ADVERTISEMENT

ಒಂದು ವರ್ಷದಲ್ಲಿ ₹1.09 ಕೋಟಿ ವಂಚನೆ

ಸೈಬರ್ ಅಪರಾಧ: 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 247 ಪ್ರಕರಣ ದಾಖಲು

ಡಿ.ಕೆ.ಬಸವರಾಜು
Published 28 ನವೆಂಬರ್ 2022, 11:52 IST
Last Updated 28 ನವೆಂಬರ್ 2022, 11:52 IST
ಬಿ. ಮಂಜುನಾಥ್‌
ಬಿ. ಮಂಜುನಾಥ್‌   

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧ ಕುರಿತು ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡುತ್ತಿದ್ದರೂ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

‘ಸೈಬರ್ ಅಪರಾಧಗಳಿಗೆ ಸಂಬಂಧಪಟ್ಟಂತೆ 2017ರಿಂದ 2022ರವರೆಗೆ 247 ಪ್ರಕರಣಗಳು ದಾಖಲಾಗಿವೆ. ಈ ವರ್ಷ ನವೆಂಬರ್ 27ರವರೆಗೆ ಜಿಲ್ಲೆಯಲ್ಲಿ 65 ಪ್ರಕರಣಗಳು ದಾಖಲಾಗಿದ್ದು, ಸಾರ್ವಜನಿಕರು ₹ 1.09 ಕೋಟಿಯಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಅವುಗಳಲ್ಲಿ 33 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ₹ 22.66 ಲಕ್ಷದಷ್ಟು ಹಣವನ್ನು ದೂರುದಾರರಿಗೆ ವಾಪಸ್ ಕೊಡಿಸಲಾಗಿದೆ’ ಎಂದು ಸಿಇಎನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಮಂಜುನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಒಟಿಪಿ ಪಡೆದು ಮೋಸ, ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ, ಲಾಟರಿ, ಬಹುಮಾನದ ಆಮಿಷ, ಸಾಲ ಕೊಡುವ ಸೋಗಿನಲ್ಲಿ ವಂಚನೆ, ಉದ್ಯೋಗದ ಆಮಿಷ ಹಾಗೂ ವೈವಾಹಿಕ ಜಾಲತಾಣಗಳ ಮೂಲಕ ವಂಚನೆ ಪ್ರಕರಣಗಳು ಪತ್ತೆಯಾಗಿವೆ. ವಂಚಕರು ಬ್ಯಾಂಕ್‌ ಅಧಿಕಾರಿ ಹೆಸರಿನಲ್ಲಿ ಗ್ರಾಹಕರ ಮೊಬೈಲ್‌ಗೆ ಕರೆ ಮಾಡಿ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿದೆ ಎಂದು ಹೇಳಿ ಕಾರ್ಡ್‌ ಮಾಹಿತಿ ಹಾಗೂ ಓಟಿಪಿ ಪಡೆದು ವಂಚಿಸುತ್ತಿದ್ದಾರೆ.

ADVERTISEMENT

ಉಡುಗೊರೆ ಆಸೆಗೆ ಹಣ ಕಳೆದುಕೊಂಡರು:

‘ನಮ್ಮ ಮನೆಗೆ ನ್ಯಾಪ್ಟಾಲ್ ಆನ್‌ಲೈನ್ ಶಾಪಿಂಗ್ ಕಂಪನಿಯಿಂದ 2021ರ ಡಿಸೆಂಬರ್ ತಿಂಗಳಲ್ಲಿ ಒಂದು ಪತ್ರ ಮತ್ತು ಸ್ಕ್ರಾಚ್‌ ಆ್ಯಂಡ್‌ ವಿನ್‌ ಕೂಪನ್‌ ಬಂದಿತ್ತು. ಅದನ್ನು ನೋಡಿದಾಗ ಲಕ್ಕಿ ಡ್ರಾದಲ್ಲಿ ನೀವು ಆಯ್ಕೆಯಾಗಿದ್ದೀರಿ ಎಂದು ಬರೆದಿತ್ತು. ಇದಾದ ಬಳಿಕ ಯಾರೋ ಒಬ್ಬ ನಮಗೆ ಕರೆ ಮಾಡಿ ನ್ಯಾಪ್ಟಾಲ್‌ ಆನ್‌ಲೈನ್‌ ಶಾಪಿಂಗ್‌ನ ಕಸ್ಟಮರ್‌ ಕೇರ್‌ ಅಧಿಕಾರಿ ಎಂದು ಮಾತನಾಡಿದ. ನೀವು ಲಕ್ಕಿ ಡ್ರಾದಲ್ಲಿ ₹ 8.40 ಲಕ್ಷ ಗೆದ್ದಿದ್ದೀರಿ. ಅದು ಬೇಕಿದ್ದರೆ ಜಿಎಸ್‌ಟಿ ಕಟ್ಟಬೇಕು ಎಂದು ಹೇಳಿದ. ಇದನ್ನು ನಂಬಿ ನಮ್ಮ ಯಜಮಾನರು ಆತನು ಹೇಳಿದ ಖಾತೆಗೆ ₹ 3.40 ಲಕ್ಷ ಹಾಕಿದರು. ಆಮೇಲೆ ಯಾವುದೇ ಗಿಫ್ಟ್‌ ಬರಲಿಲ್ಲ’ ಎಂದು ಜಗಳೂರಿನ ನೊಂದ ಮಹಿಳೆ ವಂಚನೆಗೆ ಒಳಗಾದ ಬಗ್ಗೆ ವಿವರಿಸಿದರು.

‘ಸಿಇಎನ್ ಠಾಣೆಗೆ ದೂರು ನೀಡಿದೆ. ಪೊಲೀಸರು ಕಳ್ಳರನ್ನು ಹಿಡಿದು ₹ 1.01 ಲಕ್ಷ ಹಣವನ್ನು ವಾಪಸ್ ಕೊಡಿಸಿದ್ದಾರೆ. ಮತ್ತೆ ಹಣ ಸಿಕ್ಕರೆ ವಾಪಸ್ ಕೊಡಿಸುವುದಾಗಿ ತಿಳಿಸಿದ್ದಾರೆ. ನಾವು ಬಡವರು ಹಣದ ಆಸೆಗೆ ಸಾಲ ಮಾಡಿ ಹಣ ಕಟ್ಟಿದ್ವುದೆ. ಪೊಲೀಸರು ವಾಪಸ್‌ ಕೊಡಿಸಿದ್ದರಿಂದ ಸಾಲ ತೀರಿಸಲು ಸಹಾಯವಾಯಿತು’ ಎಂದು ಅವರು ಹೇಳಿದರು.

ಒಟಿಪಿ ಪಡೆದು ವಂಚನೆ:

ನಗರದ ನಿವಾಸಿಯೊಬ್ಬರ ಮಗ ತನ್ನ ಸೈಕಲ್ ಮಾರಾಟ ಮಾಡಲು ಫೋಟೊ ತೆಗೆದು ಒಎಲ್‌ಎಕ್ಸ್‌ಗೆ ಹಾಕಿದ್ದ. ಅದನ್ನು ನೋಡಿದ ವ್ಯಕ್ತಿಯೊಬ್ಬ ಅವರಿಗೆ ಫೋನ್ ಮಾಡಿ ನಿಮ್ಮ ಸೈಕಲ್ ತೆಗೆದುಕೊಳ್ಳುತ್ತೇನೆ. ನೀವು ಮೊದಲು ಗೂಗಲ್ ಪೇನಲ್ಲಿ ₹ 4000 ಹಾಕಿದರೆ ಬಳಿಕ ನಾನು ನಿನ್ನ ಸೈಕಲ್ ಬೆಲೆ ಸೇರಿಸಿ ಒಟ್ಟಿಗೆ ಸೇರಿ ₹ 8000 ಹಾಕುತ್ತೇನೆ. ಅಲ್ಲದೆ, ಒಂದು ಒಟಿಪಿ ನಂಬರ್ ಬರುತ್ತದೆ ಅದನ್ನು ತಿಳಿಸು ಎಂದು ನಂಬಿಸಿದ್ದಾನೆ. ‌ಅದನ್ನು ನಂಬಿ ಒಟಿಪಿ ನಂಬರ್ ತಿಳಿಸಿದಾಗ ಅವರ ಖಾತೆಯಲ್ಲಿ ಇದ್ದ ₹ 74,000ವನ್ನು ಡ್ರಾ ಮಾಡಿಕೊಂಡಿದ್ದಾನೆ.

‘ಸಿಇಎನ್ ಠಾಣೆಗೆ ದೂರು ನೀಡಿದ ಬಳಿಕ ಕಳ್ಳನನ್ನು ಪತ್ತೆ ಹಚ್ಚಿ ₹45,000 ವಾಪಸ್ ಕೊಡಿಸಿದ್ದಾರೆ’ ಎಂದು ನಗರದ ನೊಂದ ನಿವಾಸಿ ತಿಳಿಸಿದರು.

‘ಕಳೆದ ಆಗಸ್ಟ್ 22ರಂದು ಇ–ಮೇಲ್‌ ಹಾಗೂ ಯುಪಿಐ ಖಾತೆಗಳನ್ನು ಹ್ಯಾಕ್‌ ಮಾಡಿ ಆನ್‌ಲೈನ್‌ ಮೂಲಕ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ಯುವಕನನ್ನು ಬಂಧಿಸಿದೆವು. ಈತ ನಗರದ ವ್ಯಕ್ತಿಯೊಬ್ಬರ ಫ್ಲಿಪ್‌ ಕಾರ್ಟ್‌ ಪೇ ಲೆಟರ್‌ ಖಾತೆ ಹ್ಯಾಕ್‌ ಮಾಡಿ ಪಾಸ್‌ವರ್ಡ್‌ ಬದಲಾಯಿಸಿ, ₹ 45,000 ಮೌಲ್ಯದ ವಸ್ತುಗಳನ್ನು ಖರೀದಿಸಿದ್ದ. ಆತ ಖರೀದಿ ಮಾಡಿದಾಗ ಬಿಲ್‌ಗಳೆಲ್ಲಾ ನಗರದ ವ್ಯಕ್ತಿಯ ಹೆಸರಿಗೆ ಬರಲು ಶುರುವಾದವು. ಈ ಕುರಿತು ಅವರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನು ಆಧರಿಸಿ
ನಮ್ಮ ಪೊಲೀಸರ ತಂಡ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಒಂದು ಪ್ರಕರಣ ಬೇಧಿಸಲು ಹಲವು ರಾಜ್ಯಗಳಿಗೆ ಹೋಗಬೇಕಾಗುತ್ತದೆ. ವಂಚಕರು ಬ್ಯಾಂಕ್ ಖಾತೆ ಒಂದು ರಾಜ್ಯದಲ್ಲಿ, ಕೆವೈಸಿಯನ್ನು ಮತ್ತೊಂದು ರಾಜ್ಯದ ಹೆಸರಿನಲ್ಲಿ ಕೊಟ್ಟಿರುತ್ತಾರೆ. ಒಂದು ರಾಜ್ಯದಲ್ಲೇ ಕುಳಿತು ಇಷ್ಟೆಲ್ಲಾ ವ್ಯವಹಾರ ಮಾಡುತ್ತಿರುತ್ತಾನೆ. ಜಿಲ್ಲೆಯಲ್ಲಿ ನಡೆದ ವಂಚನೆ ಪ್ರಕರಣಗಳು ಹೆಚ್ಚಾಗಿ ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರ ಪ್ರದೇಶ, ಹರಿಯಾಣ, ಬಿಹಾರ ರಾಜ್ಯಗಳಿಂದಲೇ ಪತ್ತೆಯಾಗಿವೆ’ ಎಂದು ಪೊಲೀಸರು ತಿಳಿಸಿದರು.

‘ಸೈಬರ್ ಅಪರಾಧಗಳಲ್ಲಿ ಶೇ 5ರಷ್ಟು ಹಣವನ್ನು ವಾಪಸ್ ಕೊಡಿಸಿದ್ದರೆ ಅದೇ ಹೆಚ್ಚು. ನಾವು ಈ ವರ್ಷ ಶೇ 25ರಷ್ಟು ಹಣವನ್ನು ಸಂತ್ರಸ್ತರಿಗೆ ಕೊಡಿಸಿದ್ದೇವೆ. ಮೋಸ ಮಾಡುವವರು ಒಂದೇ ಬಾರಿಗೆ ಎಲ್ಲಾ ಹಣವನ್ನು ತನ್ನ ಬ್ಯಾಂಕ್‌ ಖಾತೆಗೆ ಹಾಕಿಸಿಕೊಳ್ಳುವುದಿಲ್ಲ. ಬದಲಾಗಿ ಹಂತಹಂತವಾಗಿ, ಬಿಡಿಬಿಡಿಯಾಗಿ ಬೇರೆ ಬೇರೆ ರಾಜ್ಯಗಳಲ್ಲಿರುವ ಸಂಬಂಧಿಕರ ಖಾತೆಗೆ ಜಮಾ ಮಾಡಿಸಿಕೊಂಡಿರುತ್ತಾರೆ. ಒಂದು ಪ್ರಕರಣದಲ್ಲಿ ಕನಿಷ್ಠ 8ರಿಂದ 10 ಖಾತೆಗಳನ್ನು ಬಳಸಿರುತ್ತಾರೆ. ಇದರಿಂದಾಗಿ ಮೋಸ ಹೋದವರಿಗೆ ತಕ್ಷಣದಲ್ಲಿ ಹಣ ಕೊಡಿಸಲು ಆಗುವುದಿಲ್ಲ. ನಮ್ಮ ಬಳಿ ಬ್ಯಾಂಕ್ ಸರ್ವರ್ ಇಲ್ಲ. ಇದರಿಂದಾಗಿ ಬ್ಯಾಂಕ್‌ನವರು ಎಷ್ಟು ಬೇಗ ಸ್ಪಂದಿಸುತ್ತಾರೋ ಅಷ್ಟು ಬೇಗ ಹಣ ವಾಪಸ್ ಕೊಡಿಸುತ್ತೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಕರಣಗಳಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ತನಿಖೆ ನಡೆಯುತ್ತಿದೆ. ಈವರೆಗೆ ಯಾವೊಂದು ಪ್ರಕರಣಗಳಲ್ಲಿಯೂ ಶಿಕ್ಷೆ ಪ್ರಕಟವಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.

ಕಮೀಷನ್ ಆಸೆಯಿಂದ ಹಣ ಕಳೆದುಕೊಂಡ ವಿದ್ಯಾರ್ಥಿನಿ

‘ನಿಮ್ಮನ್ನು ಆನ್‌ಲೈನ್‌ ಪಾರ್ಟ್‌ ಟೈಮ್ ಹುದ್ದೆಗೆ ಆಯ್ಕೆ ಮಾಡಿದ್ದು, ಮನೆಯಲ್ಲೇ ಕುಳಿತು ಕೆಲಸ ಮಾಡಿ ದಿನಕ್ಕೆ ₹ 8,000 ಸಂಬಳ ಪಡೆಯಬಹುದು’ ಎಂದು ಅಪರಿಚಿತನೊಬ್ಬ 2021ರ ಡಿಸೆಂಬರ್‌ ತಿಂಗಳಲ್ಲಿ ನಗರದ ವಿದ್ಯಾರ್ಥಿನಿಯೊಬ್ಬರಿಗೆ ಕರೆ ಮಾಡಿ ನಂಬಿಸಿದ. ಅಲ್ಲದೆ, ಶಾಪಿಫೈ ಕಂಪನಿಯ ಪ್ರೊಡಕ್ಟ್‌ ಖರೀದಿಸಿದರೆ ಕಮಿಷನ್ ಬರುತ್ತದೆ ಎಂದು ನಂಬಿಸಿ ಟೆಲಿಗ್ರಾಂ ಆ್ಯಪ್‌ನಲ್ಲಿ ವಿವಿಧ ಪ್ರಾಡೆಕ್ಟ್‌ಗಳ ಚಿತ್ರಗಳನ್ನು ಕಳುಹಿಸಿದ.

ಇದನ್ನು ನಂಬಿದ ವಿದ್ಯಾರ್ಥಿನಿ ಆರಂಭದಲ್ಲಿ ₹ 100 ಕಳುಹಿಸಿದ್ದಾರೆ. ಆ ವೇಳೆ ಅವರಿಗೆ ₹ 350 ಕಮೀಷನ್ ಬಂದಿದೆ. ಇನ್ನಷ್ಟು ಹಣದ ಆಸೆಯಿಂದ ವಿದ್ಯಾರ್ಥಿನಿಯು ಆತನಿಗೆ 16 ಬಾರಿ ₹ 5 ಸಾವಿರದಿಂದ ₹ 20 ಸಾವಿರದವರೆಗೂ ಪೇಟಿಎಂ ಮೂಲಕ ಹಣ ಕಳುಹಿಸಿದ್ದಾರೆ. ಯಾವುದೇ ಕಮೀಷನ್ ಬಾರದೇ ಇದ್ದುದರಿಂದ ಹಣ ಹಾಕುವುದನ್ನು ನಿಲ್ಲಿಸಿದ್ದಾರೆ. ಅಪರಿಚಿತ ವ್ಯಕ್ತಿ ಟಾಸ್ಕ್ ಪೂರ್ಣಗೊಳಿಸದೇ ಹಣ ವಾಪಸ್ ಬರುವುದಿಲ್ಲ’ ಎಂದು ತಿಳಿಸಿದಾಗ ಮೋಸದ ಜಾಲ ಗೊತ್ತಾಗಿದೆ. ನಿರಾಶೆಗೊಂಡ ವಿದ್ಯಾರ್ಥಿನಿ ಕೊನೆಗೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

––

ಸೈಬರ್ ಅಪರಾಧ ತಡೆಗೆ ಪೊಲೀಸರ ಸಲಹೆಗಳು

* ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿಂಗ್‌ಗೆ ಸಂಬಂದಿಸಿದ ಮಾಹಿತಿಗಳಾದ ಡೆಬಿಟ್, ಕ್ರೆಡಿಟ್‌ ಕಾರ್ಡ್‌ ಸಂಖ್ಯೆಗಳು, ಎಕ್ಸ್‌ಪೈರಿ ಡೇಟ್‌, ಸಿವಿವಿ, ಒಟಿಪಿ, ಯುಪಿಐಐಡಿ, ಎಪಿನ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ

* ಎಸ್‌ಎಂಎಸ್, ವಾಟ್ಸ್‌ ಆ್ಯಪ್‌, ಫೇಸ್‌ಬುಕ್, ಮಸೆಂಜರ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಮೂಲಕ ಸ್ವೀಕರಿಸುವ ಎಸ್‌ಎಂಎಸ್‌ ಇ–ಮೇಲ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ

* ಗೂಗಲ್ ಸರ್ಚ್‌ನಲ್ಲಿ ಕಂಡು ಬರುವ ಕಾಂಟಾಕ್ಟ್ ನಂಬರ್, ಇ–ಮೇಲ್, ವೆಬ್‌ಸೈಟ್‌ಗಳನ್ನು ಬಳಸುವ ಮೊದಲು ಅದರ ನೈಜತೆಯನ್ನು ಪರಿಶೀಲಿಸಿ

*ಆನ್‌ಲೈನ್ ಮೂಲಕ ಸಾಲ ನೀಡುವ ಅನಧಿಕೃತ ಲೋನ್ ಆ್ಯಪ್ಸ್‌ಗಳನ್ನು ಬಳಸದಿರಿ.

*ಹೆಚ್ಚಿನ ಲಾಭ ನೀಡುವುದಾಗಿ ಆಮಿಷ ಒಡ್ಡುವ ಆನ್‌ಲೈನ್‌ ಮೂಲದ ಟ್ರೇಡಿಂಗ್‌ ವೆಬ್‌ಸೈಟ್‌, ಆ್ಯಪ್‌ಗಳ ಮೂಲಕ ಹಣ ಹೂಡಿಕೆ ಮಾಡಬೇಡಿ

* ಆನ್‌ಲೈನ್‌ ಮೂಲಕ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುವವರ ಬಗ್ಗೆ ಎಚ್ಚರವಹಿಸಿ

* ಒಎಲ್‌ಎಕ್ಸ್, ನಾಪ್ಟಾಲ್, ಮೀಶೋ, ಪೋಸ್ಟ್ ಜಾಹೀರಾತುಗಳ ಮೂಲಕ ನಿಮಗೆ ಲಾಟರಿ ಗಿಫ್ಟ್‌ ಬಂದಿದೆ ಎಂದು ನಂಬಿಸಿ ಮೋಸ ಮಾಡುವವರ ಬಗ್ಗೆ ಎಚ್ಚರ

*ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಫ್ರೆಂಡ್ ರಿಕ್ವೆಸ್ಟ್‌ ಸ್ವೀಕರಿಸಬೇಡಿ, ಅವರ ವಿಡಿಯೊ ಕಾಲ್ ಸ್ವೀಕರಿಸುವ ಮುನ್ನ ಜಾಗ್ರತೆವಹಿಸಬೇಕು.

* ಮಕ್ಕಳ ಅಶ್ಲೀಲ ಚಿತ್ರ ದೃಶ್ಯಾವಳಿಗಳನ್ನು ಆನ್‌ಲೈನ್‌ ಮೂಲಕ ಸರ್ಚ್ ಡೌನ್ಲೋಡ್, ಫಾರ್ವರ್ಡ್ ಮಾಡುವುದು ಅಪರಾಧ.

*ಸಾಮಾಜಿಕ ಜಾಲತಾಣ ಹಾಗು ಒಎಲ್ಎಕ್ಸ್‌ನಲ್ಲಿ ಮಿಲಿಟರಿ, ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ವಂಚನೆ ಮಾಡುತ್ತಿರುವವರ ಬಗ್ಗೆ ಎಚ್ಚರಿಕೆಯಿಂದ ಇರಿ.

––

ನಿರಂತರ ಜಾಗೃತಿ

‘ಸುಶಿಕ್ಷಿತರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಮೊಬೈಲ್‌ನಲ್ಲಿ ಲೋನ್ ಅಪ್ಲಿಕೇಷನ್‌ಗಳನ್ನು ಅನಗತ್ಯವಾಗಿ ಡೌನ್‌ಲೋಡ್ ಮಾಡಿಕೊಂಡು ವಂಚನೆಗೆ ಒಳಗಾಗುತ್ತಿದ್ದಾರೆ. ಎಲ್ಲಾ ಖಾತೆಗಳಿಗೂ ಒಂದೇ ಪಾಸ್‌ವರ್ಡ್‌ ಇಟ್ಟುಕೊಂಡಿರುತ್ತಾರೆ. ಇದರಿಂದ ಯಾಮಾರಿಸುವುದು ವಂಚಕರಿಗೆ ಸುಲಭವಾಗುತ್ತದೆ’ ಎಂದು ಸಿಇಎನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಬಿ. ಮಂಜುನಾಥ್ ತಿಳಿಸಿದರು.

‘ಸೈಬರ್ ಅಪರಾಧ ಕುರಿತು ಶಾಲೆ– ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ತಿಂಗಳ ಮೊದಲ ಬುಧವಾರ ಶಾಲೆ– ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇನ್‌ಸ್ಪೆಕ್ಟರ್ ಮತ್ತಿತರೆ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳ ದುಷ್ಪರಿಣಾಮಗಳು, ಹಣಕಾಸು ವಂಚನೆ ಹಾಗೂ ಮಾದಕ ವಸ್ತು ಜಾಗೃತಿ ಮೂಡಿಸುತ್ತಾರೆ’ ಎಂದು ಅವರು ಹೇಳಿದರು.

***

ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸೈಬರ್ ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಹಲವರಿಗೆ ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸಲಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ರಾಜಸ್ಥಾನಕ್ಕೂ ಹೋಗಿ ಆರೋಪಿಯನ್ನು ಬಂಧಿಸಲಾಗಿದೆ. ಈಗಾಗಲೇ ನಾನು ಮತ್ತು ಸಿಬ್ಬಂದಿ ಹಲವು ಕಾಲೇಜುಗಳಲ್ಲಿ ಸೈಬರ್ ಅಪರಾಧ ಕುರಿತು ಜಾಗೃತಿ ಮೂಡಿಸಿದ್ದೇವೆ.

ಸಿ.ಬಿ.ರಿಷ್ಯಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.