ADVERTISEMENT

ಹಳ್ಳಿಗಳಲ್ಲೂ ಕಾಣಿಸಿಕೊಂಡಿದೆ ಕೊರೊನಾ

ನಗರದಲ್ಲಿ ಕಡಿಮೆಯಾಗುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಆತಂಕ ಮೂಡಿಸಿದ ಕೋವಿಡ್‌–19

ಬಾಲಕೃಷ್ಣ ಪಿ.ಎಚ್‌
Published 20 ಜೂನ್ 2020, 19:30 IST
Last Updated 20 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ದಾವಣಗೆರೆ: ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಿದ್ದ ಕೊರೊನಾ ವೈರಸ್‌ ಸೋಂಕು ನಗರ ಬಿಟ್ಟು ಹಳ್ಳಿಗಳಿಗೆ ಹರಡತೊಡಗಿದೆಯೇ ಎಂಬ ಆತಂಕ ಮೂಡಿದೆ.

ಗುರುವಾರ ಪತ್ತೆಯಾದ ಮೂರು ಪ್ರಕರಣಗಳಲ್ಲಿ ಇಬ್ಬರು, ಶುಕ್ರವಾರ ಪತ್ತೆಯಾದ 12 ಪ್ರಕರಣಗಳಲ್ಲಿ 5 ಮಂದಿ ಗ್ರಾಮೀಣ ಪ್ರದೇಶದವರು ಆಗಿರುವುದು ಈ ಸಂದೇಹಕ್ಕೆ ಕಾರಣವಾಗಿದೆ.

ಬುಧವಾರದವರೆಗೆ ಜಿಲ್ಲೆಯಲ್ಲಿ ಪತ್ತೆಯಾದ 230 ಪ್ರಕರಣಗಳಲ್ಲಿ 13 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದರೂ ಅವರ್ಯಾರೂ ಹಳ್ಳಿಯಲ್ಲೇ ಇದ್ದವರಲ್ಲ. ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟದ ಆರು ಮಂದಿ ಗುಜರಾತ್‌ನ ಅಹಮದಾಬಾದ್‌ನಿಂದ ಬಂದವರು. ಮಾದೇನಹಳ್ಳಿಯ ಯುವಕನನ್ನು ಕೂಡ ಲಾತೂರಿನಿಂದ ಸೊಲ್ಲಾಪುರಕ್ಕೆ ಬಂದು ಊರಿಗೆ ತೆರಳುತ್ತಿದ್ದಾಗ ಕ್ವಾರಂಟೈನ್‌ ಮಾಡಲಾಗಿತ್ತು. ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿಯ ಇಬ್ಬರು, ಬಸವಾಪಟ್ಟಣದ ಒಬ್ಬರು ಅಹಮದಾಬಾದ್‌ನಿಂದ ಬಂದವರು. ಆಲೂರು, ಆವರ ಗೊಳ್ಳದವರು ಮಹಾರಾಷ್ಟ್ರ ದಿಂದ ಮರಳಿದವರು. ದೇವರ ಬೆಳಕೆರೆಯಲ್ಲಿದ್ದ ವೃದ್ಧೆ ಬಸವರಾಜಪೇಟೆಯಿಂದ ಹೋದವರು. ಈ ವೃದ್ಧೆಯೊಬ್ಬರನ್ನು ಹೊರತುಪಡಿಸಿ ಎಲ್ಲರೂ ಮೊದಲೇ ಕ್ವಾರಂಟೈನ್‌ಗೆ ಒಳಗಾದವರು. ಗುಣಮುಖರಾದ ಬಳಿಕ ಊರಿಗೆ ಮರಳಿದವರು.

ADVERTISEMENT

ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿಯ ಮಹಿಳೆ, ದಾವಣಗೆರೆ ತಾಲ್ಲೂಕಿನ ಶ್ಯಾಗಲೆಯ ರೈತ, ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಗರ್ಭಿಣಿ, ದೊಡ್ಡಬಾತಿಯ ಇಬ್ಬರು ಯುವತಿಯರು, ಅವರಗೊಳ್ಳದ ಇಬ್ಬರು ಯುವತಿಯರು ಎಲ್ಲರೂ ಹಳ್ಳಿಯಲ್ಲಿರುವವರು. ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆಗೆ ಬಂದ ಬಳಿಕ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾದವರು. ಇದೇ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆ ಚನ್ನಗಿರಿಯವರಾಗಿದ್ದು, ಅವರ ಸಂಪರ್ಕಿತರಲ್ಲೂ ಸೋಂಕು ಪತ್ತೆಯಾಗುತ್ತಿದೆ.

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

‘ಎಪಿಡಮಿಕ್‌ ಎಂಬ ಶಬ್ದವೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ ಎಂಬುದನ್ನು ತೋರಿಸುತ್ತದೆ. ಅಲ್ಲೊಂದು ಇಲ್ಲೊಂದು ಕಾಣಿಸುತ್ತದೆ. ಈಗ ಗ್ರಾಮೀಣ ಪ್ರದೇಶಗಳಲ್ಲಿ ಪತ್ತೆಯಾಗಿರುವವರಿಗೆ ಹೇಗೆ ಬಂತು ಎಂಬುದನ್ನು ನಮ್ಮ ಸರ್ವೇಕ್ಷಣಾ ತಂಡ ಅತ್ಯಂತ ಪರಿಣಾಮಕಾರಿಯಾಗಿ ಪತ್ತೆಹಚ್ಚಲಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿದರು.

‘ಸೋಂಕು ಬಂದವರು ಕಂಟೈನ್‌ಮೆಂಟ್‌ ವಲಯಕ್ಕೆ ಹೋಗಿದ್ದಾರೆಯೇ ಅಥವಾ ಸೋಂಕು ಇರುವವರ ಭೇಟಿಯಾಗಿದ್ದಾರೆಯೇ ಎಂಬುದನ್ನು ಮೊದಲು ನೋಡುತ್ತೇವೆ. ಬಳಿಕ ಅವರ ಪ್ರಥಮ ಸಂಪರ್ಕದವರ ಟ್ರಾವೆಲ್‌ ಹಿಸ್ಟರಿ ನೋಡುತ್ತೇವೆ. ಯಾರಾದರೂ ಒಬ್ಬರು ಹೊರಗಿನಿಂದ ತಂದೇ ತಂದಿರುತ್ತಾರೆ. ಅದನ್ನು ಪತ್ತೆಹಚ್ಚುತ್ತೇವೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.