ಚನ್ನಗಿರಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡ ಸಂಕೀರ್ಣ ಕಾಮಗಾರಿ ಆರಂಭಗೊಂಡು ಮೂರು ವರ್ಷವಾದರೂ ಮುಕ್ತಾಯಗೊಳ್ಳದೇ ಆಮೆಗತಿಯಲ್ಲಿ ಸಾಗಿದೆ.
ತಾಲ್ಲೂಕು ಕೇಂದ್ರವಾದ ಚನ್ನಗಿರಿಯಲ್ಲಿ ಇರುವ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗೆ ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದನ್ನು ಮನಗಂಡು, ‘ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ಇದ್ದರೆ ಜನರಿಗೆ ಅನುಕೂಲವಾಗಲಿದೆ’ ಎಂಬ ಉದ್ದೇಶದಿಂದ 2021– 22ನೇ ಸಾಲಿನಲ್ಲಿ ಅಂದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ 5 ಮಹಡಿಗಳುಳ್ಳ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ₹ 9 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿ, ಭೂಮಿಪೂಜೆ ನೆರವೇರಿಸಿದ್ದರು.
ಆರಂಭದಲ್ಲಿ ತ್ವರಿತಗತಿಯಲ್ಲಿ ನಡೆದ ಕಟ್ಟಡ ಕಾಮಗಾರಿ ನಂತರದ ದಿನಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿತ್ತು. ಮತ್ತೆ ಸ್ವಲ್ಪ ದಿನಗಳ ನಂತರ ಕಾಮಗಾರಿ ಆರಂಭಗೊಂಡರೂ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯದೇ ಬಹುಮಹಡಿ ಕಟ್ಟಡ ಇನ್ನು ಗಗನಕುಸುಮವಾಗಿದೆ. ಪ್ರಸ್ತುತ ಈ ಕಟ್ಟಡ ಕಾಮಗಾರಿಯ ವೇಗವನ್ನು ಗಮನಿಸಿದರೆ ಇದರ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಆರು ತಿಂಗಳಾದರೂ ಬೇಕಾಗುತ್ತದೆ.
ಪಟ್ಟಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಅರಣ್ಯ ಇಲಾಖೆ ಸಂಚಾರಿ ದಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ, ಅಬಕಾರಿ ಇಲಾಖೆ, ಸಹಕಾರ, ಅಕ್ಷರ ದಾಸೋಹ, ಗೃಹ ರಕ್ಷಕ ದಳ ಸೇರಿ ಹಲವಾರು ಕಚೇರಿಗಳು ಇದುವರೆಗೂ ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
‘ಪಟ್ಟಣದ ಮೂರೂ ಮೂಲೆಗಳಲ್ಲಿ ಸರ್ಕಾರದ ಒಂದೊಂದು ಕಚೇರಿ ಇವೆ. ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಹೋಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಹೊಸ ಕಟ್ಟಡ ಕಾಮಗಾರಿ ಮುಕ್ತಾಯಗೊಳ್ಳದೇ ಜನರು ಇನ್ನೂ ಕಚೇರಿಗಳಿಗೆ ಅಲೆದಾಡುವುದು ತಪ್ಪಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಿ ಜನರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಬೇಕಿದೆ’ ಎನ್ನುತ್ತಾರೆ ತಾಲ್ಲೂಕಿನ ಹಿರೇ ಉಡ ಗ್ರಾಮದ ಗಂಗಾಧರಪ್ಪ.
‘ಬಹುಮಹಡಿ ಕಟ್ಟಡ ಕಾಮಗಾರಿಗೆ ₹ 7.95 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ. ಕಾಮಗಾರಿ ಈ ವೇಳೆಗೆ ಮುಕ್ತಾಯಗೊಳ್ಳಬೇಕಿತ್ತು. 2023ರಲ್ಲಿ ಚುನಾವಣೆ ನಡೆದ ನಂತರ ಸ್ವಲ್ಪ ದಿನಗಳ ಕಾಲ ಅನುದಾನ ಬಿಡುಗಡೆಯಾಗುವುದು ವಿಳಂಬವಾದ್ದರಿಂದ ಆ ಸಮಯದಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ನಂತರದ ದಿನಗಳಲ್ಲಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ 5 ಮಹಡಿಗಳನ್ನು ಕೂಡಾ ಕಟ್ಟಲಾಗಿದೆ. ಇನ್ನು ಪ್ಲಾಸ್ಟರಿಂಗ್, ಸುಣ್ಣ– ಬಣ್ಣ ಅಲಂಕಾರ ಹಾಗೂ ಕಿಟಕಿ, ಬಾಗಿಲುಗಳ ಅಳವಡಿಕೆ ಕಾರ್ಯವಾಗಬೇಕಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್ ತಿಳಿಸಿದರು.
ಚನ್ನಗಿರಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳ ಕಟ್ಟಡ ಸಂಕೀರ್ಣದ ಪ್ಲಾಸ್ಟರಿಂಗ್ ಕಾರ್ಯ ನಡೆಯುತ್ತಿದ್ದು ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದುರವಿಕುಮಾರ್ ಲೋಕೋಪಯೋಗಿ ಇಲಾಖೆ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.