ADVERTISEMENT

ದಾವಣಗೆರೆ | ಹಿಂದುಳಿದ ವರ್ಗಗಳ ಸಂಘಟನೆಗೆ ಸಮಾವೇಶ: ಮಧು ಬಂಗಾರಪ್ಪ

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ‍್ಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 6:20 IST
Last Updated 16 ಡಿಸೆಂಬರ್ 2022, 6:20 IST
ಮಧು ಬಂಗಾರಪ್ಪ 
ಮಧು ಬಂಗಾರಪ್ಪ    

ದಾವಣಗೆರೆ: ಕೆಪಿಸಿಸಿಯಿಂದ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಸಮಾವೇಶವನ್ನು ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಆಯೋಜಿಸಲಾಗುವುದು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ‍್ಪ ಹೇಳಿದರು.

ಕಾಂಗ್ರೆಸ್‌ಗೆ ಪಾರಂಪರಿಕವಾಗಿ ಶೇ 75ರಷ್ಟು ಹಿಂದುಳಿದ ವರ್ಗಗಳ ಮತ ಇದೆ. ಹಿಂದುಳಿದ ವರ್ಗಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ,
ಸಂಘಟನೆ ಮಾಡುವುದು ಇಂದಿನ ರಾಜಕಾರಣದ ಅಗತ್ಯ. ಅತಿ ಹಿಂದುಳಿದ ವರ್ಗದವರನ್ನು ಮುಂಚೂಣಿಗೆ ತರಲುಹುಬ್ಬಳ್ಳಿ ಅಥವಾ ದಾವಣಗೆರೆಯಲ್ಲಿ ಸಮಾವೇಶ ಆಯೋಜಿಸಲಾಗುವುದು. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಭಾಗವಹಿಸುವರು. ಇದಕ್ಕೂ ಮೊದಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಜಿಲ್ಲಾ ಕೇಂದ್ರಕ್ಕೆ ಹೋಗಿ ಸಂಘಟನೆ ಮಾಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ಬೆಂಗಳೂರಿನಲ್ಲಿ ಕುಳಿತು ಪಕ್ಷದ ಯಾವುದೇ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಸರಿಯಲ್ಲ. ಇದು ನನ್ನ ಅಭಿಪ್ರಾಯವೂ ಹೌದು. ಜಿಲ್ಲಾ ಮಟ್ಟದ ನಾಯಕರಿಂದ ಮಾಹಿತಿ ಪಡೆದು‍ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು’ ಎಂದರು.

ADVERTISEMENT

ಹಿಂದುಳಿದ ವರ್ಗಗಳಿಗೆ ಆರ್ಥಿಕವಾಗಿ ಸಹಕಾರ ನೀಡಲು ಕಾಂಗ್ರೆಸ್‌ ಇದುವರೆಗೆ ಕಾರ್ಯಕ್ರಮ ಜಾರಿಗೆ ತಂದಿದೆ. ಮುಂದಿನ ಚುನಾವಣೆಯಲ್ಲೂ ಯೋಜನೆ ಜಾರಿಗೆ ತರಲಾಗುವುದು ಎಂದರು.

‘ಎಸ್‌.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಿದ್ದರು. ಆದರೆ ಬಿಜೆಪಿಯವರು ಎಲ್ಲದನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಉಜ್ವಲ ಯೋಜನೆಯಡಿ ಉಚಿತ ಸಿಲಿಂಡರ್‌ ಕೊಟ್ಟು, ಬಡ ಮಹಿಳೆಯರ ಕಣ್ಣೀರು ಒರೆಸಿದ್ದೇವೆ ಎಂದು ಪ್ರಚಾರ ಪಡೆದರು. ಆದರೆ ಅಡುಗೆ ಇಂಧನ ಹೆಚ್ಚಳದಿಂದ ಮಹಿಳೆಯರು ಇನ್ನೂ ಕಣ್ಣೀರು ಹಾಕುತ್ತಲೇ ಇದ್ದಾರೆ’ ಎಂದು ದೂರಿದರು.

‘ಬಿಜೆಪಿಯವರು ಧರ್ಮದ ಹೆಸರಿನಲ್ಲಿ ಜನರನ್ನು ಕೆರಳಿಸುತ್ತಿದ್ದಾರೆ. ಈಗಭತ್ತಕ್ಕೆ ಪ್ರೋತ್ಸಾಹಧನ ನೀಡುವಲ್ಲೂ ತಾರತಮ್ಯ ಮಾಡುವ ಮೂಲಕ ರೈತರನ್ನು ಒಡೆಯಲು ಮುಂದಾಗಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ , ಬಿಜೆಪಿ ಶಾಸಕರು ಹೆಚ್ಚಿ‌ದ್ದಾರೆ. ಹಾಗಾಗಿ ಅ‌ಲ್ಲಿಯವರಿಗೆ ಮಾತ್ರ ಪ್ರೋತ್ಸಾಹಧನ ನೀಡಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಭತ್ತ ಬೆಳೆಯುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

‘ಗಡಿ, ಜಾತಿ ಧರ್ಮ, ಹಲಾಲ್‌ ಕಟ್‌ನಂತಹ ಜನರ ಭಾವನೆ ಕೆರಳಿಸುವುದೇ ಬಿಜೆಪಿಯವರ ಕೆಲಸ.ಬಡವರಿಗೆ ಮನೆ ನೀಡುತ್ತಿಲ್ಲ. ಮನೆ ನೀಡಿಲ್ಲ ಎಂದರೆ ರಾಮ ಮಂದಿರ ನಿರ್ಮಿಸಿದ್ದೇವೆ ಎನ್ನುತ್ತಾರೆ. ರಾಮಮಂದಿರದಿಂದ ಎಲ್ಲರಿಗೂ ಮನೆ ಸಿಕ್ಕಂತೆಯೇ‘ ಎಂದು ಪ್ರಶ್ನಿಸಿದರು.

ಇದೆಲ್ಲಾ ಜನರಿಗೆ ಅರ್ಥವಾಗುತ್ತಿದೆ. ಬದಲಾವಣೆ ಗಾಳಿ ಬೀಸುತ್ತಿದೆ. ಜನರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ ಎಂದರು.

****

ಕೆಲ ಮುಖಂಡರು ಕಾಂಗ್ರೆಸ್‌ಗೆ ಬರುತ್ತಿರುವುದು ಒಳ್ಳೆಯದು. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ.

-ಮಧು ಬಂಗಾರಪ‍್ಪ, ಅಧ್ಯಕ್ಷ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.