ADVERTISEMENT

ಕಾಂಗ್ರೆಸ್‌ ನಾಯಕರು ಬಿರುಸಿನ ಪ್ರಚಾರ ನಡೆಸಲಿ: ಶಿವಶಂಕರ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 20:36 IST
Last Updated 21 ಏಪ್ರಿಲ್ 2019, 20:36 IST
ಎಚ್‌.ಎಸ್‌. ಶಿವಶಂಕರ್‌
ಎಚ್‌.ಎಸ್‌. ಶಿವಶಂಕರ್‌   

ದಾವಣಗೆರೆ: ‘ಮತದಾನಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ಕಾಂಗ್ರೆಸ್‌ ನಾಯಕರು ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಬೇಕು’ ಎಂದು ಜೆಡಿಎಸ್‌ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮನವಿ ಮಾಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ಇನ್ನೂ ಎಷ್ಟೋ ಕಡೆ ಕಾಂಗ್ರೆಸ್‌ನ ಕರಪತ್ರಗಳು ತಲುಪಿಲ್ಲ. ಹೀಗಾಗಿ ಮಹಾನಗರ ಪಾಲಿಕೆಯಲ್ಲಿದ್ದ 39 ಕೌನ್ಸಿಲರ್‌ಗಳು ಮನೆ ಮನೆಗೆ ತೆರಳಿ ಅಭ್ಯರ್ಥಿ ಪರ ಮತಯಾಚಿಸಬೇಕು. ಜೆಡಿಎಸ್‌ನವರು ಮೈತ್ರಿ ಧರ್ಮವನ್ನು ಪಾಲಿಸಿ ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದೇವೆ. ಆದರೆ, ಕಾಂಗ್ರೆಸ್‌ನ ನಾಯಕರೇ ಉತ್ಸಾಹ ತೋರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಂಜಪ್ಪ ಹೋರಿ: ‘ಈ ಹಿಂದೆ ಮಂಜಪ್ಪ ಅವರನ್ನು ಕುರಿ ಎಂದು ಹೇಳಿದ್ದೆ. ಆದರೆ, ಈಗ ಜೆಡಿಎಸ್‌ ಬೆಂಬಲ ಸಿಕ್ಕಿರುವುದರಿಂದ ಕುರಿಯು ಹೋರಿಯಾಗಿದೆ. ಈಗ ಅದು ಗುದ್ದಲು ಸೈ. ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಕೊನೆ ಕ್ಷಣದಲ್ಲಿ ಸರಿಯಾಗಿ ಪ್ರಚಾರ ನಡೆಸಿದ ಮಂಜಪ್ಪ ಗೆಲ್ಲುವುದು ಖಚಿತ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಬಿಜೆಪಿ ಶಾಸಕ ಜಿಲ್ಲೆಗೆ ಬಂದು ಅರಸೀಕರೆ ಕೊಟ್ರೋಶ್‌ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿ ಪಂಚಮಸಾಲಿ ಸಮಾಜದಲ್ಲಿ ಗೊಂದಲ ಮೂಡುವಂತಹ ಹೇಳಿಕೆ ನೀಡಿದ್ದಾರೆ. ಸಂಸದರ ಇಬ್ಬಗೆಯ ನೀತಿಯಿಂದಾಗಿ ಕೊಟ್ರೇಶ್‌ಗೆ ಕಳೆದ ವಿಧಾನಸಭೆಯಲ್ಲಿ ಹರಪನಹಳ್ಳಿಯಲ್ಲಿ ಬಿಜೆಪಿ ಟಿಕೆಟ್‌ ಸಿಗಲಿಲ್ಲ. ಸಿಕ್ಕಿದ್ದರೆ ಪಂಚಮಸಾಲಿ ಸಮಾಜದವರೇ ಶಾಸಕರಾಗುತ್ತಿದ್ದರು. ಹೀಗಾಗಿ ನಿರಾಣಿಯವರ ಹೇಳಿಕೆಗೆ ಮಹತ್ವ ನೀಡದೆ, ಪಂಚಮಸಾಲಿ ಸಮಾಜದವರು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ‌

ಜೆಡಿಎಸ್‌ ಮುಖಂಡ ಅರಸೀಕೆರೆ ಕೊಟ್ರೇಶ್‌, ‘ನಿರಾಣಿ ಅವರ ಹೇಳಿಕೆಗೆ ಸಮಾಜದ ಜನ ಕಿವಿಗೊಡಬಾರದು. ಕ್ಷೇತ್ರದಲ್ಲಿ ಸಂಚರಿಸಿ ಮೈತ್ರಿ ಧರ್ಮ ಪಾಲಿಸಿ ಮಂಜಪ್ಪ ಪರ ಮತಯಾಚಿಸುತ್ತಿದ್ದೇನೆ. ಸಮಾಜದವರೂ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ಮುಖಂಡರಾದ ಪರಮೇಶ್ವರ ಗೌಡ, ಕಂಚಿಕೆರೆ ಕೆಂಚಪ್ಪ, ಎಸ್‌. ಓಂಕಾರಪ್ಪ, ತೆಲಗಿ ಈಶ್ವರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.