷ್ಟದ ಆಹಾರದ ರುಚಿ ನೋಡುತ್ತ, ವಿಮರ್ಶೆ ಮಾಡುತ್ತ ವಿದ್ಯಾರ್ಥಿನಿಯರು ಸಂಭ್ರಮಿಸಿದರು.

ಆಹಾರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಕೆ.ಎ. ಗಿರಿಜಮ್ಮ, ಹಳೆಯ ವಿದ್ಯಾರ್ಥಿನಿ ಕೆ.ಎಂ. ಇಂದಿರಾ, ಎಚ್‌. ಗೀತಾಂಜಲಿ, ಪ್ರಭಾವತಿ ಹಾಜರಿದ್ದರು.

ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಆಹಾರ ಮೇಳದಲ್ಲಿ ‘ಬಂಜಾರ ಸೊಗಡಿ’ನ ಖಾದ್ಯಗಳನ್ನ ಸಿದ್ಧಪಡಿಸಿದ ವಿದ್ಯಾರ್ಥಿನಿಯರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಇದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಆಹಾರದ ಪಾತ್ರವೂ ಇದೆ. ಆರೋಗ್ಯ ಕಾಪಾಡುವ ಅಡುಗೆ ಕಡೆಗೆ ಒಲವು ಬೆಳೆಸಿಕೊಳ್ಳಿ
ಕಮಲಾ ಸೊಪ್ಪಿನ್‌ ಪ್ರಾಂಶುಪಾಲರು ಎವಿಕೆ ಮಹಿಳಾ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.