ADVERTISEMENT

ದಾವಣಗೆರೆ | ಸಂಕಷ್ಟಕ್ಕೆ ಸಿಲುಕಿದ ಅಕ್ಕಿ ಉದ್ಯಮ

ಪಡಿತರಕ್ಕೆ ಸ್ಥಳೀಯ ಮಿಲ್‌ಗಳಿಂದ ಅಕ್ಕಿ ಖರೀದಿಸಲು ಮಾಲೀಕರ ಒತ್ತಾಯ

ವಿನಾಯಕ ಭಟ್ಟ‌
Published 27 ಜುಲೈ 2020, 21:23 IST
Last Updated 27 ಜುಲೈ 2020, 21:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾವಣಗೆರೆ: ಬದಲಾದ ಆರ್ಥಿಕ ನೀತಿಗಳಿಂದಾಗಿ ಮೊದಲೇ ನಲುಗಿದ್ದ ಅಕ್ಕಿ ಉದ್ಯಮವನ್ನು ಕೋವಿಡ್‌ ಹಾಗೂ ಲಾಕ್‌ಡೌನ್‌ ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ. ಸ್ಥಳೀಯವಾಗಿ ಪಡಿತರ ಅಕ್ಕಿ ಖರೀದಿಸದೇ ಇರುವುದು, ಹೊರೆಯಾದ ಕನಿಷ್ಠ ವಿದ್ಯುತ್‌ ಶುಲ್ಕದಂತಹ ಸಮಸ್ಯೆಗಳು ಅಕ್ಕಿ ಗಿರಣಿಗಳನ್ನು ನಷ್ಟದೆಡೆಗೆ ಕೊಂಡೊಯ್ಯುತ್ತಿವೆ.

ಸಾಲದ ಸುಳಿಗೆ ಸಿಲುಕಿ, ರೈತರ ಭತ್ತಕ್ಕೆ ಹಣ ಪಾವತಿಸಲಾಗದೇ ಹರಿಹರದ ಹನಗವಾಡಿಯ ಎಂ.ಬಿ. ರೈಸ್‌ ಮಿಲ್‌ ಮಾಲೀಕ ಎಂ.ಎಸ್‌. ಅನಿಮಿಷ ಹಾಗೂ ಕುಣಿಬೆಳೆಕೆರೆಯ ಭತ್ತದ ವ್ಯಾಪಾರಿ ಕೆ.ಎಚ್‌. ಷಡಕ್ಷರಪ್ಪ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಜಿಲ್ಲೆಯ ಅಕ್ಕಿ ಉದ್ಯಮದಲ್ಲಿ ತಲ್ಲಣ ಮೂಡಿಸಿದೆ. ಎಂ.ಬಿ. ರೈಸ್‌ ಮಿಲ್‌ ಸುಮಾರು ₹ 4 ಕೋಟಿ ಬಾಕಿ ಉಳಿಸಿಕೊಂಡಿದ್ದರಿಂದ ಹಲವು ಬಾರಿ ರೈತರು ಮಿಲ್‌ ಎದುರು ಪ್ರತಿಭಟನೆಯನ್ನೂ ಮಾಡಿದ್ದರು.

ಪಡಿತರ ಅಕ್ಕಿ ಖರೀದಿಸಲಿ: ‘ಪಂಜಾಬ್‌, ಛತ್ತೀಸ್‌ಗಡದಿಂದ ಪಡಿತರಕ್ಕೆ ಅಕ್ಕಿ ತರಿಸುವುದರಿಂದ ಒಂದು ಕ್ವಿಂಟಲ್‌ಗೆ ₹ 300 ಸಾಗಾಟ ವೆಚ್ಚ ಬೀಳುತ್ತಿದೆ. ಇದರ ಬದಲು ಆಯಾ ರಾಜ್ಯದ ಸ್ಥಳೀಯ ರೈಸ್‌ ಮಿಲ್‌ಗಳಿಂದಲೇ ಅಕ್ಕಿಯನ್ನು ಖರೀದಿಸಿ ಪಡಿತರ ಅಂಗಡಿಗಳಿಗೆ ಕಳುಹಿಸಿದರೆ ಸರ್ಕಾರಕ್ಕೆ ಸಾಗಾಟ ವೆಚ್ಚದಲ್ಲಿ ಶೇ 40ರಷ್ಟು ಕಡಿಮೆಯಾಗಲಿದೆ. ಮಿಲ್‌ಗಳೂ ಉಳಿಯಲಿವೆ; ರೈತರಿಗೂ ಹೆಚ್ಚಿನ ಬೆಲೆ ಸಿಗಲಿದೆ. ಗುಣಮಟ್ಟದ ತಾಜಾ ಅಕ್ಕಿಯೂ ಜನರಿಗೆ ಸಿಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಮಲೇಬೆನ್ನೂರಿನ ಗುರು ರೇಣುಕಾ ರೈಸ್‌ ಇಂಡಸ್ಟ್ರೀಸ್‌ನ ಮಾಲೀಕ ಬಿ.ಎಂ. ವಾಗೀಶಸ್ವಾಮಿ ಒತ್ತಾಯಿಸುತ್ತಾರೆ.

ADVERTISEMENT

ಮಿಲ್‌ ಬಂದ್‌ ಆಗಿದ್ದರೂ ಪ್ರತಿ ತಿಂಗಳು ಸುಮಾರು ₹ 60 ಸಾವಿರ ಕನಿಷ್ಠ ಶುಲ್ಕವನ್ನು ಬೆಸ್ಕಾಂ ಪಡೆಯುತ್ತಿರುವುದು ಉದ್ಯಮಕ್ಕೆ ಮಾರಕವಾಗಿದೆ. ಎಷ್ಟು ಯೂನಿಟ್‌ ಬಳಕೆ ಮಾಡುತ್ತೇವೆಯೋ ಅಷ್ಟಕ್ಕೆ ಮಾತ್ರ ಹಣ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

‘ಲಾಕ್‌ಡೌನ್‌ ಜಾರಿಗೊಳಿಸಿದಾಗ ಕರ್ನಾಟಕದಿಂದ ಸುಮಾರು ಏಳು ಲಕ್ಷ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಾಪಸ್ಸಾಗಿದ್ದಾರೆ. ಮದುವೆ, ಸಮಾರಂಭಗಳು ನಡೆಯದಿರುವುದು ಹಾಗೂ ಹೋಟೆಲ್‌ಗಳಲ್ಲಿ ಸರಿಯಾಗಿ ವ್ಯಾಪಾರ ನಡೆಯದಿರುವುದರಿಂದ ಅಕ್ಕಿಗೆ ಬೇಡಿಕೆ ಇಲ್ಲದಂತಾಗಿದೆ. ನಾವು ಖರೀದಿಸಿದ ಭತ್ತದ ಬೆಲೆ ಹಾಗೂ ಈಗ ಮಾರುಕಟ್ಟೆಯಲ್ಲಿರುವ ಅಕ್ಕಿಯ ದರದ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ನಷ್ಟವಾಗುತ್ತಿದೆ’ ಎಂದು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷ ಬಿ. ಚಿದಾನಂದಪ್ಪ ಅಭಿಪ್ರಾಯಪಟ್ಟರು.

‘ಸ್ವಂತ ಬಂಡವಾಳ ಹೂಡಿದವರು ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳುತ್ತಿದ್ದಾರೆ. ಸಾಲ ಮಾಡಿ ಮಿಲ್‌ ನಡೆಸುತ್ತಿರುವವರಿಗೆ ತಡೆದುಕೊಳ್ಳಲಾಗುತ್ತಿಲ್ಲ’ಎಂದರು.

ಜಿಲ್ಲೆಯಲ್ಲಿ ಸುಮಾರು 2.50 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ ಭತ್ತ ಬೆಳೆಯಲಾಗುತ್ತಿದೆ. ಒಳ್ಳೆಯ ಮಿಲ್‌ ಗಂಟೆಗೆ ನಾಲ್ಕು ಟನ್‌ ಅಕ್ಕಿಯನ್ನು ಉತ್ಪಾದಿಸುತ್ತದೆ. ಜಿಲ್ಲೆಯಲ್ಲಿ ದಿನಕ್ಕೆ 2000 ಟನ್‌ ಅಕ್ಕಿ ತಯಾರಾಗಬಹುದು ಎಂದು ಅಂದಾಜಿಸಲಾಗಿದೆ.

*************

ಕೊರೊನಾದಿಂದ ಅಕ್ಕಿ ಗಿರಣಿ ಉದ್ಯಮಿಗಳಿಗೆ ನಷ್ಟವಾಗುತ್ತಿದೆ. ವಿದ್ಯುತ್‌ ಬಿಲ್‌, ನೌಕರರ ಸಂಬಳಕ್ಕೆ ಹಣ ಹೊಂದಿಸುವುದು ಕಷ್ಟವಾಗುತ್ತಿದೆ.
ಬಿ. ಚಿದಾನಂದಪ್ಪ, ಉಪಾಧ್ಯಕ್ಷ, ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘ

ಸರ್ಕಾರ ಉಚಿತವಾಗಿ ಪಡಿತರ ಅಕ್ಕಿ, ಆಹಾರದ ಕಿಟ್‌ ಕೊಡುತ್ತಿದೆ. ಕೊರೊನಾ ಸಂಕಷ್ಟದಿಂದ ಜನ ಪಡಿತರ ಅಕ್ಕಿಯನ್ನೇ ಉಣ್ಣು ತ್ತಿದ್ದಾರೆ. ನಮ್ಮ ಅಕ್ಕಿಗೆ ಬೇಡಿಕೆ ಕಡಿಮೆ ಯಾಗಿದೆ.
ಬಿ.ಎಂ. ವಾಗೀಶಸ್ವಾಮಿ, ಮಾಲೀಕ, ಗುರು ರೇಣುಕಾ ರೈಸ್‌ ಇಂಡಸ್ಟ್ರೀಸ್‌, ಮಲೇಬೆನ್ನೂರು

ರೈಸ್‌ ಮಿಲ್‌ಗಳು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಭತ್ತ ಖರೀದಿಸುತ್ತಿರುವುದರಿಂದ ನಷ್ಟವಾಗುವುದಿಲ್ಲ. ಕೆಲವರು ಐಷಾ ರಾಮಿ ಜೀವನ ನಡೆಸುತ್ತಿರುವುದರಿಂದ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ

–ಬಲ್ಲೂರು ರವಿಕುಮಾರ್‌, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.