
ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ₹ 49 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದರು.
‘ಬೆಳಗಿನ ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮದಡಿ ಹೊಸಹಳ್ಳಿ, ಹುಣಸಘಟ್ಟ ಮತ್ತು ಕ್ಯಾಸಿನಕೆರೆ ಗ್ರಾಮ ಪಂಚಾಯಿತಿಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿದರು.
ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಮುಗಿಸಬೇಕು. ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಗುತ್ತಿಗೆದಾರರು ಹಾಗೂ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.
ಹೊಸಹಳ್ಳಿ ಕ್ಯಾಂಪ್‌ನಲ್ಲಿರುವ ಆರೋಗ್ಯ ಉಪ ಕೇಂದ್ರದಲ್ಲಿ ಔಷಧಿ ದಾಸ್ತಾನು ಕಡಿಮೆ ಇರುವುದನ್ನು ಗಮನಿಸಿ, ಔಷಧಿ ದಾಸ್ತಾನು ಹೆಚ್ಚಿಸುವಂತೆ ಸೂಚಿಸಿದರು.
ಕ್ಯಾಸಿನಕೆರೆ ಸಮೀಪದ ಸೂರಮಟ್ಟಿ, ಹುಣಸಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿ ಕ್ಯಾಂಪ್‌ಗಳಲ್ಲಿ ಮನೆಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ಸ್ಥಳೀಯರು ಕೇಳಿದ ಪ್ರಶ್ನೆಗೆ, ಉಪಗ್ರಾಮ ನೀಡುವ ಬಗ್ಗೆ ಅರ್ಜಿ ಬಂದಿದೆ ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆ, ಶಾಲೆ, ಗ್ರಂಥಾಲಯಗಳ ಕಾರ್ಯವೈಖರಿಯನ್ನು ಗಮನಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಅಳವಡಿಸಲಾಗಿರುವ ನಳಗಳ ಸಂಪರ್ಕವನ್ನು ಖುದ್ದಾಗಿ ಪರಿಶೀಲಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಅಶೋಕ್, ಎಡಿ ನಾಗರಾಜ್, ಗ್ರಾಮೀಣ ಕುಡಿಯುವ ನೀರು ಯೋಜನೆಯ ಎಇಇ ಸೋಮ್ಲಾ ನಾಯ್ಕ್, ಎಇ ಕಿರಣ್, ಪಿಡಿಒಗಳು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.