
ಹರಿಹರ: ‘ದಲಿತ ಸಂಘಟನೆಗಳ ಕಾರ್ಯಕರ್ತರು ಬೌದ್ಧಿಕ ಜ್ಞಾನ ಬೆಳೆಸಿಕೊಂಡಲ್ಲಿ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪ ಅವರ ಅನುಯಾಯಿಗಳೆಂದು ಹೇಳಲು ಅರ್ಹರಾಗುತ್ತಾರೆ’ ಎಂದು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕ ಅವರ ಮಹಾಪರಿನಿಬ್ಬಣ ನಿಮಿತ್ತ ನಗರದ ಹೊರವಲಯದ ಮೈತ್ರಿವನದಲ್ಲಿ ಶನಿವಾರ ಆಯೋಜಿಸಿದ್ದ ‘ಮೌಢ್ಯ ವಿರೋಧಿ ಪರಿವರ್ತನೆ, ವೈಚಾರಿಕ ಬೆಳಕಿನೆಡೆಗೆ ಸಾಗೋಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಧ್ಯಯನವಿಲ್ಲದೆ, ವಿಚಾರ ತಿಳಿಯದೆ ಅಂಬೇಡ್ಕರ್ ಮತ್ತು ಕೃಷ್ಣಪ್ಪ ಅವರ ಹೆಸರು ಹೇಳುತ್ತಾ ಸಾಗಿದರೆ, ನಮ್ಮ ಹೋರಾಟ ಜೊಳ್ಳಾಗುತ್ತದೆ. ಅಂತಃಸತ್ವದಿಂದ ಗಟ್ಟಿಯಾದರೆ ಮಾತ್ರ ಆ ಮಹನೀಯರು ಮಾಡಿದ ತ್ಯಾಗ, ಹೋರಾಟಕ್ಕೆ ಬೆಲೆ ಸಿಗುತ್ತದೆ. ಜೊತೆಗೆ ದಲಿತರ ಹಕ್ಕುಗಳ ರಕ್ಷಣೆಯಾಗುತ್ತವೆ’ ಎಂದು ಪ್ರತಿಪಾದಿಸಿದರು.
‘ನಗರದ ಎ.ಕೆ.ಕಾಲೊನಿಯಲ್ಲಿರುವ ಪ್ರೊ.ಬಿ.ಕೃಷ್ಣಪ್ಪ ಅವರು ಹುಟ್ಟಿದ ಮನೆಯ ಸ್ಮಾರಕ ಮಾಡುವಷ್ಟು ವಿಸ್ತಾರವಾಗಿಲ್ಲ. ಆ ಭಾಗದಲ್ಲಿ ಚಿಕ್ಕದಾದ ಗುರುತು ಮಾಡಿ ನಗರದ ಬೇರೆ ಭಾಗದಲ್ಲಿ ಸ್ಮಾರಕ ರಚಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.
‘ಹಳೆ ಕೋರ್ಟ್ ನಿವೇಶನದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಹಾಗೂ ಪ್ರೊ.ಬಿ.ಕೃಷ್ಣಪ್ಪರ ಸ್ಮಾರಕ ನಿರ್ಮಾಣದ ವಿಷಯವನ್ನು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಭರವಸೆ ನೀಡಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ದಾವಣಗೆರೆ ವಿ.ವಿ. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ವಿಜಯಕುಮಾರ ಎಚ್.ಜೆ. ಹಾಗೂ ನಗರಸಭೆ ಮಾಜಿ ಸದಸ್ಯ ಎಂ.ಬಿ.ಅಣ್ಣಪ್ಪ ಮಾತನಾಡಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಕಬ್ಬಳಿ ಮೈಲಪ್ಪ, ಗ್ರಾಮಾಂತರ ಪಿಎಸ್ಐ ಯುವರಾಜ್ ಕಂಬಳಿ, ಮುಖಂಡರಾದ ಎಂ.ಬಿ.ಅಣ್ಣಪ್ಪ, ವಕೀಲ ಸುಭಾಷ್ ಚಂದ್ರ ಭೋಸ್, ಎಂ.ಮಂಜುನಾಥ್, ಬಿ.ಮಗ್ದುಮ್, ಹೂವಿನಮಡು ಅಂಜಿನಪ್ಪ, ರಾಜನಹಳ್ಳಿ ಮಂಜುನಾಥ್ ಜಿ.ಎಂ, ಜಿಗಳಿ ಆನಂದಪ್ಪ, ಪ್ರಕಾಶ್ ಮಂದಾರ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.