ADVERTISEMENT

‘ವಾಟಾಳ್ ನಾಗರಾಜ್ ಹೋರಾಟ ಕಾಂಗ್ರೆಸ್ ಕೃಪಾಪೋಷಿತ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 11:16 IST
Last Updated 28 ನವೆಂಬರ್ 2020, 11:16 IST

ದಾವಣಗೆರೆ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಹೋರಾಟಗಳ ಹಿಂದೆ ಕಾಂಗ್ರೆಸ್‌ನ ಕೈವಾಡವಿದ್ದು, ಹಣ ನೀಡುತ್ತಿದ್ದಾರೆ. ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯಂತೆ ವಾಟಾಳ್ ಇದ್ದಾರೆ ಎಂದು ಮಾಯಕೊಂಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಬಿ.ಜಿ. ಆರೋಪಿಸಿದರು.

‘ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ವಾಟಾಳ್ ನಾಗರಾಜ್ ಅವರು ಅಸಂವಿಧಾನಿಕ ಪದ ಬಳಸಿರುವುದು ಸರಿಯಲ್ಲ. ಕಾಂಗ್ರೆಸ್‌ನವರು ಹೇಳಿದಂತೆ ವಾಟಾಳ್ ನಡೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಮಾತನಾಡಿದ್ದಾರಾ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ವಾಟಾಳ್ ನಾಗರಾಜ್ ಪ್ರಾಮಾಣಿಕ ಎಂದು ಹೇಳುತ್ತಾರೆ. ಆದರೆ ಅವರಿಗೆ ಬೆಂಗಳೂರಿನಲ್ಲಿ ಬಂಗಲೆ, ವರುಣಾ ಕ್ಷೇತ್ರದಲ್ಲಿ ಫಾರಂ ಹೌಸ್, ವಾಟಾಳು ಗ್ರಾಮದಲ್ಲಿ ಜಮೀನು, ಆಯಕಟ್ಟಿನ ಜಾಗಗಳಲ್ಲಿ ನಿವೇಶನ ಕೊಂಡುಕೊಂಡಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್‌ನವರು ಹಣ ಕೊಟ್ಟಿದ್ದಾರೆ. ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳ ವಿರುದ್ಧ ಹೋರಾಟ ಮಾಡಲು ಅವರ ಕೈವಾಡವಿದೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ರಾಜ್ಯದಲ್ಲಿರುವ ಅಲ್ಪ ಸಂಖ್ಯಾತ ಮರಾಠರಿಗೆ ಹೊರತು ಅನ್ಯ ರಾಜ್ಯಗಳ ಮರಾಠಿಗರಿಗಲ್ಲ. ಇದನ್ನು ವಾಟಾಳ್ ಸೇರಿ ಇತರೆ ಕನ್ನಡಪರ ಸಂಘಟನೆಗಳು ತಿಳಿಯಬೇಕಿದೆ’ ಎಂದು ಹೇಳಿದರು.

ಮುಖಂಡರಾದ ಶಿವಕುಮಾರ್ ಬಿ.ಪಿ. ಶರತ್ ಕಂದಗಲ್ಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.