ADVERTISEMENT

ಕಾಂಗ್ರೆಸ್ ಪ್ರತಿಭಟನೆ ಬಿಟ್ಟು ಇ.ಡಿ ತನಿಖೆ ಎದುರಿಸಲಿ: ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 8:27 IST
Last Updated 14 ಜೂನ್ 2022, 8:27 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ದಾವಣಗೆರೆ: ನ್ಯಾಷನಲ್ ಹೆರಾಲ್ಡ್ ಪ್ರಕರಣ ನೋಡಿದರೆ ಭ್ರಷ್ಟಾಚಾರ ನಡೆದಿರುವುದು ಪ್ರಾಥಮಿಕ ಹಂತದಲ್ಲೇ ಕಂಡು ಬರುತ್ತಿದೆ. ಈ ಪ್ರಕರಣದ ತನಿಖೆ ಆಗಬಾರದು ಎಂಬ ಉದ್ದೇಶ ಇಟ್ಟುಕೊಂಡು ಇ.ಡಿ ಅಧಿಕಾರಿಗಳ ಮೇಲೆ ಬ್ಲಾಕ್ ಮೇಲ್ ಮಾಡಲು ಕಾಂಗ್ರೆಸ್‌ ಹೋರಾಟ ಮಾಡುತ್ತಿರುವುದು ದೌರ್ಭಾಗ್ಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ದಾವಣಗೆರೆ ತಾಲ್ಲೂಕಿನ ಹಳೇ ಬಿಸಲೇರಿಯಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಇದ್ದಿದ್ದರೆ ಕಾಂಗ್ರೆಸ್‌ ತನಿಖೆ ಎದುರಿಸಬೇಕಿತ್ತು. ಈ ತನಿಖೆ ದಿಕ್ಕು ತಪ್ಪಿಸಲು ಸಾವಿರಾರು ಜನರನ್ನ ಬೀದಿಗೆ ಇಳಿಸಿ ಪ್ರತಿಭಟನೆ ಮಾಡಿಸುತ್ತಿದೆ ಎಂದರು.

ADVERTISEMENT

ರಾಜಕೀಯ ಪ್ರೇರಿತ ಪ್ರಕರಣಗಳನ್ನ ಹಿಂದೆ ಕಾಂಗ್ರೆಸ್‌ ಬಿಜೆಪಿ ಮೇಲೆ ದಾಖಲಿಸುತಿತ್ತು. ಮೋದಿ, ಅಮಿತ್ ಶಾ ಮೇಲೂ ಪ್ರಕರಣ ದಾಖಲಿಸಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಒಬ್ಬರೆ ಹೋಗಿ ಸತತ 10 ಗಂಟೆ ಕಾಲ ವಿಚಾರಣೆ ಎದುರಿಸಿದ್ದರು. ಕಾಂಗ್ರೆಸ್ ಕೂಡ ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ತನಿಖೆಗೆ ಒಳಗಾಗಲಿ. ಭ್ರಷ್ಟಾಚಾರ ಮಾಡಿದ್ದರೆ ಸಾಮಾನ್ಯರಂತೆ ಶಿಕ್ಷೆ ಅನುಭವಿಸಲಿ ಎಂದು ಹೇಳಿದರು.

ಈ ದೇಶ ಗಾಂಧಿ ಕುಟುಂಬದ ಸೂಚನೆಯಂತೆ ನಡೆಯುವುದಲ್ಲ, ಸಂವಿಧಾನದ ಪ್ರಕಾರ ನಡೆಯಬೇಕು. ಸಂವಿಧಾನದ ಮುಂದೆ ಎಲ್ಲ ಸಮಾನರು. ಒಂದು ಕಾಲದಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತಿದ್ದ ಕಾಂಗ್ರೆಸ್‌ ಈಗ ಯುವರಾಜನ ರಕ್ಷಣೆಗಾಗಿ ಹೋರಾಟ ನಡೆಸುತ್ತಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.