ADVERTISEMENT

ಮಹಿಳೆ ಜತೆ ಕಂಪ್ಯೂಟರ್ ಆಪರೇಟರ್ ಅಸಭ್ಯ ವರ್ತನೆ: ದೂರು ದಾಖಲು

ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 9:19 IST
Last Updated 17 ಮಾರ್ಚ್ 2020, 9:19 IST

ದಾವಣಗೆರೆ: ತಾಲ್ಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಅಟೆಂಡರ್ ಜತೆಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಂಕಟೇಶ್ ಕಿರುಕುಳ ನೀಡಿದ ಆರೋಪಿ. ಈತ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾನೆ.

ಮಹಿಳೆ ಥಂಬ್ ನೀಡಲು ಬರುವಾಗೆಲ್ಲ ಮೈ ಕೈ ಹಿಡಿದು ಅಸಭ್ಯವಾಗಿ ವರ್ತಿಸುವ, ಮಹಿಳೆ ಪ್ರತಿರೋಧ ತೋರುವ ದೃಶ್ಯಗಳು ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ADVERTISEMENT

ಫೆಬ್ರುವರಿ 14ರಿಂದ 18ರವರೆಗೆ ಕಿರುಕುಳ ನೀಡಿರುವುದು ವಿಡಿಯೊದಲ್ಲಿದೆ. ಇದಲ್ಲದೇ ಕ್ಯಾಮೆರಾ ಇಲ್ಲದ ಜಾಗದಲ್ಲಿ ಕೂಡ ಮೈಕೈ ಮುಟ್ಟಿ, ಬಟ್ಟೆ ಎಳೆದಾಡಿದ್ದಾನೆ ಎಂದು ಮಹಿಳೆ ವಿಡಿಯೊ ದಾಖಲೆಗಳ ಸಹಿತ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪತಿ ಊರಲ್ಲಿ ಇರಲಿಲ್ಲ. ಅವರು ಬಂದ ಬಳಿಕ ದೂರು ನೀಡುತ್ತಿರುವುದಾಗಿಯೂ ತಿಳಿಸಿದ್ದಾರೆ.

ಕ್ರಮಕ್ಕೆ ಸೂಚನೆ: ಲೈಂಗಿಕ ಕಿರುಕುಳ ನೀಡಿದ ಆರೋಪಿ ವೆಂಕಟೇಶ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ದೂರವಾಣಿ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಎರಡು ದಿನಗಳಲ್ಲಿ ನಿರ್ಧಾರ: ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಸಭೆ ನಡೆಸಿ ಆರೋಪಿ ವೆಂಕಟೇಶ್‌ನನ್ನು ಕೆಲಸದಿಂದ ವಜಾ ಮಾಡುವ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆ ನಿರ್ಣಯ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವೆಂಕಟೇಶ್‌ ಅಸಭ್ಯವಾಗಿ ವರ್ತಿಸಿರುವುದು ವಿಡಿಯೊ ತುಣುಕುಗಳನ್ನು ನೋಡಿದಾಗ ಮೇಲ್ನೊಟಕ್ಕೆ ಸಾಬೀತಾಗಿದೆ. ಆತ ಕಾಯಂ ನೌಕರನಾಗಿರುವುದರಿಂದ ಗ್ರಾಮ ಪಂಚಾಯಿತಿ ನಿರ್ಣಯ ಅಗತ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.