ದಾವಣಗೆರೆ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ದತ್ತಾಂಶ ಸಂಗ್ರಹ ಕಾರ್ಯ ಯಶಸ್ವಿಯಾಗಿ ಮುನ್ನಡೆದಿದೆ. ಈವರೆಗೆ ಮನೆ ಮನೆ ಭೇಟಿ ಸಮೀಕ್ಷೆ ಕಾರ್ಯವು ಶೇ 100ರಷ್ಟು ಪೂರ್ಣಗೊಂಡಿದ್ದು, ರಾಜ್ಯದಲ್ಲೇ ದಾವಣಗೆರೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಮೇ 5ರಿಂದ ಗಣತಿದಾರರು ಮನೆ, ಮನೆಗೆ ಭೇಟಿ ನೀಡಿ ನಡೆಸುತ್ತಿರುವ ಸಮೀಕ್ಷೆಯನ್ನು ರಾಜ್ಯಾದ್ಯಂತ ಮೇ 29ರ ವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇ 30 ರಿಂದ ಜೂನ್ 1ರ ವರೆಗೆ ಮತಗಟ್ಟೆವಾರು ವಿಶೇಷ ಶಿಬಿರ ನಡೆಯಲಿದೆ. ಮತಗಟ್ಟೆ ಕೇಂದ್ರಗಳಲ್ಲಿ ಗಣತಿದಾರರು ಲಭ್ಯವಿರುತ್ತಾರೆ. ಯಾರನ್ನಾದರೂ ಬಿಟ್ಟು ಹೋಗಿದ್ದಲ್ಲಿ ಈ ಶಿಬಿರದ ವೇಳೆ ಸೇರ್ಪಡೆ ಮಾಡಬಹುದು. ಆನ್‍ಲೈನ್ ವೆಬ್‌ಸೈಟ್ http://schedulecastesurvey.karnataka.gov.in/selfdeclaration ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲೂ ಜೂನ್ 1ರ ವರೆಗೆ ಅವಕಾಶ ಇದೆ ಎಂದರು.
2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 3,18,305 ರಷ್ಟಿತ್ತು. ಸಮೀಕ್ಷೆ ವೇಳೆ 3,29,064 ಜನಸಂಖ್ಯೆ ಕಂಡುಬಂದಿದೆ. ದತ್ತಾಂಶ ಸಂಗ್ರಹಕ್ಕೆ 85,369 ಮನೆಗಳಿಗೆ ಭೇಟಿ ನೀಡುವ ಗುರಿ ಹೊಂದಲಾಗಿತ್ತು. ಈಗಾಗಲೇ 86,366 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಪ್ರತಿ ಮತಗಟ್ಟೆಗೆ ಒಬ್ಬರಂತೆ 1,693 ಗಣತಿದಾರರು, ಪರಿಶಿಷ್ಟ ಜಾತಿ ಹೆಚ್ಚಿರುವ ಮತಗಟ್ಟೆಗಳಲ್ಲಿ ಹೆಚ್ಚುವರಿಯಾಗಿ 119 ಗಣತಿದಾರರನ್ನು ನೇಮಿಸಲಾಗಿದೆ. ಪ್ರತಿ 10 ಸಮೀಕ್ಷಾದಾರರಿಗೆ ಒಬ್ಬರಂತೆ 169 ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು ಎಂದರು.
ಬೇಡ ಜಂಗಮಕ್ಕೆ ಸಂಬಂಧಿಸಿದಂತೆ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಏಕವ್ಯಕ್ತಿ ಆಯೋಗದ ಸೂಚನೆಯಂತೆ ಸಮೀಕ್ಷೆಯಲ್ಲಿ ಎಲ್ಲರಿಂದಲೂ ಮಾಹಿತಿ ಪಡೆಯಲಾಗಿದೆ. ಆದರೆ, ಪರಿಶೀಲನೆ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜೂನ್ 5 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗುವುದು. ಪ್ಲಾಸ್ಟಿಕ್ ಮುಕ್ತ ಕಚೇರಿ ಎಂದು ಘೋಷಿಸಲಾಗುವುದು ಎಂದು ಜಿ.ಎಂ.ಗಂಗಾಧರಮೂರ್ತಿ ತಿಳಿಸಿದರು.
ಶಾಲಾ ಕಾಲೇಜುಗಳ ಸುತ್ತಮುತ್ತಲಿನ 100 ಮೀ. ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರೆ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ನಗರಸಭೆಗೆ ನೀಡಬೇಕು. ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಮಾರಾಟ ಅಥವಾ ಬಳಕೆ ಮಾಡುವುದು ಕಂಡುಬಂದಲ್ಲಿ ಅಧಿಕ ದಂಡ ವಿಧಿಸುವುದಲ್ಲದೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಕೆ., ಡಿಡಿಪಿಯು ಕರಿಸಿದ್ದಪ್ಪ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 113 ಕಿ.ಮೀ. ಮಾರ್ಗದಲ್ಲಿ ಸಸಿ ನೆಡುವ ಕಾರ್ಯವನ್ನು ಹಮ್ಮಿಕೊಂಡಿದ್ದು ಪ್ರತಿ 1 ಕಿ.ಮೀ.ಗೆ 300 ಗಿಡದಂತೆ ಒಟ್ಟು 42000 ಸಸಿಗಳನ್ನು ನೆಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ತಿಳಿಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದ ಜಿಲ್ಲೆಯ 2 ಗ್ರಾಮಗಳಲ್ಲಿ ಮಾತ್ರ ಖಾಸಗಿ ಬೋರ್‌ವೆಲ್ ಕೊರೆಸಲಾಗಿದೆ. ಜಲಜೀವನ್ ನೀರಿನ ಗುಣಮಟ್ಟವನ್ನು ಪರಿಶೀಲಿಸಲಾಗಿದೆ ಎಂದರು. ಮಳೆಗಾಲ ಪ್ರಾರಂಭವಾಗಿರುವುದರಿಂದ ಚರಂಡಿಗಳ ಬಳಿ ಹಾದುಹೋಗಿರುವ ಪೈಪ್‌ಲೈನ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಕಲುಷಿತ ನೀರನ್ನು ಹೊರಹಾಕಲು ಕ್ರಮಕೈಗೊಳ್ಳಲಾಗಿದೆ. 6 ತಾಲ್ಲೂಕುಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದರು.
ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದು ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ರೈತರಿಗೆ ಅವಶ್ಯವಿರುವಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದೆ. ಆದರೂ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲಾಧಿಕಾರಿ ಎಚ್ಚರಿಸಿದರು. ರೈತರು ಡಿಎಪಿ ಗೊಬ್ಬರದ ಬದಲಾಗಿ ಗಂಧಕಯುಕ್ತ ಗೊಬ್ಬರ ಬಳಸಿದರೆ ಉತ್ತಮ ಇಳುವರಿ ಪಡೆಯಬಹುದು. ರೈತರು ಉತ್ತಮ ಗುಣಮಟ್ಟದ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿಯೇ ಖರೀದಿಸಬೇಕು. ಉತ್ಪನ್ನಗಳನ್ನು ಖರೀದಿಸಿದ ರಶೀದಿಗಳನ್ನು ಬೆಳೆ ಕಟಾವು ಮಾಡುವವರೆಗೂ ಇಟ್ಟುಕೊಂಡಿರಬೇಕು. ಬೀಜ ಗೊಬ್ಬರಗಳಲ್ಲಿ ಲೊಪದೋಷ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಂಡು ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.