ADVERTISEMENT

ಮೇಯರ್‌ರನ್ನು ಕೂಡಿ ಹಾಕುವ ಮಾತು ಆಡಿಲ್ಲ: ಸ್ಪಷ್ಟನೆ ನೀಡಿದ ಕಾಂಗ್ರೆಸ್‌

ಸಮಸ್ಯೆ ಹೇಳಿಕೊಳ್ಳುವುದು ತಪ್ಪಾ?

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 4:27 IST
Last Updated 23 ಅಕ್ಟೋಬರ್ 2022, 4:27 IST
ದಾವಣಗೆರೆ ಎಸ್‌ಒಜಿ ಕಾಲೊನಿಯಲ್ಲಿ ಒಳಚರಂಡಿ ನೀರು ಹೊರಗೆ ಹರಿಯುತ್ತಿರುವುದನ್ನು ತೋರಿಸುತ್ತಿರುವ ಪಾಲಿಕೆ ಸದಸ್ಯರು ಮತ್ತು ಸ್ಥಳೀಯರು
ದಾವಣಗೆರೆ ಎಸ್‌ಒಜಿ ಕಾಲೊನಿಯಲ್ಲಿ ಒಳಚರಂಡಿ ನೀರು ಹೊರಗೆ ಹರಿಯುತ್ತಿರುವುದನ್ನು ತೋರಿಸುತ್ತಿರುವ ಪಾಲಿಕೆ ಸದಸ್ಯರು ಮತ್ತು ಸ್ಥಳೀಯರು   

ದಾವಣಗೆರೆ: ‘31ನೇ ವಾರ್ಡ್‌ಗೆ ಮೇಯರ್‌ ಬಂದಾಗ ಸಮಸ್ಯೆಗಳನ್ನು ಸ್ಥಳೀಯರು ಹೇಳಿಕೊಂಡಿದ್ದಾರೆ. ಇದನ್ನೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ. ಮೇಯರ್‌ ಅವರನ್ನು ಕೂಡಿ ಹಾಕುವ ಯಾವ ಮಾತುಗಳನ್ನೂ ನಾವಾಗಲಿ, ಜನರಾಗಲಿ ಆಡಿಲ್ಲ’ ಎಂದು ಮಹಾನಗರ ಪಾಲಿಕೆ ವಿರೋಧಪಕ್ಷದ ನಾಯಕ ಗಡಿಗುಡಾಳ್‌ ಮಂಜುನಾಥ್‌, 31ನೇ ವಾರ್ಡ್ ಸದಸ್ಯ ಪಾಮೇನಹಳ್ಳಿ ನಾಗರಾಜ್‌ ತಿಳಿಸಿದರು.

ಎಸ್‌ಒಜಿ ಕಾಲೊನಿಯಲ್ಲಿ ಒಳಚರಂಡಿ ಸಮಸ್ಯೆಯನ್ನು ಮಾಧ್ಯಮದವರಿಗೆ ತೋರಿಸಿದ ಬಳಿಕ ಅವರು ಮಾತನಾಡಿದರು.

ಒಳಚರಂಡಿಗೆ ಚರಂಡಿ ನೀರು ಮಿಶ್ರವಾಗುತ್ತಿದೆ. ಮಳೆ ಜೋರು ಬಂದಾಗ ನೀರು ಟಿವಿ ಸ್ಟೇಷನ್‌ ಕೆರೆಗೆ ಹೋಗುತ್ತಿದೆ. ಈ ಸಮಸ್ಯೆ ಸರಿಪಡಿಸಲು ಮೇಯರ್‌, ಕಮಿಷನರ್‌, ಎಂಜಿನಿಯರ್‌ಗೆ ತಿಳಿಸಿದ್ದೆವು. ಸ್ಥಳಕ್ಕೆ ಬಂದು ಪರಿಶೀಲಿಸುವುದಾಗಿ ಅವರೆಲ್ಲರೂ ಭರವಸೆ ನೀಡಿದ್ದರು. ಶುಕ್ರವಾರ ಬೆಳಿಗ್ಗೆ 8ಕ್ಕೆ ಬರುವುದಾಗಿಯೂ ಹೇಳಿದ್ದರು. ಆದರೆ ಕಮಿಷನರ್‌ ಸಹಿತ ಯಾರೂ ಬರಲಿಲ್ಲ. ಸುಮಾರು ಎರಡೂವರೆ ಗಂಟೆಗಳ ಕಾಲ ಕಾದ ಬಳಿಕ ಮೇಯರ್‌ ಜಯಮ್ಮ ಗೋಪಿನಾಯ್ಕ್‌ ಮತ್ತು ಅವರ ಗಂಡ ಬಂದರು. ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಪ್ರತಿಭಟನೆ ಮಾಡಿ ಎಂದು ಮೇಯರ್ ಅವರ ಪತಿ ಗೋಪಿ ನಾಯ್ಕ್‌ ಅವರೇ ಸಲಹೆ ನೀಡಿದರು ಎಂದು ತಿಳಿಸಿದರು.

ADVERTISEMENT

ಮೇಯರ್‌ಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಸಮಸ್ಯೆಯ ಪರಿಶೀಲನೆಗೆ ಮೇಯರ್‌ ಬರುವಾಗ ಅವರ ಜತೆಗೆ ಒಬ್ಬ ಅಧಿಕಾರಿಯೂ ಇರಲಿಲ್ಲ. ಎಸ್ಸಿ–ಎಸ್‌ಟಿ ಅನುದಾನವನ್ನು ಕೂಡ ದಲತರೇ ಹೆಚ್ಚಿರುವ ಈ ವಾರ್ಡ್‌ಗೆ ನೀಡಿಲ್ಲ ಎಂದು ಆರೋಪಿಸಿದರು.

ಮುಂದಿನ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸುವುದಾಗಿ ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌ ಹೇಳಿಕೆ ನೀಡಿದ್ದಾರೆ. ಮೊದಲು ಅವರ ವಾರ್ಡ್‌ನಲ್ಲಿ ಇರುವ ಎಪಿಎಂಸಿಯ ಈರುಳ್ಳಿ ಮಾರುಕಟ್ಟೆ ರಸ್ತೆಯಲ್ಲಿ ಬೀದಿದೀಪಗಳು ಉರಿಯುವಂತೆ ಮಾಡಲಿ. ಅಂಡರ್‌ಪಾಸ್‌ ಸಮಸ್ಯೆ ಸರಿಪಡಿಸಲಿ. ಬಳಿಕ ಉಳಿದ ವಾರ್ಡ್‌ಗಳ ಬಗ್ಗೆ ಮಾತನಾಡಲಿ. ಅವರು ಮೇಯರ್‌ ಆಗಿದ್ದಾಗ 31ನೇ ವಾರ್ಡ್‌ನಲ್ಲಿ ಒಂದೇ ಒಂದು ಶಂಕುಸ್ಥಾಪನೆ, ಉದ್ಘಾಟನೆ ಆಗಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಗೂಂಡಾವರ್ತನೆ ಎಂದು ಇನ್ನೊಂದು ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ಗೂಂಡಾ ವರ್ತನೆ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 22 ಸ್ಥಾನ, ಬಿಜೆಪಿ 17 ಸ್ಥಾನ ಪಡೆದಿತ್ತು. ಗೂಂಡಾವರ್ತನೆ ಮತ್ತು ಹಣದಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿದೆ ಎಂದರು.

ವಾರ್ಡ್‌ ಸಮಿತಿ ಅಧ್ಯಕ್ಷ ಕಲ್ಲೇಶಪ್ಪ ಮಾತನಾಡಿ, ‘ಇವತ್ತಿಗೂ ಟಿವಿ ಸ್ಟೇಷನ್‌ ಕೆರೆಗೆ ಒಳಚರಂಡಿ ನೀರು ಸೇರುತ್ತಿದೆ. ಬಿಜೆಪಿ ಸುಳ್ಳು ಹೇಳುವುದು ಬಿಟ್ಟು ಬೇರೇನೂ ಸಾಧನೆ ಮಾಡಿಲ್ಲ. ಮಳೆ ಬಂದಾಗ ಇಲ್ಲಿನ ಮನೆಗಳಿಗೆ ನೀರು ನುಗ್ಗುತ್ತದೆ. ಹಾವುಗಳೂ ಮನೆಯೊಳಗೆ ಬರುತ್ತವೆ’ ಎಂದರು.

ಸ್ಥಳೀಯರಾದ ಫಾತಿಮಾ, ಮಂಜುಳಾ, ಚಂದ್ರಕಲಾ ಮುಂತಾದವರು ಸಮಸ್ಯೆಗಳನ್ನು ವಿವರಿಸಿದರು.

ಹುಲ್ಲುಮನಿ ಗಣೇಶ್‌, ಇಟ್ಟಿಗುಡಿ ಮಂಜುನಾಥ್‌, ಕಲ್ಲಳ್ಳಿ ನಾಗರಾಜ್‌, ವೆಂಕಟೇಶ್‌, ಸಂಗೀತಾ, ರುದ್ರೇಶ್‌, ಜಗದೀಶ್‌, ಹರೀಶ್‌ ಬಸಾಪುರ, ಶಿವಣ್ಣ, ರವಿ, ಮಂಜುನಾಥ್‌, ರಮೇಶ್‌ ಮುಂತಾದವರು ಇದ್ದರು.

‘ಮಾಮೂಲು ವಸೂಲಿ ಮಾಡುತ್ತಿರುವ ವೀರೇಶ್‌’

‘ಮಾಜಿ ಮೇಯರ್‌ ಎಸ್.ಟಿ. ವೀರೇಶ್‌ ಅವರು ಎಲ್ಲೆಲ್ಲಿ ಮಾಮೂಲಿ ವಸೂಲಿ ಮಾಡುತ್ತಾರೆ? ದನಕರು ವ್ಯವಹಾರದಲ್ಲಿ ಎಲ್ಲೆಲ್ಲಿ ಯಾರ್ಯಾರು ಹಣ ತಂದು ಕೊಡುತ್ತಾರೆ ಎಲ್ಲ ಗೊತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ವೆಂಕಟೇಶ್‌ ಆರೋಪಿಸಿದರು.

ಪಕ್ಕದ 41ನೇ ವಾರ್ಡ್‌ಗೆ ₹ 600 ಕೋಟಿ ಅನುದಾನ, ಈ ವಾರ್ಡ್‌ಗೆ ₹ 3 ಕೋಟಿ ಅನುದಾನ ಕೂಡ ಇಲ್ಲ. ಈ ರೀತಿ ಅನುದಾನದಲ್ಲಿ ತಾರತಮ್ಯ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.