ADVERTISEMENT

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

ಕೇಂದ್ರ‌ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 2:04 IST
Last Updated 12 ಫೆಬ್ರುವರಿ 2021, 2:04 IST
ರೈತ ವಿರೋಧಿ ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿ, ತೈಲ ಬೆಲೆ ಏರಿಕೆ ಖಂಡಿಸಿ ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು
ರೈತ ವಿರೋಧಿ ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿ, ತೈಲ ಬೆಲೆ ಏರಿಕೆ ಖಂಡಿಸಿ ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು   

ದಾವಣಗೆರೆ: ಇಂಧನ, ಅಡುಗೆ ಅನಿಲ, ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಕೃಷಿ ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಅಂಬೇಡ್ಕರ್‌ ಸರ್ಕಲ್‌ನಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಜಿಲ್ಲಾ ಕಾಂಗ್ರೆಸ್‌, ಯೂತ್‌ ಕಾಂಗ್ರೆಸ್‌, ಮಹಿಳಾ, ಕಿಸಾನ್‌ ಕಾಂಗ್ರೆಸ್‌, ಎನ್‌ಎಸ್‌ಯುಐ ಸೇರಿ ಕಾಂಗ್ರೆಸ್‌ ಅಂಗಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಅಡುಗೆ ಅನಿಲ ದರ ಹೆಚ್ಚಳ ವಿರೋಧಿಸಿ ಅಂಬೇಡ್ಕರ್‌ ವೃತ್ತದಲ್ಲಿ ಕಟ್ಟಿಗೆ ಹಾಕಿ ಒಲೆಯಲ್ಲಿ ಅಡುಗೆ ಮಾಡಿದ ಮಹಿಳಾ ಕಾಂಗ್ರೆಸ್‌ ಸದಸ್ಯೆಯರು ಕೇಂದ್ರದ ನೀತಿಯನ್ನು ಅಣಕಿಸಿದರು.

ADVERTISEMENT

ಬಳಿಕ ಕಾರ್ಯಕರ್ತರು ಅಡುಗೆ ಸಿಲಿಂಡರ್ ಮತ್ತು ಬೈಕ್‌ ಅನ್ನು ಉಪವಿಭಾಗಾಧಿಕಾರಿ ಕಚೇರಿಯವರೆಗೂಅಣಕು ಶವಯಾತ್ರೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧಘೋಷಣೆ ಕೂಗಿದರು.

ಬಳಿಕ ಉಪವಿಭಾಗಾಧಿಕಾರಿ ಮೂಲಕರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಪಾಲಿಕೆ ಎದುರು ಬಹಿರಂಗ ಸಮಾವೇಶ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ‘ಚಳಿಯನ್ನೂ ಲೆಕ್ಕಿಸದೆ ರೈತರು 75 ದಿನಗಳಿಂದ ದೆಹಲಿಯ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಪ್ರಧಾನಿ ಮೋದಿ ಸೌಜನ್ಯಕ್ಕಾದರೂ ಅವರ ಜತೆ ಮಾತುಕತೆ ನಡೆಸಿಲ್ಲ. ಹಲವು ರೈತರು ಮೃತಪಟ್ಟರೂ ಪ್ರಧಾನಿ ರೈತರನ್ನು ನಿರ್ಲಕ್ಷಿಸಿದ್ದಾರೆ’ ಎಂದು ದೂರಿದರು.

‘ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿ ನಾಯಕರು ನಮಗೆ 100 ದಿನ ಅವಕಾಶ ಕೊಡಿ. ದೇಶದ ಚಿತ್ರಣವನ್ನೇ ಬದಲಾಯಿಸುತ್ತೇವೆ ಎಂದಿದ್ದರು. ಆದರೆ ಎರಡು ಬಾರಿ ಅಧಿಕಾರಕ್ಕೆ ಬಂದರೂ ಜನಸಾಮಾನ್ಯರ ಸ್ಥಿತಿ ಸುಧಾರಿಸಿಲ್ಲ. ರೈತ, ಕಾರ್ಮಿಕರನ್ನು ಕಡೆಗಣಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಾಂಗ್ರೆಸ್‌ ಅವಧಿಯಲ್ಲಿ ಸ್ವಲ್ಪ ಬೆಲೆ ಹೆಚ್ಚಳವಾದರೂ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ನಾಯಕರು ಈಗ ಏನನ್ನುತ್ತಾರೆ? ಜನರು ಬೆಲೆ ಏರಿಕೆ ಬಗ್ಗೆ ಏಕೆ ಪ್ರಶ್ನಿಸುತ್ತಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.

ಕೃಷಿ, ಎಪಿಎಂ‍ಸಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಇವುಗಳನ್ನು ಶೀಘ್ರ ಹಿಂಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ, ‘ವಾಮಮಾರ್ಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅನ್ನದಾತರನ್ನು ಉಗ್ರಗಾಮಿಗಳಂತೆ ನೋಡುತ್ತಿದೆ. ರೈತರ ಸಮಸ್ಯೆ ಆಲಿಸದ ಪ್ರಧಾನಿಗೆ ನಾಚಿಕೆ ಆಗಬೇಕು. ಕೃಷಿ ಕಾಯ್ದೆಗಳು ಜಾರಿಯಾದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರಲಿದೆ. ಜನರು ಈ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಕೆಪಿಸಿಸಿ ವೀಕ್ಷಕ ಅಮೃತೇಶ್ ಮಾತನಾಡಿದರು.

ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್, ಮುಖಂಡರಾದ ಅಬ್ದುಲ್ ಲತೀಫ್, ಆಯೂಬ್‌ ಪೈಲ್ವಾನ್‌, ಎಸ್.ಮಲ್ಲಿಕಾರ್ಜುನ್‌, ಅನಿತಾಬಾಯಿ ಮಾಲತೇಶ್, ಸೈಯದ್ ಚಾರ್ಲಿ, ಶ್ರೀಕಾಂತ್ ಬಗೇರ, ಪಾಮೇನಹಳ್ಳಿ ನಾಗರಾಜ್, ಸುಧಾ ಇಟ್ಟಿಗುಡಿ, ಬಾತಿ ಶಿವಕುಮಾರ್, ಹರೀಶ್ ಕೆ.ಎಲ್., ಸುಷ್ಮಾ ಪಾಟೀಲ್ ಇದ್ದರು.

‘ಮೋದಿ ಅಪಾಯಕಾರಿ ಸರ್ವಾಧಿಕಾರಿ’

‘ಪ್ರಧಾನಿ ಮೋದಿ ಹಿಟ್ಲರ್‌ಗಿಂತಲೂ ಅಪಾಯಕಾರಿ ಭ್ರಷ್ಟ ಸರ್ವಾಧಿಕಾರಿ. ಅಂಬಾನಿ, ಅದಾನಿಯ ಗುಲಾಮರಾಗಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಕಡಿಮೆ ದರ ಇದ್ದರೂ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ. ರೈತರಿಗೆ ‘ಆಂದೋಲನ ಜೀವಿ’ ಎನ್ನುವ ನೀವು ‘ದುರಾಡಳಿತದ ಜೀವಿ’ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಿ.ಬಸವರಾಜ್ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.