ADVERTISEMENT

ಯುವಕರ ನಡುವೆ ಘರ್ಷಣೆ: ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:29 IST
Last Updated 6 ಡಿಸೆಂಬರ್ 2022, 5:29 IST
ಮಲೇಬೆನ್ನೂರು ಪಟ್ಟಣದಲ್ಲಿ ಸೋಮವಾರ ನಡೆದ ಯುವಕರ ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದರು
ಮಲೇಬೆನ್ನೂರು ಪಟ್ಟಣದಲ್ಲಿ ಸೋಮವಾರ ನಡೆದ ಯುವಕರ ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದರು   

ಮಲೇಬೆನ್ನೂರು:ಪಟ್ಟಣದ ನಂದಿಗುಡಿ ರಸ್ತೆಯ ಸಾಯಿ ಬೇಕರಿಯಲ್ಲಿ ಸೋಮವಾರ ಇಬ್ಬರು ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದಿದ್ದು, ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಇನ್ನೊಬ್ಬ ಗಾಯಗೊಂಡಿದ್ದಾನೆ.

ಬೇಕರಿಯಲ್ಲಿ ಇಬ್ಬರೂ ಜಗಳವಾಡಿಕೊಂಡಿದ್ದು,ಇರ್ಫಾನ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಅಭಿಷೇಕ್ ಎಂಬಾತನ ಎದೆಭಾಗ, ಹಾಗೂ ಕಣ್ಣಿಗೆ ಗಾಯವಾಗಿದೆ.

ಇಬ್ಬರಿಗೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ಕಳುಹಿಸಿದರು.

ADVERTISEMENT

ಯುವಕರಿಬ್ಬರ ಗಲಾಟೆ ವಿಷಯ ತಿಳಿಯುತ್ತಿದ್ದಂತೆ ಸಮುದಾಯ ಆರೋಗ್ಯ ಕೇಂದ್ರದ ಎದುರು ಜನರು ಜಮಾಯಿಸಿದರು. ಸ್ಥಳಕ್ಕೆ ಬಂದ ಪಿಎಸ್ಐ ರವಿಕುಮಾರ್ ಹಾಗೂ ಪೊಲೀಸರು ಜನರನ್ನು ಚದುರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಎಎಸ್‌ಪಿ ಕನ್ನಿಕಾ ಸಿಕ್ರಿವಾಲ್‌ ಸ್ಥಳಕ್ಕೆ ಭೇಟಿ ನೀಡಿದರು.

‘ಪ್ರಕರಣ ಸಂಬಂಧ ಸಿಸಿಟಿವಿ ಕ್ಯಾಮೆರಾದ ಫೂಟೇಜ್‌ ಪರಿಶೀಲಿಸಲಾಗಿದೆ. ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಪಿ ಸಿ.ಬಿ. ರಿಷ್ಯಂತ್‌ ತಿಳಿಸಿದರು.

ಎರಡೂ ಸಮುದಾಯದವರು ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡಬಾರದು. ಗಲಭೆಗಳು ನಡೆಯದಂತೆ ಯುವಕರಿಗೆ ತಿಳಿ ಹೇಳಬೇಕು ಎಂದು ಮುಖಂಡರಿಗೆ ಮನವಿ ಮಾಡಿದರು.

ಬೇಕರಿ ಬಂದ್‌ ಮಾಡಿಸಲಾಗಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಎಲ್ಲೆಡೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.