ADVERTISEMENT

ದಾವಣಗೆರೆ| ಲಾಕ್‌ಡೌನ್‌ನಿಂದಾಗಿ ಮದುವೆಯನ್ನೇ ಮುಂದಕ್ಕೆ ಹಾಕಿದ್ದ ಪ್ರಮೋದ ನಾಯಕ

ಕೊರೊನಾ ನಿಯಂತ್ರಣಕ್ಕೆ ಸ್ವಯಂ ಬಂದೆ

ಬಾಲಕೃಷ್ಣ ಪಿ.ಎಚ್‌
Published 16 ಜೂನ್ 2020, 8:14 IST
Last Updated 16 ಜೂನ್ 2020, 8:14 IST
ಪ್ರಮೋದ ನಾಯಕ
ಪ್ರಮೋದ ನಾಯಕ   

ದಾವಣಗೆರೆ: ‘ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾಗಿತ್ತು. ಜಿಎಸ್‌ಟಿ ಕೆಲಸಗಳು ಮನೆಯಲ್ಲಿ ಕುಳಿತು ಕೆಲವು ಗಂಟೆಗಳಲ್ಲಿ ಮಾಡಬಹುದಾಗಿತ್ತು. ಹಾಗಾಗಿ ನಾನು ಲಭ್ಯವಿದ್ದೇನೆ. ಕೊರೊನಾ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗೆ ಸಂದೇಶ ಕಳುಹಿಸಿದೆ. ನಾಳೆಯೇ ಬನ್ನಿ ಎಂದು ಅವರು ಕೂಡಲೇ ಪ್ರತಿಕ್ರಿಯಿಸಿದರು’.

ಹಾವೇರಿ, ಚಿತ್ರದುರ್ಗ ಹಾಗೂ ದಾವಣಗೆರೆ ಕೇಂದ್ರ ಜಿಎಸ್‌ಟಿ ವಿಭಾಗಗಳ ಮುಖ್ಯಸ್ಥ, 2016ರ ಬ್ಯಾಚ್‌ನ ಭಾರತೀಯ ರೆವೆನ್ಯು ಸರ್ವಿಸ್‌ನ ಅಧಿಕಾರಿ ಪ್ರಮೋದ ನಾಯಕ ಅವರು ಸ್ವಯಂ ಪ್ರೇರಿತರಾಗಿ ಕೊರೊನಾ ನಿಯಂತ್ರಣದ ಕಾರ್ಯಾಚರಣೆಯ ಭಾಗವಾದವರು. ಈ ವಾರಿಯರ್‌ ತನ್ನ ಅನುಭವವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಅಗತ್ಯ ವಸ್ತು, ಮಾನವ ಸಂಪನ್ಮೂಲ ಪೂರೈಕೆಯ ನೋಡಲ್‌ ಅಧಿಕಾರಿಯಾಗಿ ನನ್ನನ್ನು ಜಿಲ್ಲಾಧಿಕಾರಿ ನೇಮಿಸಿದರು. ಎಲ್ಲಿಗೆ ಏನು ಬೇಕು? ಸಿಬ್ಬಂದಿ ಎಷ್ಟು ಬೇಕು? ಮುಂತಾದ ಬೇಡಿಕೆಗಳನ್ನು ಆಯಾ ಅಧಿಕಾರಿಗಳು ಮುಂದಿಟ್ಟಾಗ ಪೊಲೀಸ್‌ ಇಲಾಖೆ ಸಹಿತ ಅದಕ್ಕೆ ಸಂಬಂಧಿಸಿದವರಲ್ಲಿ ಮಾತನಾಡಿ ಕೂಡಲೇ ವ್ಯವಸ್ಥೆ ಮಾಡುವುದು ನನ್ನ ಕೆಲಸವಾಗಿತ್ತು’ ಎಂದು ಮಾಹಿತಿ ನೀಡಿದರು.

ADVERTISEMENT

ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸವನ್ನು ಮಧ್ಯಾಹ್ನ 12ರ ಒಳಗೆ ಲ್ಯಾಪ್‌ಟಾಪ್‌ನಲ್ಲಿ ಮಾಡಿ ಮುಗಿಸುತ್ತಿದ್ದೆ. ಬಳಿಕ ಸಂಜೆ 6.30ರ ವರೆಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುತ್ತಿದ್ದೆ. ನಾನು ಸೀಲ್‌ಡೌನ್‌ ಪ್ರದೇಶ, ಕ್ವಾರಂಟೈನ್‌ ಕೇಂದ್ರ, ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ. ಆದರೆ ಅಲ್ಲಿಗೆ ಅಗತ್ಯ ಇರುವುದನ್ನು ಒದಗಿಸಲು ಸಂವಹನವನ್ನು ಮಾಡುತ್ತಿದ್ದೆ ಎಂದು ಕೆಲಸದ ಪರಿಯನ್ನು ವಿವರಿಸಿದರು.

ವೈದ್ಯಕೀಯ ಕಾಲೇಜುಗಳ ಸಿಬ್ಬಂದಿಯನ್ನು ಸಿಜಿ ಆಸ್ಪತ್ರೆಗೆ ನಿಯೋಜಿಸಲು ನಾನು ಅವರೊಂದಿಗೆ ಸಮನ್ವಯ ಮಾಡಿದ್ದೆ. ವೈದ್ಯಕೀಯ ಕಾಲೇಜುಗಳು ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್‌ನ ಪ್ರಾಂಶುಪಾಲರು, ಐಎಂಎ ಜಿಲ್ಲಾಡಳಿತಕ್ಕೆ ಬೆಂಬಲ ನೀಡಿದರು.

ಒಮ್ಮೆಲೇ 22 ಪ್ರಕರಣಗಳು ಬಂದಿರುವುದೂ ಸೇರಿ ಕೊರೊನಾ ಸೋಂಕು ಸಾಲು ಸಾಲು ಕಾಣಿಸಿಕೊಂಡಾಗಲೂ ಜಿಲ್ಲಾಡಳಿತವು ಸಾಂಘಿಕ ಪ್ರಯತ್ನದಿಂದ ಆತ್ಮವಿಶ್ವಾಸದಿಂದ ಎದುರಿಸಿತ್ತು. ಜಿಲ್ಲಾಧಿಕಾರಿ, ಎಸ್‌ಪಿ ಸಹಿತ ಅಧಿಕಾರಿಗಳು 24*7 ಕೆಲಸ ಮಾಡಿದ್ದಾರೆ. ಸ್ಫೂರ್ತಿ ತುಂಬಿದ್ದಾರೆ. ಇನ್ನು ಎಷ್ಟೇ ಪ್ರಕರಣಗಳು ಬಂದರೂ ಎದುರಿಸಲು ಜಿಲ್ಲಾಡಳಿತ ಸಮರ್ಥವಾಗಿದೆ. ಅದಕ್ಕೆ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ, ಕಾರ್ಯಕರ್ತರ ಬದ್ಧತೆಯ ಕೆಲಸ ಕಾರಣ ಎಂದು ನೆನಪಿಸಿಕೊಂಡರು.

ಸರ್ಕಾರ, ಜಿಲ್ಲಾಡಳಿತ ಎಷ್ಟೇ ಪ್ರಯತ್ನ ಪಟ್ಟವರೂ ಜನಸಮುದಾಯ ಕೈ ಜೋಡಿಸದೇ ಯಶಸ್ವಿಯಾಗಲು ಸಾಧ್ಯವಿಲ್ಲ. ಆರ್ಥಿಕ ಚಟುವಟಿಕೆ ಆರಂಭಗೊಂಡಿದೆ. ಕೊರೊನಾ ಎಂದರೆ ಏನು ಎಂಬುದು ಜನರಿಗೆ ಗೊತ್ತಾಗಿದೆ. ಹಾಗಾಗಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ಬರಬೇಕು. ಜನರಲ್ಲಿ ಅರಿವು ಮೂಡಿದರೆ ಎಂಥಾ ಸವಾಲು ಬಂದರೂ ಎದುರಿಸಬಹುದು ಎಂದು ತಿಳಿಸಿದರು.

‘ಏಪ್ರಿಲ್‌ನಲ್ಲಿ ಮದುವೆ ಇತ್ತು’

‘ಏಪ್ರಿಲ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದೆ. ಲಾಕ್‌ಡೌನ್‌ನಿಂದಾಗಿ ಮದುವೆಯನ್ನು ಜೂನ್‌ ಕೊನೆಗೆ ಮುಂದೂಡಿದೆ. ನನ್ನ ಹೆತ್ತವರು ಅಂಕೋಲದಲ್ಲಿ ಇದ್ದಾರೆ. ಇಲ್ಲಿ ನಾನು ಒಬ್ಬನೇ ಇರುವುದರಿಂದ ಮನೆಯಲ್ಲಿ ಏನೂ ಸಮಸ್ಯೆಯಾಗಲಿಲ್ಲ. ಆದರೂ ಮಾಸ್ಕ್‌ ಹಾಕಿಕೊಂಡೇ ಓಡಾಡುತ್ತಿದ್ದೆ’ ಎಂದು ವೈಯಕ್ತಿಕ ಬದುಕಿನ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.