ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 14:33 IST
Last Updated 16 ಜೂನ್ 2020, 14:33 IST
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯ ಖಂಡಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ಸಿಪಿಐ (ಎಂ) ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯ ಖಂಡಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ಸಿಪಿಐ (ಎಂ) ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೊರೊನಾ ವೈರಸ್ ಪಿಡುಗನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಸಂಪೂರ್ಣವಾಗಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ಮಂಗಳವಾರ ಮಣಿಕಂಠ ವೃತ್ತ, ನಿಟುವಳ್ಳಿ ಹಾಗೂ ಜಯದೇವ ವೃತ್ತಗಳಲ್ಲಿ ಪ್ರತಿಭಟನೆ ನಡೆಯಿತು.

‘ಲಾಕ್‍ಡೌನ್‍ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಕ್ರಮ ಜರುಗಿಸಲಿಲ್ಲ. ಕಾರ್ಮಿಕರಿಗೆ ಕೆಲಸ, ಆಹಾರ, ವಸತಿಯನ್ನು ಪೂರೈಸುವ ಬದಲು, ಉದ್ಯೋಗ, ಸಂಬಳ ಕಡಿತ, ಕೆಲಸದ ಅವಧಿ ಹೆಚ್ಚಳದಂತಹ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಸರ್ಕಾರ ನೊಂದ ಕುಟುಂಬಗಳಿಗೆ ಯಾವ ಪರಿಹಾರವನ್ನು ನೀಡದೇ ಲಾಕ್‍ಡೌನ್ ಹಿಂತೆಗೆದುಕೊಂಡಿದೆ. ಕೋವಿಡ್-19 ತಡೆಗಟ್ಟುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ಹೊರಿಸಿ ಕೈತೊಳೆದುಕೊಳ್ಳಲು ಹೊರಟಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

‘ಕೇರಳ ಕೊರೊನಾ ತಡೆಗಟ್ಟುವ ವಿಷಯದಲ್ಲಿ ವಿಶ್ವಕ್ಕೇ ಮಾದರಿಯಾಗಿದೆ. ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಿದ ಕೀರ್ತಿ ಅದಕ್ಕೆ ಸಲ್ಲುತ್ತದೆ. ಸೋಂಕಿನ ಎರಡನೇ ಸುತ್ತಿನ ಅಲೆಯನ್ನು ಎದುರಿಸಲು ಅದು ಸಿದ್ಧವಾಗಿದೆ’ ಎಂದರು.

ADVERTISEMENT

‘ಆದಾಯ ತೆರಿಗೆ ತೆರುವ ಮಿತಿಗಳ ಹೊರಗಿರುವ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ₹7,500ರಂತೆ ಆರು ತಿಂಗಳವರೆಗೆ ನಗದು ವರ್ಗಾವಣೆ ಮಾಡಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ.ಯಂತೆ ಆರು ತಿಂಗಳವರೆಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಉದ್ಯೋಗಖಾತ್ರಿ ಯೋಜನೆಯಡಿ ಹೆಚ್ಚಿಸಿದ ಕೂಲಿಯೊಂದಿಗೆ ಕನಿಷ್ಠ ವರ್ಷದಲ್ಲಿ 200 ದಿನಗಳ ಉದ್ಯೋಗ ನೀಡಬೇಕು. ನಗರದ ಬಡವರಿಗೂ ಉದ್ಯೋಗಖಾತ್ರಿಯನ್ನು ವಿಸ್ತರಿಸಬೇಕು. ನಿರುದ್ಯೋಗಿಗಳಿಗೆ ತಕ್ಷಣವೇ ನಿರುದ್ಯೋಗ ಭತ್ಯೆಯನ್ನು ಪ್ರಕಟಿಸಬೇಕು. ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು, ಸಾರ್ವಜನಿಕ ವಲಯದ ಖಾಸಗೀಕರಣವನ್ನು ಮತ್ತು ಕಾರ್ಮಿಕ ಕಾನೂನುಗಳ ರದ್ಧತಿಯನ್ನು ನಿಲ್ಲಿಸಬೇಕು, ಕರ್ನಾಟಕದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್ಸ್, ಅಗತ್ಯ ಔಷಧಿಗಳ ತೀವ್ರ ಕೊರತೆ ಇದ್ದು ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ರಾಜ್ಯಕ್ಕೆ ಪೂರೈಸಬೇಕು ಎಂದು ಒತ್ತಾಯಿಸಿದರು.

ಆನಂದರಾಜು ಕೆ.ಎಚ್., ಕೆ.ಎಲ್. ಭಟ್, ಶ್ರೀನಿವಾಸ, ತಿಮ್ಮಣ್ಣ ಹೊನ್ನೂರು, ಎ. ಗುಡ್ಡಪ್ಪ, ತಿಮ್ಮಾರೆಡ್ಡಿ, ಹನುಮಂತನಾಯ್ಕ, ಭರಮಪ್ಪ, ರಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.