ADVERTISEMENT

ಪರಿಶಿಷ್ಟರ ಸಮಸ್ಯೆ ಬಗೆಹರಿಸಲು ಬದ್ಧ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಓಲೇಕಾರ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 2:28 IST
Last Updated 23 ಫೆಬ್ರುವರಿ 2021, 2:28 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಆಯೋಜಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಸಕ ನೆಹರು ಚ. ಓಲೇಕಾರ ಪುಷ್ಪನಮನ ಸಲ್ಲಿಸಿದರು
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಆಯೋಜಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಸಕ ನೆಹರು ಚ. ಓಲೇಕಾರ ಪುಷ್ಪನಮನ ಸಲ್ಲಿಸಿದರು   

ದಾವಣಗೆರೆ: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರ ಸಮಸ್ಯೆಗಳನ್ನುಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ನೆಹರು ಚ. ಓಲೇಕಾರ ಭರವಸೆ ನೀಡಿದರು.

ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ, ಗ್ರಾಮ ಪಂಚಾಯಿತಿಗೆ ಚುನಾಯಿತರಾದ ಛಲವಾದಿ ಸಮಾಜದ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳವರು ತಮ್ಮ ಸಮಸ್ಯೆಗಳ ಬಗ್ಗೆ ಆಯೋಗಕ್ಕೆ ಪತ್ರ ಬರೆಯಬಹುದು. ಇಲ್ಲವೇ ನೇರವಾಗಿ ನನ್ನನ್ನು ಭೇಟಿ ಮಾಡಬಹುದು. ಕೆಲವರಿಗೆ ಜಮೀನು ಇರುತ್ತದೆ, ಕೊಳವೆ ಬಾವಿ ಇರುವುದಿಲ್ಲ. ಅಂತಹ ಸಮಸ್ಯೆಗಳು ಇದ್ದರೆ ನಾನುಸರ್ಕಾರದ ಕಾರ್ಯದರ್ಶಿ ಗಳೊಂದಿಗೆ ಚರ್ಚಿಸಿ ಪರಿಹರಿಸುವ ಕೆಲಸ ಮಾಡಲಿದ್ದೇನೆ’ಎಂದು ತಿಳಿಸಿದರು.

ADVERTISEMENT

‘ಛಲವಾದಿ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಂಘಟನೆ ಕೆಲಸ ಮಾಡಲಾಗುವುದು. ಈಗಾಗಲೇ ಬೆಳಗಾವಿ, ಹಾವೇರಿ, ಚಿತ್ರದುರ್ಗದಲ್ಲಿ ಸಭೆ ನಡೆಸಲಾಗಿದೆ. ಪ್ರತಿ ಜಿಲ್ಲೆಗೆ 10 ಜನರಂತೆ 30 ಜಿಲ್ಲೆಗೆ 300 ಮುಖಂಡರ ನೇಮಕ ಮಾಡಿ, ಸಭೆ ನಡೆಸಿ, ಸಮಾಜದ ರಾಜ್ಯ ಅಧ್ಯಕ್ಷರು, ಇತರೆ ಮುಖಂಡರನ್ನು ನೇಮಕ ಮಾಡಲಾಗುವುದು. ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ಕಲ್ಪಿಸಲಾಗುವುದು. ಸಮಸ್ಯೆಗಳನ್ನು ಕ್ರೋಡೀಕರಿಸಿ ಪರಿಹರಿಸುವ ಮಹದಾಸೆ ಇದೆ. ಸಂಘಟನೆ ಯಾರ ವಿರುದ್ಧವೂ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಂವಿಧಾನ ಬರೆದಂತಹ ಅಂಬೇಡ್ಕರ್‌ರವರ ಸಮಾಜದವರಾದ ನಾವು ಸಭೆ-ಸಮಾರಂಭಗಳಲ್ಲಿ ಭಾಗವಹಿಸಬೇಕು. ಸಭೆಗಳಲ್ಲಿ ಭಾಗವಹಿಸದೇ ಇದ್ದವರು ಛಲವಾದಿಗಳು ಎಂದು ಕರೆಸಿಕೊಳ್ಳಲಿಕ್ಕೆ ಅರ್ಹರಲ್ಲ. ಪ್ರತಿಯೊಬ್ಬರು ಸಮಾಜ ಕಟ್ಟುವ ಛಲದೊಂದಿಗೆ ಮುಂದೆ ಬರಬೇಕು. ಅಂಬೇಡ್ಕರ್ ಎನ್ನುವ ಜ್ಯೋತಿಯ ಪ್ರಜ್ವಲನೆ ಮಸುಕಾಗದಂತೆ ಅವರ ಮಾರ್ಗದರ್ಶನದಲ್ಲಿ ಸಮಾಜದ ಸಂಘಟನೆ ಮಾಡಬೇಕು. ನಮ್ಮವರ ಏಳಿಗೆಗೆ ಕಂಕಣಬದ್ಧರಾಗಬೇಕು’ ಎಂದು ತಿಳಿಸಿದರು.

ಸಮಾಜದ ಹಿರಿಯ ಮುಖಂಡ ವಿ.ಎಸ್. ಕುಬೇರಪ್ಪ ಮಾತನಾಡಿ, ಛಲವಾದಿ ಸಮಾಜದ ಬಲಿಷ್ಠ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.

ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ರುದ್ರಮುನಿ ಮಾತನಾಡಿ, ‘ಛಲವಾದಿ ಎಂದು ಹೇಳಿಕೊಳ್ಳಲು ಹಿಂದೆ ಹೋಗುತ್ತಿರುವ ಕಾರಣದ ಬಗ್ಗೆ ಗೊತ್ತಾಗುತ್ತಿಲ್ಲ. ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು. ನಾವೆಲ್ಲರೂ ಛಲವಾದಿ ಎಂದು ಹೇಳಿಕೊಳ್ಳದೇ ಹೋದಲ್ಲಿ ಸಮಾಜದ ಸಂಘಟನೆ ಸಾಧ್ಯ ಇಲ್ಲ. ಸಮಾಜದ ಋಣ ತೀರಿಸಿದೇ ಹೋದಲ್ಲಿ ಯಾರೂ ಛಲವಾದಿ ಆಗುವುದಿಲ್ಲ. ಸಂಕುಚಿತ ಮನೋಭಾವ ಬಿಟ್ಟು ಸಮಾಜದ ಸಂಘಟನೆ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಎಸ್. ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಮಪ್ಪ, ಶಂಭು ಕಳಸದ, ಡಾ. ಜಗನ್ನಾಥ್, ಜಯಪ್ರಕಾಶ್, ಶಿವಣ್ಣ, ಜಯಣ್ಣ, ವಸಂತ ಕುಮಾರ್, ನಿರಂಜನಮೂರ್ತಿ, ಗುರುಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.