ದಾವಣಗೆರೆಯ ಎಂಬಿಎ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಚಿಂತಕ ಜಿ.ರಾಮಕೃಷ್ಣ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು
–ಪ್ರಜಾವಾಣಿ ಚಿತ್ರ
ದಾವಣಗೆರೆ: ಅಪಮೌಲ್ಯಕ್ಕೆ ಗುರಿಯಾಗಬೇಕಾಗಿದ್ದನ್ನು ಮೌಲ್ಯವೆಂಬಂತೆ ಮುಂದಿಟ್ಟು ಕಣ್ಣಿಗೆ ಸುಣ್ಣ ತುಂಬುವ ಕಾರ್ಯ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರೊ.ಬಿ.ವಿ.ವೀರಭದ್ರಪ್ಪ ಅವರಂತಹ ಲೇಖಕರನ್ನು ಆಶ್ರಯಿಸಿ ವೈಚಾರಿಕತೆಯನ್ನು ಬೆಳೆಸಿಕೊಂಡು ಸತ್ಯ–ಮಿಥ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಲೇಖಕ ಜಿ. ರಾಮಕೃಷ್ಣ ಸಲಹೆ ನೀಡಿದರು.
ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರೊ.ಬಿ.ವಿ. ವೀರಭದ್ರಪ್ಪ ಅವರ ವೈಚಾರಿಕ ಸಾಹಿತ್ಯದ ಕುರಿತು ಸೋಮವಾರ ಏರ್ಪಡಿಸಿದ್ದ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಉಚ್ಛ್ವಾಸ ಮತ್ತು ನಿಶ್ವಾಸ ಪ್ರಕ್ರಿಯೆಯಲ್ಲಿ ಗೋವು ಆಮ್ಲಜನಕವನ್ನೇ ಬಿಡುಗಡೆ ಮಾಡುತ್ತದೆ ಎಂಬುದಾಗಿ ನಂಬಿಸಲಾಗುತ್ತಿದೆ. ಗೋಮೂತ್ರ ಕ್ಯಾನ್ಸರ್ ಔಷಧವೆಂದು ಹೇಳಲಾಗುತ್ತಿದೆ. ‘ಮಂಗನಿಂದ ಮಾನವ’ ಎಂಬ ವಿಜ್ಞಾನಿಗಳ ಸಿದ್ಧಾಂತವನ್ನೇ ನಿರಾಕರಿಸುವ ಹುನ್ನಾರ ನಡೆಯುತ್ತಿದೆ. ಅಧಿಕಾರವಾಣಿಯಿಂದ ಹೊರಬರುವ ಮಾತುಗಳನ್ನು ಗಮನಿಸಿದಾಗ ಸಮಾಜ ಎತ್ತ ಹೆಜ್ಜೆ ಹಾಕುತ್ತಿದೆ ಎಂಬ ಸಂಶಯ ಮೂಡಿದೆ’ ಎಂದು ಹೇಳಿದರು.
‘ಅಸಮಾನತೆ ಮತಾಂತರಕ್ಕೆ ಕಾರಣವಾಗಿರುವುದು ಕಣ್ಮುಂದೆ ಇದೆ. ಡಾ.ಬಿ.ಆರ್. ಅಂಬೇಡ್ಕರ್ ಸಾವಿರಾರು ಜನರೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಶತಮಾನಗಳಿಂದ ಅನುಭವಿಸಿದ ಶೋಷಣೆಯಿಂದ ಬಿಡುಗಡೆ ಹೊಂದಲು ಏಕಿಷ್ಟು ವಿರೋಧ’ ಎಂದು ಪ್ರಶ್ನಿಸಿದರು.
‘ಶಂಕರಾಚಾರ್ಯರ ಬ್ರಹ್ಮಸೂತ್ರ ಮನು ಸಂಹಿತೆಯನ್ನು ಪುರಸ್ಕರಿಸಿದೆ. ಶೂದ್ರ ಮತ್ತು ಪಂಚಮರಿಗೆ ಕೂಲಿ ಕೊಡದೇ ದುಡಿಸಿಕೊಳ್ಳಬೇಕು ಎಂಬ ಸಲಹೆ ನೀಡಿದ ಮನುಸ್ಮೃತಿಯನ್ನು ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ್ ಕೂಡ ಪ್ರತಿಪಾದಿಸಿದ್ದಾರೆ. ಮನುಸ್ಮೃತಿಯನ್ನು ಮಾನ್ಯ ಮಾಡುವುದಾದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನಿಕ ಮೌಲ್ಯಗಳು ಏನಾಗಬಲ್ಲವು ಎಂಬುದನ್ನು ಯುವಸಮೂಹ ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ವೈದ್ದಿಕ ಸಾಹಿತ್ಯ ಪೂರ್ಣ ಅಪೌರುಷೇಯ. ವೇದಗಳಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಪ್ರಶ್ನೆ ಮತ್ತು ಚರ್ಚೆ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ಪ್ರಮುಖ ಅಸ್ತ್ರ. ಪ್ರಯೋಗಗಳ ಮೂಲಕ ಸತ್ಯವನ್ನು ಗುರುತಿಸಬೇಕು. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹಾಗೂ ಭೂರಹಿತರ ಸಮಸ್ಯೆಗೆ ಪರಿಹಾರ ಹುಡುಕಬೇಕು’ ಎಂದು ಸಲಹೆ ನೀಡಿದರು.
‘ಎಲ್ಲ ಕಾಲದಲ್ಲಿಯೂ ಯುವ ಜನಾಂಗಕ್ಕೆ ಆಯ್ಕೆಯ ಗೊಂದಲಗಳು ಎದುರಾಗುತ್ತವೆ. ಆದರೆ, ಈ ದ್ವಂದ್ವಗಳು ಇಂದಿನಷ್ಟು ತೀವ್ರವಾಗಿ ಇರಲಿಲ್ಲ. ಐಟಿ–ಬಿಟಿ ಉದ್ಯೋಗಿಗಳು ಸೇರಿದಂತೆ ಈ ತಲೆಮಾರು ಭಾರತವನ್ನು ಸಾಂಸ್ಕೃತಿಕವಾಗಿ ಮುಗಿಸಿಬಿಡಬಹುದಾದ ಬೆಳವಣಿಗೆಗಳ ಭಾಗವಾಗಿರುವುದು ವಿಪರ್ಯಾಸ’ ಎಂದು ಎಂ.ಎಸ್. ಆಶಾದೇವಿ ಬೇಸರ ವ್ಯಕ್ತಪಡಿಸಿದರು.
‘ವೀರಭದ್ರಪ್ಪ ಅವರ ಬೌದ್ಧಿಕತೆ ಮತ್ತು ತಾತ್ವಿಕತೆ 12ನೇ ಶತಮಾನದ ಶರಣರ ವೈಚಾರಿಕ ಪ್ರಜ್ಞೆಯಿಂದ ರೂಪುಗೊಂಡಿದೆ. ವೈದ್ದಿಕ ಸಂಸ್ಕೃತಿಯನ್ನು ವಿರೋಧಿಸಲು ಅವರು ಕರೆಕೊಟ್ಟಿಲ್ಲ. ಆದರೆ, ‘ವೇದ ಮತ್ತು ಮಹಿಳೆ’ ಎಂಬ ಲೇಖನದಲ್ಲಿ ವೈದ್ದಿಕ ಸಂಸ್ಕೃತಿಯ ಕರಾಳತೆಯನ್ನು ತೆರೆದಿಟ್ಟಿದ್ದಾರೆ. ಲಿಂಗ ಸಂವೇದನೆಯ ಸೂಕ್ಷ್ಮತೆಗಳ ಜೊತೆಯಲ್ಲಿ ಧರ್ಮ ಮತ್ತು ವೈಚಾರಿಕತೆಯನ್ನು ನಿರೂಪಿಸಿದ್ದಾರೆ’ ಎಂದು ವಿವರಿಸಿದರು.
‘ದೇವರು ಮತ್ತು ಧರ್ಮ ಬೇಕು. ನೈತಿಕ ಪ್ರಜ್ಞೆ ರೂಪಿಸುವ ಧರ್ಮದ ಅಗತ್ಯ ಎಲ್ಲರಿಗೂ ಇದೆ. ಆದರೆ, ಸಕಲ ಜೀವಿಗಳಿಗೂ ಲೇಸನ್ನೇ ಬಯಸುವುದು ಧರ್ಮ ಎಂಬ ಪ್ರಾಥಮಿಕ ಪಾಠವನ್ನು ತೊರೆದಿರುವ ಧರ್ಮದ ಹಂಗು ಇರಬೇಕಾಗಿಲ್ಲ ಎಂಬುದು ವೀರಭದ್ರಪ್ಪ ಅವರ ಒಟ್ಟು ಲೇಖನಗಳ ಧ್ವನಿ’ ಎಂದರು.
ಲೇಖಕ ಸತೀಶ್ ಕುಲಕರ್ಣಿ, ಅನಂತಮ್ಮ ವೀರಭದ್ರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.