ADVERTISEMENT

ಕೋವಿಡ್‌-19: ಲೆಕ್ಕಕ್ಕೆ ಸಿಗದೆ ಸತ್ತವರ ನೆರಳು!

ಪರೀಕ್ಷೆ ಮಾಡಿಸಿಕೊಳ್ಳಲು ಇರುವ ಹಿಂಜರಿಕೆಯಿಂದಲೇ ಮರಣ, ಸೋಂಕಿತರ ಪ್ರಮಾಣ ಹೆಚ್ಚಲು ಕಾರಣ

ಬಾಲಕೃಷ್ಣ ಪಿ.ಎಚ್‌
Published 31 ಮೇ 2021, 21:36 IST
Last Updated 31 ಮೇ 2021, 21:36 IST
ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿಯಲ್ಲಿ ಕೊರೊನಾ ಬಾರದಂತೆ ಕಾಪಾಡು ಎಂದು ಭೂತಪ್ಪ, ಚೌಡಮ್ಮನಿಗೆ ಪೂಜೆ ಸಲ್ಲಿಸುತ್ತಿರುವ ಸ್ಥಳೀಯರು /ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್‌
ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿಯಲ್ಲಿ ಕೊರೊನಾ ಬಾರದಂತೆ ಕಾಪಾಡು ಎಂದು ಭೂತಪ್ಪ, ಚೌಡಮ್ಮನಿಗೆ ಪೂಜೆ ಸಲ್ಲಿಸುತ್ತಿರುವ ಸ್ಥಳೀಯರು /ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್‌   

ದಾವಣಗೆರೆ: ಹಳ್ಳಿಗಳಲ್ಲಿ ಜನರ ಸಾವಿನ ಸಂಖ್ಯೆ ಒಮ್ಮೆಲೇ ಏರಿದೆ. ಆದರೆ, ಕೊರೊನಾ ಲೆಕ್ಕಕ್ಕೆ ಸೇರುತ್ತಿರುವುದು ಬೆರಳೆಣಿಕೆಯಷ್ಟು. ಕೆಲವರ ಕೊರೊನಾ ಟೆಸ್ಟ್‌ ವರದಿ ನೆಗೆಟಿವ್ ಎಂದು ಬಂದಿದ್ದರೆ, ಹಲವರು ಪರೀಕ್ಷೆ ಮಾಡಿಸಿಕೊಳ್ಳದೇ ಜೀವ ಕಳೆದುಕೊಂಡಿದ್ದಾರೆ.

‘ಪ್ರಜಾವಾಣಿ’ ತಂಡ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿವಿಧ ಗ್ರಾಮಗಳ ಸುತ್ತಾಟ ನಡೆಸಿ ಅಲ್ಲಿನ ಪರಿಸ್ಥಿತಿಯನ್ನು ತಿಳಿಯಲು ಪ್ರಯತ್ನಿಸಿದಾಗ ಕಂಡುಬಂದ ವಾಸ್ತವ ಚಿತ್ರಣ ಇದು.

ಹರಿಹರ ತಾಲ್ಲೂಕಿನ ಕಡರನಾಯಕನಹಳ್ಳಿಯಲ್ಲಿ ಮೇ 1ರಿಂದ 21 ದಿನಗಳಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಕೊರೊನಾ ದೃಢಪಟ್ಟ ಪ್ರಕರಣಗಳು ಎರಡಷ್ಟೇ. ಇಷ್ಟೊಂದು ಸಾವುಗಳು ಸಂಭವಿಸಿದ್ದಾದರೂ ಹೇಗೆ ಎಂದರೆ, ಹತ್ತನ್ನು ಸಹಜ ಸಾವು ಎಂದು ಗುರುತಿಸಲಾಗಿದೆ. ಇಬ್ಬರು ಹೃದಯಾಘಾತದಿಂದ ಸತ್ತಿದ್ದಾರೆ. ಇಬ್ಬರು ಉಸಿರಾಟದ ಸಮಸ್ಯೆಯಿಂದ, ಇಬ್ಬರು ಕಡಿಮೆ ರಕ್ತದೊತ್ತಡದಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಇವೆಲ್ಲ ಕೊರೊನಾ ಲೆಕ್ಕಕ್ಕೆ ಸೇರಿಲ್ಲ. ಇದಲ್ಲದೇ ಇಬ್ಬರು ಕ್ಯಾನ್ಸರ್‌ನಿಂದ, ಒಬ್ಬರು ಬಿಳಿರಕ್ತಕಣದ ಕೊರತೆಯಿಂದ, ಒಬ್ಬರು ಪಾರ್ಶ್ವವಾಯುವಿನಿಂದ ನಿಧನರಾಗಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರ ಇರುವ ಗ್ರಾಮ ಎಂದು ನ್ಯಾಮತಿ ತಾಲ್ಲೂಕಿನ ರಾಮೇಶ್ವರವನ್ನು ಗುರುತಿಸಲಾಗಿದೆ. 1,400 ಜನಸಂಖ್ಯೆ ಇರುವ ಈ ಪುಟ್ಟ ಗ್ರಾಮದಲ್ಲಿ 92 ಮಂದಿಗೆ ಕೊರೊನಾ ಸೋಂಕು ಬಂದಿದೆ. ಇಲ್ಲಿಯೂ 9 ಮಂದಿ ಮೃತಪಟ್ಟಿದ್ದಾರೆ. ಕೊರೊನಾದಿಂದ ಇಬ್ಬರು ಸತ್ತಿದ್ದರೆ, ಏಳು ಮಂದಿಗೆ ಕೊರೊನಾ ಇಲ್ಲ ಎಂದು ನಮೂದಾಗಿದೆ.

ಬಿಳಿಚೋಡಿನಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಕೊರೊನಾ ಎಂದು ದಾಖಲಾಗಿರುವುದು ನಾಲ್ಕು ಪ್ರಕರಣಗಳಷ್ಟೆ.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಈ ರೀತಿ ಸಾವುಗಳು ಸಂಭವಿಸುತ್ತಿವೆ. ಆದರೂ ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ, ಸಮುದಾಯ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು ಜನರನ್ನು ಪರೀಕ್ಷೆ ಮಾಡಿಸಲು ಒತ್ತಾಯಿಸಿ ಸೋತು ಹೋಗಿದ್ದಾರೆ.

ಯಾರಿಗಾದರೂ ಜ್ವರ, ಶೀತ, ಕೆಮ್ಮು ಬಂದರೆ ತಮಗೆ ಗೊತ್ತಿರುವ ವೈದ್ಯರಿಂದ ಇಲ್ಲವೇ ಮೆಡಿಕಲ್‌ ಶಾಪ್‌ಗಳಿಂದ ಗುಳಿಗೆ ತೆಗೆದುಕೊಂಡು ಸುಮ್ಮನಿರುವ ಕಾರಣದಿಂದಾಗಿಯೇ ಸಾವು–ನೋವು ಜಾಸ್ತಿಯಾಗುತ್ತಿದೆ. ಜತೆಗೆ ಕೊರೊನಾ ಹಬ್ಬಲೂ ಕಾರಣವಾಗುತ್ತಿದೆ.

ಸಣ್ಣಪುಟ್ಟ ಕಾಯಿಲೆಗೆಲ್ಲ ಕೊರೊನಾ ಪರೀಕ್ಷೆ ಯಾಕೆ ಎಂಬುದು ಜನರ ಅಭಿಪ್ರಾಯ. ಶಾಸಕರನ್ನೂ ಒಳಗೊಂಡಂತೆ ಅನೇಕರು ಒತ್ತಾಯಿಸಿದ್ದರಿಂದ ಈಗ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರಾಮೇಶ್ವರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶಪ್ಪ, ಗ್ರಾಮದ ಮುಖಂಡ ಚಂದ್ರೇಗೌಡ.

ಜನರು ಪರೀಕ್ಷೆ ಮಾಡಿಸಲು ಹೋಗದೇ ಖಾಸಗಿ ವೈದ್ಯರಿಂದ ಹೈಡೋಸ್‌ ಗುಳಿಗೆ ತೆಗೆದುಕೊಳ್ಳುತ್ತಾರೆ. ಅದರ ಅಡ್ಡಪರಿಣಾಮದ ಅರಿವಿಲ್ಲದೇ ತೊಂದರೆಗೆ ಸಿಲುಕುತ್ತಿದ್ದಾರೆ ಎನ್ನುವುದು ಸ್ಥಳೀಯ ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯ.

ಸಿಸಿಸಿ: ಸ್ಥಳೀಯ ಸೋಂಕಿತರಿಗೆ ಸ್ಥಳೀಯವಾಗಿಯೇ ಕೋವಿಡ್‌ ಕೇರ್‌ ಸೆಂಟರ್‌ (ಸಿಸಿಸಿ) ಆರಂಭಿಸಿದರೆ ಮನೆಯಲ್ಲೇ ಉಳಿಯಲು ಪಟ್ಟು ಹಿಡಿಯುವುದು ತಪ್ಪಲಿದೆ ಎಂಬ ಕಾರಣಕ್ಕೆ ಕೂಲಂಬಿ ಗದ್ದಿಗೇಶ್ವರ ದೇವಸ್ಥಾನ ಸಮಿತಿ ಮತ್ತು ಅಲ್ಲಿನ ಗ್ರಾಮ ಪಂಚಾಯಿತಿ ಸೇರಿ ದೇವಸ್ಥಾನದ ಸಭಾಂಗಣದಲ್ಲಿಯೇ ಸಿಸಿಸಿ ತೆರೆದಿದ್ದಾರೆ. ಕಾರಿಗನೂರಿನಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನದಲ್ಲಿ ಸ್ಥಳೀಯರ ಸಹಕಾರ ಪಡೆದು ಸಿಸಿಸಿ ಆರಂಭಿಸಿದ್ದಾರೆ.

ದೇವರಿಗೆ ಮೊರೆ: ಹರಿಹರ ತಾಲ್ಲೂಕಿನ ಕಡಾರನಾಯಕನಹಳ್ಳಿ, ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿ ಸಹಿತ ವಿವಿಧೆಡೆ ಜನರು ಕೊರೊನಾ ಓಡಿಸಲು ದೇವರ ಮೊರೆ ಹೋಗಿದ್ದಾರೆ. ವಿವಿಧ ಪೂಜೆ, ಮಾರಿ ಗಡಿ ದಾಟಿಸುವುದು ಮುಂತಾದವುಗಳನ್ನೂ ಮಾಡುತ್ತಿದ್ದಾರೆ.

ಕೊರೊನಾಕ್ಕಿಂತ ಲಾಕ್‌ಡೌನ್‌ ಹೊಡೆತ ದೊಡ್ಡದು

‘ಕೊರೊನಾ ಬರುತ್ತದೆ, ಹೋಗುತ್ತದೆ. ಕೃಷಿ ಮಾಡದೇ ಇದ್ದರೆ ಹೊಟ್ಟೆ ತುಂಬುವುದು ಹೇಗೆ? ಮೊದಲು ಲಾಕ್‌ಡೌನ್‌ ತೆಗೆಯಬೇಕು’ ಎನ್ನುವುದು ದಾಗಿನಕಟ್ಟೆಯ ಕೃಷಿಕ ಕರಿಬಸಪ್ಪ ಒತ್ತಾಯಿಸಿದ್ದಾರೆ.

‘ಮಳೆ ಬಂದಿದೆ. ಕೃಷಿ ಚಟುವಟಿಕೆ ಆರಂಭವಾಗಿದೆ. ಆದರೆ ನಾವು ಬೆಳೆದ ಬೆಳೆಗಳಿಗೆ ಈ ಲಾಕ್‌ಡೌನ್‌ನಿಂದ ಬೆಲೆ ಸಿಗದೇ ಹೋದರೆ ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷರೂ ಆಗಿರುವ ಕೃಷಿಕ ಅಣಜಿಯ ಎಸ್‌.ಕೆ. ಚಂದ್ರಶೇಖರ್‌.

‘ನಾವು ಹೊಲಕ್ಕೆ ಹೋಗಿ ಬಿಡುತ್ತೇವೆ. ವ್ಯಾಪಾರಸ್ಥರು, ಖಾಸಗಿ ವಾಹನಗಳ ಚಾಲಕರು, ಕಂಡಕ್ಟರ್‌ಗಳು ಏನು ಮಾಡಬೇಕು’ ಎಂಬುದು ಬಿಳಿಚೋಡಿನ ಪರಮೇಶ್ವರ್‌, ಪರಶುರಾಮ, ಸಿದ್ದಪ್ಪ ಅವರ ಪ್ರಶ್ನೆ.

ಆಸ್ಪತ್ರೆಗಳಿವೆ, ಸಿಬ್ಬಂದಿ ಇಲ್ಲ

ಹೊನ್ನಾಳಿ, ಚನ್ನಗಿರಿ, ಹರಿಹರ, ಜಗಳೂರು ತಾಲ್ಲೂಕು ಆಸ್ಪತ್ರೆಗಳಲ್ಲಿ, ಮಲೇಬೆನ್ನೂರು, ನ್ಯಾಮತಿ ಇನ್ನಿತರ ಕಡೆಗಳ ಸಮುದಾಯ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ 50ರಷ್ಟು ಕೂಡ ವೈದ್ಯರಿಲ್ಲ, ಶುಶ್ರೂಷಕರಿಲ್ಲ. ಸಿಬ್ಬಂದಿ ಇಲ್ಲ. ಇದ್ದಿದ್ದರಲ್ಲೇ ಸುಧಾರಿಸಿಕೊಳ್ಳುತ್ತಿದ್ದಾರೆ. ಆಮ್ಲಜನಕ ಅಗತ್ಯ ಇರುವಷ್ಟು ಪೂರೈಕೆ ಇಲ್ಲ. ಮಲೇಬೆನ್ನೂರು ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್‌ಗಳು ತಯಾರಿವೆ. ಆದರೆ, ಟೆಕ್ನಿಷಿಯನ್‌ ಮತ್ತು ಆಮ್ಲಜನಕ ಎರಡೂ ಇಲ್ಲದೇ ಅವು ಚಾಲನೆಗೊಂಡಿಲ್ಲ.

‘ತಜ್ಞ ವೈದ್ಯರು, ಸಿಬ್ಬಂದಿಯ ಕೊರತೆಯನ್ನು ನೀಗಿಸಿದರೆ ಜನರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಆರೋಗ್ಯ ಸೇವೆಯನ್ನು ಒದಗಿಸಲು ಸಾಧ್ಯ’ ಎಂದು ಮಲೇಬೆನ್ನೂರು ಸಮುದಾಯ ಕೇಂದ್ರ ವೈದ್ಯರಾದ ಡಾ. ಕೆ.ಆರ್‌. ಗೌಡ, ಡಾ. ನಿಸಾರ್‌ ಅಹಮ್ಮದ್‌ ಸಮಸ್ಯೆ ವಿವರಿಸಿದರು.

ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಜನ ಬಾರದೇ ಇದ್ದರೂ ಲಸಿಕೆಗಾಗಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ ಲಸಿಕೆಗಳೇ ಸಿಗುತ್ತಿಲ್ಲ. ‘ಏಪ್ರಿಲ್ 1ರಂದು ನನ್ನ ತಂದೆಗೆ ಕೊವಾಕ್ಸಿನ್‌ ಲಸಿಕೆ ಮೊದಲ ಡೋಸ್‌ ಹಾಕಲಾಗಿತ್ತು. ಮೇ 16ಕ್ಕೆ ಎರಡನೇ ಡೋಸ್‌ಗಾಗಿ ಬರಲು ಹೇಳಿದ್ದರು. ಆದರೆ ಲಸಿಕೆ ನೀಡುತ್ತಿಲ್ಲ. ಈಗ 80 ದಿನ ಆಗಬೇಕು ಎಂದು ಹೇಳುತ್ತಿದ್ದಾರೆ’ ಎಂದು ಮಲೇಬೆನ್ನೂರಿನ ಕಿರಣ್‌ ಬೇಸರ ವ್ಯಕ್ತಪಡಿಸಿದರು.

***

ರಾಮೇಶ್ವರದಲ್ಲಿ ಕೊರೊನಾ ಸೋಂಕು ಹೆಚ್ಚು ವ್ಯಾಪಿಸಿದೆ ಎಂದು ಪ್ರಚಾರ ಆಗಿ, ಇಲ್ಲಿಯ ಜನರಿಗೆ ಕೂಲಿ ಕೆಲಸ ಕೂಡ ಸಿಗದಂತಾಗಿತ್ತು. ಈಗ ಎಲ್ಲ ಕಡೆ ಕೊರೊನಾ ಬಂದಿದೆ.

-ಮಲ್ಲೇಶಪ್ಪ, ರಾಮೇಶ್ವರ ಗ್ರಾ.ಪಂ. ಅಧ್ಯಕ್ಷ, ನ್ಯಾಮತಿ ತಾಲ್ಲೂಕು

***

ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರದ ಸೂಚನೆ ಬರುವುದಕ್ಕಿಂತ 10 ದಿನ ಮೊದಲೇ ನಾವು ಸಿಸಿಸಿ ತೆರೆದು ಇಲ್ಲಿನ ಸೋಂಕಿತರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ.

-ಸೋಮಶೇಖರ, ಕೂಲಂಬಿ ಗದ್ದಿಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ, ಹೊನ್ನಾಳಿ ತಾಲ್ಲೂಕು

***

ಸ್ಥಳೀಯ ಸೋಂಕಿತರನ್ನು ಎಲ್ಲೋ ಕೋವಿಡ್‌ ಸೆಂಟರ್‌ಗೆ ಹಾಕಿ ಅವರ ಆತ್ಮಸ್ಥೈರ್ಯ ಕುಂದಿಸುವ ಬದಲು ಸ್ಥಳೀಯವಾಗಿ ಸಿಸಿಸಿ ತೆರೆದರೆ ನೆಮ್ಮದಿಯಾಗಿರುತ್ತಾರೆ.

-ತೇಜಸ್ವಿ ವಿ.ಪಟೇಲ್‌, ರೈತ ಮುಖಂಡ, ಕಾರಿಗನೂರು, ಚನ್ನಗಿರಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.