ADVERTISEMENT

ದಾವಣಗೆರೆ: ಪಾಲಿಕೆ ಎದುರು ನೌಕರರ ಧರಣಿ

ಕಚೇರಿಯಿಂದ ಹೊರಗುಳಿದು ಮುಷ್ಕರ, ಸಾರ್ವಜನಿಕರಿಗೆ ಲಭ್ಯವಾಗದ ಸೇವೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:39 IST
Last Updated 10 ಜುಲೈ 2025, 4:39 IST
ದಾವಣಗೆರೆ ಮಹಾನಗರ ಪಾಲಿಕೆ ನೌಕರರು ಹಾಗೂ ಪೌರಕಾರ್ಮಿಕರು ಕಚೇರಿ ಮುಂಭಾಗದಲ್ಲಿ ಬುಧವಾರ ಧರಣಿ ನಡೆಸಿ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮನವಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆ ಮಹಾನಗರ ಪಾಲಿಕೆ ನೌಕರರು ಹಾಗೂ ಪೌರಕಾರ್ಮಿಕರು ಕಚೇರಿ ಮುಂಭಾಗದಲ್ಲಿ ಬುಧವಾರ ಧರಣಿ ನಡೆಸಿ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮನವಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಪೌರಸೇವಾ ಸಂಸ್ಥೆಗಳ ನೌಕರರಿಗೂ 7ನೇ ವೇತನ ಆಯೋಗದ ಸೌಲಭ್ಯ ವಿಸ್ತರಿಸುವುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರು ನಡೆಸುತ್ತಿರುವ ಮುಷ್ಕರ ಮಂಗಳವಾರವೂ ಮುಂದುವರಿಯಿತು.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಪರಿಷತ್ತಿನ ನೇತೃತ್ವದಲ್ಲಿ ಹೋರಾಟ ಆರಂಭಿಸಿರುವ ನೌಕರರು, ಸೇವೆಯಿಂದ ಹೊರಗೆ ಉಳಿದು ಪಾಲಿಕೆಯ ಕಚೇರಿ ಎದುರು ಧರಣಿ ನಡೆಸಿದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.

‘ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ಮಹಾನಗರ ಪಾಲಿಕೆಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕಿದೆ. ಸರ್ಕಾರಿ ನೌಕರರಿಗೆ ಲಭ್ಯವಾಗುವ 7ನೇ ವೇತನ ಆಯೋಗದ ಸೌಲಭ್ಯವನ್ನು ಪೌರಸೇವಾ ಸಂಸ್ಥೆಗಳ ನೌಕರರಿಗೂ ವಿಸ್ತರಿಸಬೇಕು’ ಎಂದು ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಒತ್ತಾಯಿಸಿದರು.

ADVERTISEMENT

‘ಪೌರಕಾರ್ಮಿಕರು ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ ವಿಸ್ತರಿಸಿದರೆ ಅನುಕೂಲವಾಗಲಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರ ಕೂಡಲೇ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಸಹ ಕಾರ್ಯದರ್ಶಿ ನಾಮದೇವ್, ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪಾಂಡುರಾಜ್, ಎನ್.ನಾಗರತ್ನಮ್ಮ, ಚಂದ್ರಕುಮಾರ್, ಎಲ್.ಎಂ.ಎಚ್. ಸಾಗರ್, ಟಿ.ಸಿ. ಬಸವರಾಜ್, ಎನ್. ನೀಲಗಿರಿಯಪ್ಪ ಹಾಜರಿದ್ದರು.

ಪೌರಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತ ಮಕ್ಕಳ ಶಾಲಾ ಶುಲ್ಕ ಪಾವತಿಗೂ ಪರದಾಡುತ್ತಿದ್ದಾರೆ
ಎಲ್‌.ಎಂ.ಹನುಮಂತಪ್ಪ ಪೌರ ಕಾರ್ಮಿಕರ ಮುಖಂಡ

ಪಾಲಿಕೆ ಸೇವೆಯಲ್ಲಿ ವ್ಯತ್ಯಯ

ಮಹಾನಗರ ಪಾಲಿಕೆಯ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವುದರಿಂದ ಹಲವು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಜನನ ಮತ್ತು ಮರಣ ಪ್ರಮಾಣ ಪತ್ರ ಕಂದಾಯ ಪಾವತಿ ಪರವಾಗಿ ಟ್ರೇಡ್‌ ಲೈಸನ್ಸ್‌ ನವೀಕರಣ ಸೇರಿದಂತೆ ಹಲವು ಕಾರ್ಯಗಳಿಗೆ ಸಾರ್ವಜನಿಕರು ಪಾಲಿಕೆಯ ಕಚೇರಿಗಳಿಗೆ ಬಂದಿದ್ದರು. ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸೇವೆ ಲಭ್ಯವಾಗದೇ ಹಿಂದಿರುಗಿದರು. ಕಸ ವಿಲೇವಾರಿ ಸೇರಿದಂತೆ ಅಗತ್ಯ ಸೇವೆಗಳ ಮೇಲೂ ಮುಷ್ಕರ ಪರಿಣಾಮ ಬೀರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.