
ದಾವಣಗೆರೆಯ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂಭಾಗದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯ ಮುಖಂಡರು ಪ್ರತಿಭಟನೆ ನಡೆಸಿದರು
–ಪ್ರಜಾವಾಣಿ ಚಿತ್ರ
ದಾವಣಗೆರೆ: ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬ್ಯಾಂಕ್ ನೌಕರರು ಮಂಗಳವಾರ ಮುಷ್ಕರ ನಡೆಸಿದರು.
ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರ, ಕೇಂದ್ರ ಹಣಕಾಸು ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆಗೆ ಪ್ರತಿಭಟನಕಾರರು ಒತ್ತಾಯಿಸಿದರು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಬಂದ್ ಮಾಡಿದ್ದರಿಂದ ಗ್ರಾಹಕರಿಗೆ ಬ್ಯಾಂಕ್ ಸೇವೆಯಲ್ಲಿ ಅಡಚಣೆಯಾಯಿತು.
ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಂಡಿಪೇಟೆ ಶಾಖೆಯ ಎದುರು ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.
ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಮಾತನಾಡಿ, ‘ಬ್ಯಾಂಕ್ ನೌಕರರ ದಶಕಗಳ ಬೇಡಿಕೆಯಾದ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ದಶಕಗಳಿಂದಲೂ ನಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಈ ಕಾರಣಕ್ಕೆ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದೇವೆ’ ಎಂದು ಹೇಳಿದರು.
‘ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಗಳ ನಡುವೆ 2024ರಲ್ಲಿ ಒಪ್ಪಂದವಾಗಿದೆ. ಆದರೆ, 2 ವರ್ಷವಾದರೂ ಬೇಡಿಕೆ ಈಡೇರಿಲ್ಲ. ಬ್ಯಾಂಕ್ ಉದ್ಯೋಗಿಗಳ ಸಹನೆಯ ಕಟ್ಟೆಯೊಡೆದು ಮುಷ್ಕರದ ಹಾದಿ ಹಿಡಿಯುವುದು ನಮಗೆ ಅನಿವಾರ್ಯವಾಗಿದೆ. ಪ್ರಸ್ತುತ ಬ್ಯಾಂಕ್ ಉದ್ಯೋಗಿಗಳು ಅತೀ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವ್ಯವಹಾರಕ್ಕೆ ತಕ್ಕಂತೆ ಉದ್ಯೋಗಿಗಳ ನೇಮಕಾತಿಯೂ ಆಗುತ್ತಿಲ್ಲ. ವಾರದ ದಿನಗಳಲ್ಲಿ ನೌಕರರು ರಾತ್ರಿ 10 ಗಂಟೆಯಾದರೂ ಮನೆಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರಿಸಿದರು.
‘ಐದು ದಿನದ ಬ್ಯಾಂಕಿಂಗ್ ವ್ಯವಸ್ಥೆ ಬಂದರೆ ನೌಕರರ ಕಾರ್ಯಕ್ಷಮತೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಅಲ್ಲದೇ ಕೇಂದ್ರ ಸರ್ಕಾರ ಅಧೀನದ ಅನೇಕ ಇಲಾಖೆಗಳು, ಜೀವ ವಿಮೆ, ಸಾಮಾನ್ಯ ವಿಮೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಬಿ, ನಬಾರ್ಡ್ ಮೊದಲಾದವು ವಾರಕ್ಕೆ 5 ದಿನ ಮಾತ್ರ ಕೆಲಸ ಮಾಡುತ್ತಿವೆ. ಜಾಗತಿಕ ಮಟ್ಟದಲ್ಲೂ ಅನೇಕ ರಾಷ್ಟ್ರಗಳಲ್ಲಿ 5 ದಿನದ ಬ್ಯಾಂಕಿಂಗ್ ಪದ್ಧತಿಯೇ ಜಾರಿಯಲ್ಲಿ ಇದೆ’ ಎಂದು ತಿಳಿಸಿದರು.
ಸಂಘಟನೆಯ ಮುಖಂಡರಾದ ಕೆ.ವಿಶ್ವನಾಥ ಬಿಲ್ಲವ, ಎಚ್.ಎಸ್.ತಿಪ್ಪೇಸ್ವಾಮಿ, ಪ್ರದೀಪ ಪಾಟೀಲ್, ಸುನೀಲ ಮ್ಯಾಗೇರಿ, ಸಿದ್ಧಾರ್ಥ ಸಿಂಗ್, ಎಂ.ಪಿ.ಕಿರಣಕುಮಾರ, ಕೆ.ವಿಜಯಕುಮಾರ, ಸಿ. ದುರುಗಪ್ಪ, ವಿಶ್ವಚೇತನ, ಅನುರಾಧಾ ಮುತಾಲಿಕ್, ದೀಪಾ ಗುಡಿ, ಎಂ.ಶಮಂತ್, ಜಿ.ಟಿ.ಬಸವರಾಜ, ಎಸ್.ರಶ್ಮಿ, ಮಧುಸ್ವಿನಿ ದೇಸಾಯಿ, ಎಸ್.ಪ್ರಶಾಂತ, ಅನಿಲಕುಮಾರ, ಗ್ರಾಮೀಣ ಬ್ಯಾಂಕಿನ ನಾಗರಾಜ ನಾಶಿ, ಮಹಮ್ಮದ್ ರಫೀ, ಪಿ.ಎನ್.ಸಿದ್ಧಾರ್ಥ, ಶ್ರೀಹರ್ಷ, ಮೂರ್ತಿ ನಾಯ್ಕ, ಎಂ.ಎಂ.ಸಿದ್ದಲಿಂಗಯ್ಯ, ಎಂ.ಡಿ.ವಿದ್ಯಾಸಾಗರ, ಅಣ್ಣಪ್ಪ, ನಂದಾ, ಕೆ.ಜಯಲಕ್ಷ್ಮಿ, ಆಕನೂರು ತಿಪ್ಪೇಸ್ವಾಮಿ, ಸೈಯದ್ ಚಾಂದಬಾಷಾ, ಜಿ.ಟಿ.ಶಕ್ತಿಪ್ರಸಾದ, ಆರ್.ಮಂಜಪ್ಪ, ಎಚ್.ಜೆ.ಆಶಾ ಇತರರು ಭಾಗವಹಿಸಿದ್ದರು.
‘ಬೇಡಿಕೆ ಈಡೇರಿಸುವಲ್ಲಿ ಸೋಲು’
‘ಕೇಂದ್ರ ಹಣಕಾಸು ಇಲಾಖೆ ಅನಗತ್ಯವಾಗಿ ಕಾಲಹರಣ ಮಾಡಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸೋತಿದೆ. ಮುಷ್ಕರದಲ್ಲಿ ಅಂದಾಜು 8 ಲಕ್ಷ ಬ್ಯಾಂಕ್ ನೌಕರರು- ಅಧಿಕಾರಿಗಳು ದೇಶವ್ಯಾಪಿ ಮುಷ್ಕರದಲ್ಲಿ ಪಾಲ್ಗೊಂಡು ಬೀದಿಗಿಳಿದು ಸರ್ಕಾರದ ವಿಳಂಬ ಧೋರಣೆ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಈ ಸಮಸ್ಯೆಗೆ ಕೇಂದ್ರವೇ ನೇರ ಹೊಣೆ’ ಎಂದು ಕೆ.ರಾಘವೇಂದ್ರ ನಾಯರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.