ADVERTISEMENT

ಹರಿಹರ–ತೋಳಹುಣಸೆ ಮಧ್ಯೆ ನಿತ್ಯ 4 ಬಸ್ ಸಂಚಾರ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:34 IST
Last Updated 22 ಮೇ 2025, 15:34 IST
ಹರಿಹರ: ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರವರು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಹೋಗುವ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಹರಿಹರ: ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರವರು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಹೋಗುವ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.   

ಹರಿಹರ: ಹರಿಹರದಿಂದ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸಂಚರಿಸುವ ಬಸ್‌ಗೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಗುರುವಾರ ಚಾಲನೆ ನೀಡಿದರು.

ಹರಿಹರ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದಿಂದ ನಿತ್ಯವೂ ವಿಶ್ವವಿದ್ಯಾಲಯಕ್ಕೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಈ ಬಸ್ ಸಂಚಾರದಿಂದ ಅನುಕೂಲವಾಗಲಿದೆ ಎಂದು ಸಂಸದರು ಹೇಳಿದರು.

‘ಹರಿಹರದಿಂದಲೇ ವಿಶ್ವವಿದ್ಯಾಲಯಕ್ಕೆ ನೇರವಾಗಿ ಈ ಬಸ್ ಸಂಚಾರ ಮಾಡಲಿದೆ. ವಿದ್ಯಾರ್ಥಿಗಳು ಹರಿಹರದಿಂದ ದಾವಣಗೆರೆಗೆ ತೆರಳಿ, ಅಲ್ಲಿಂದ ಮತ್ತೊಂದು ಬಸ್ ಹತ್ತುವ ಅಗತ್ಯ ಬರುವುದಿಲ್ಲ. ಹಾಗೆಯೇ ವಿಶ್ವವಿದ್ಯಾನಿಲಯದಿಂದ ನೇರವಾಗಿ ಹರಿಹರಕ್ಕೆ ಬಸ್ ಸಂಚಾರ ಇರಲಿದೆ’ ಎಂದು ಅವರು ಹೇಳಿದರು.

ADVERTISEMENT

ಹರಿಹರ ನಿಲ್ದಾಣದಿಂದ ಪ್ರತಿ ದಿನ ಬೆಳಿಗ್ಗೆ 8.30, 8.45, 9 ಮತ್ತು 9.15ಕ್ಕೆ ಬಸ್ ಹೊರಡಲಿದೆ. ಸಂಜೆ 4.30, 4.45, 5 ಮತ್ತು 5.15ಕ್ಕೆ ವಿಶ್ವವಿದ್ಯಾಲಯದಿಂದ ಹರಿಹರಕ್ಕೆ ಬಸ್ ಹೊರಡಲಿದೆ ಎಂದು ಕೆಎಸ್‌ಆರ್‌ಟಿಸಿ ಹರಿಹರ ಡಿಪೊ ಅಧೀಕ್ಷಕ ಅಜಗರ್ ಅಲಿ ಖಾನ್ ಮಾಹಿತಿ ನೀಡಿದರು.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ನಗರಸಭೆಯ ಉಪಾಧ್ಯಕ್ಷ ಸೈಯದ್ ಅಬ್ದುಲ್ ಅಲೀಂ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.