
ದಾವಣಗೆರೆ: ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಅನ್ನು ಅಹಿಂದ ಸಮುದಾಯದವರಿಗೇ ನೀಡಬೇಕು’ ಎಂದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯದ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನಿಂದ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿವಿಧ ಸಮುದಾಯಗಳ ಅಹಿಂದ ಮುಖಂಡರು, ‘ಅಹಿಂದ ಸಮುದಾಯದ ಯಾರಿಗೇ ಟಿಕೆಟ್ ನೀಡಿದರೂ, ಒಗ್ಗಟ್ಟಿನಿಂದ ಚುನಾವಣೆ ನಡೆಸಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಭರವಸೆಯ ಮಾತುಗಳನ್ನಾಡಿದರು.
‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಹಿಂದ ವರ್ಗದ ಮತಗಳು ಶೇ 80 ರಷ್ಟಿವೆ. ಶೇ 50ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ಸಮುದಾಯದ ಮತಗಳಿವೆ. 2008ರಲ್ಲಿ ಕ್ಷೇತ್ರ ವಿಂಗಡಣೆ ಆದಾಗಿನಿಂದಲೂ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಅವರೇ ನಿರಂತರವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯೇ ಜಯ ಸಾಧಿಸಲಿದ್ದಾರೆ’ ಎಂದರು.
‘ಅಹಿಂದ ವರ್ಗದ ಮತಗಳು ಹೆಚ್ಚು ಇರುವ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವುದರಿಂದ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗುತ್ತದೆ. ಮಧ್ಯ ಕರ್ನಾಟಕದಲ್ಲಿ ಅಲ್ಪ ಸಂಖ್ಯಾತರಿಗೆ ಯಾವುದೇ ಪ್ರಾತಿನಿಧ್ಯ ಇಲ್ಲವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಅಹಿಂದ ವರ್ಗಕ್ಕೆ ನೀಡಬೇಕಾಗಿರುವುದು ಜಿಲ್ಲಾ ನಾಯಕರೆಂದು ಪ್ರತಿಬಿಂಬಿಸಿಕೊಂಡವರ ಜವಾಬ್ದಾರಿಯೂ ಆಗಿದೆ’ ಎಂದು ಹೇಳಿದರು.
‘ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ, ಹಿಂದುಳಿದ ವರ್ಗಗಳ ಅಥವಾ ದಲಿತ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡಬೇಕು. ಅಹಿಂದ ವರ್ಗಕ್ಕೆ ಸೇರಿದ ಯಾರಿಗೇ ಟಿಕೆಟ್ ನೀಡಿದರೂ, ಗೆಲುವಿಗಾಗಿ ಶ್ರಮಿಸುತ್ತೇವೆ’ ಎಂದರು.
ವಾಲ್ಮೀಕಿ ಸಮುದಾಯದ ಆಂಜನೇಯ ಗುರೂಜಿ, ಕುರುಬ ಸಮುದಾಯದ ಲೋಕಿಕೆರೆ ಸಿದ್ದಪ್ಪ, ಛಲವಾದಿ ಸಮುದಾಯದ ಎನ್.ರುದ್ರಮುನಿ, ಪಂಚಮಸಾಲಿ ಸಮುದಾಯದ ಎಂ.ಟಿ.ಸುಭಾಶಚಂದ್ರ, ಏಜಾಜ್ ಅಹಮದ್ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಅಹಿಂದ ವರ್ಗಕ್ಕೆ ಸೇರಿದ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಸಾಕಷ್ಟು ವರ್ಷಗಳಿಂದ ಶ್ರಮಿಸಿದ್ದೇವೆ. ಈ ಬಾರಿ ಅಹಿಂದ ವರ್ಗಕ್ಕೆ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಕಾಂಗ್ರೆಸ್ ಪಾಲಿಸಬೇಕುಬಿ.ವೀರಣ್ಣ ವಾಲ್ಮೀಕಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ
ಜಾತ್ಯಾತೀತ ನಾಯಕರಾಗಿದ್ದ ಎಸ್‌ಎಸ್
‘ಶಾಮನೂರು ಶಿವಶಂಕರಪ್ಪ ಅವರು ನಿಜವಾದ ಜಾತ್ಯಾತೀತ ನಾಯಕರಾಗಿದ್ದರು. ಹೀಗಾಗಿ ಅವರು ಬದುಕಿರವರೆಗೂ ನಾವು ಟಿಕೆಟ್ ಕೇಳಿರಲಿಲ್ಲ. ಅವರ ಸ್ಪರ್ಧೆ ಬಗ್ಗೆ ಅಪಸ್ವರ ಎತ್ತಿರಲಿಲ್ಲ. ಇದೀಗ ಅವರಿಲ್ಲದ ಕಾರಣ ಅಹಿಂದ ವರ್ಗದವರಿಗೆ ಟಿಕೆಟ್ ಕೇಳುತ್ತಿದ್ದೇವೆ’ ಎಂದು ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಹೇಳಿದರು. ‘ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಮುಸ್ಲಿಂ ಕುರುಬ ನಾಯಕ ದಲಿತ ಪಂಚಮಸಾಲಿ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯಗಳ ಪೈಕಿ ಯಾವುದೇ ಸಮುದಾಯದವರಿಗೆ ಟಿಕೆಟ್ ನೀಡಿದರೂ ಅಭ್ಯಂತರವಿಲ್ಲ. ಈ ಬಗ್ಗೆ ಎಐಸಿಸಿ ಕೆಪಿಸಿಸಿ ಮುಖಂಡರಿಗೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸ ಇದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.