ADVERTISEMENT

ಬಸವಾಪಟ್ಟಣ: ಬಿತ್ತನೆ ಬೀಜ ಉತ್ಪಾದನಾ ಕೇಂದ್ರ ಆರಂಭಿಸಲು ಮನವಿ

ಹೊಸಳ್ಳಿ, ಪುಣ್ಯಸ್ಥಳದಲ್ಲಿ ಹಾಳಾಗುತ್ತಿವೆ ಉಗ್ರಾಣಗಳು

ಎನ್‌.ವಿ ರಮೇಶ್‌
Published 2 ಜನವರಿ 2025, 5:54 IST
Last Updated 2 ಜನವರಿ 2025, 5:54 IST
<div class="paragraphs"><p><strong>ಬಸವಾಪಟ್ಟಣ ಸಮೀಪದ ಹೊಸಳ್ಳಿಯಲ್ಲಿ ರಾಜ್ಯ ಉಗ್ರಾಣ ನಿಗಮ ನಿರ್ಮಿಸಿರುವ ಬೃಹತ್ ಉಗ್ರಾಣಗಳು</strong></p></div>

ಬಸವಾಪಟ್ಟಣ ಸಮೀಪದ ಹೊಸಳ್ಳಿಯಲ್ಲಿ ರಾಜ್ಯ ಉಗ್ರಾಣ ನಿಗಮ ನಿರ್ಮಿಸಿರುವ ಬೃಹತ್ ಉಗ್ರಾಣಗಳು

   

ಬಸವಾಪಟ್ಟಣ: ರೈತರ ಹಿತದೃಷ್ಟಿಯಿಂದ ರಾಜ್ಯ ಉಗ್ರಾಣ ನಿಗಮವು ಪುಣ್ಯಸ್ಥಳ ಮತ್ತು ಹೊಸಳ್ಳಿಯಲ್ಲಿ ನಿರ್ಮಿಸಿರುವ ಬೃಹತ್‌ ಉಗ್ರಾಣಗಳು ಹಲವು ವರ್ಷಗಳಿಂದ ಬಳಕೆಯಾಗದೇ ಹಾಳಾಗುತ್ತಿವೆ.

50 ವರ್ಷಗಳ ಹಿಂದೆ ರಾಜ್ಯ ಉಗ್ರಾಣ ನಿಗಮವು ಬಸವಾಪಟ್ಟಣ–ಸೂಳೆಕೆರೆ ರಾಜ್ಯ ಹೆದ್ದಾರಿಯಲ್ಲಿರುವ ಪುಣ್ಯಸ್ಥಳದಲ್ಲಿ 3,500 ಟನ್‌ ಸಾಮರ್ಥ್ಯದ 2 ಉಗ್ರಾಣಗಳನ್ನು ನಿರ್ಮಿಸಿತ್ತು. ಇಲ್ಲಿ ರೈತರು, ವ್ಯಾಪಾರಿಗಳು ವಿವಿಧ ಧಾನ್ಯಗಳನ್ನು ಸಂಗ್ರಹ ಮಾಡುತ್ತಿದ್ದರು. ಉಗ್ರಾಣ ನಿಗಮಕ್ಕೆ ಸಾಕಷ್ಟು ಬಾಡಿಗೆಯೂ ಬರುತ್ತಿತ್ತು. ಸರ್ಕಾರ ಸುಗ್ಗಿಕಾಲದಲ್ಲಿ ಇಲ್ಲಿ ಮೆಕ್ಕೆಜೋಳ ಮತ್ತು ಭತ್ತದ ಖರೀದಿ ಕೇಂದ್ರವನ್ನೂ ಆರಂಭಿಸುತ್ತಿತ್ತು. ಈ ಪ್ರಕ್ರಿಯೆಗಳು ಕ್ರಮೇಣ ನಿಂತು ಹೋಗಿದ್ದು, ಉಗ್ರಾಣಗಳು ಯಾವುದೇ ಚಟುವಟಿಕೆಗಳಿಲ್ಲದೇ ಬಿಕೋ ಎನ್ನುತ್ತಿವೆ. 

ADVERTISEMENT

‘2016ರಲ್ಲಿ ಅಂದಾಜು ₹12 ಕೋಟಿ ವೆಚ್ಚದಲ್ಲಿ ಸಮೀಪದ ಹೊಸಳ್ಳಿಯಲ್ಲಿ ಉಗ್ರಾಣ ನಿಗಮದಿಂದ 9000 ಟನ್‌ ಸಾಮರ್ಥ್ಯದ 2 ಉಗ್ರಾಣಗಳನ್ನು ನಿರ್ಮಿಸಲಾಗಿತ್ತು. ಇದಕ್ಕೆ ನಬಾರ್ಡ್‌ ಮತ್ತು ಆರ್‌.ಕೆ.ವಿ.ವೈ ಸಂಸ್ಥೆಗಳು ಧನಸಹಾಯವನ್ನೂ ನೀಡಿದ್ದವು. ಆದರೆ, ಈವರೆಗೂ ಈ ನೂತನ ಉಗ್ರಾಣಗಳ ಉದ್ಘಾಟನೆಯಾಗದೇ ಹಾಳು ಬಿದ್ದಿವೆ’ ಎನ್ನುತ್ತಾರೆ ಈ ಭಾಗದ ರೈತರು.

‘70 ವರ್ಷಗಳ ಹಿಂದೆ ಹೊಸಳ್ಳಿಯಲ್ಲಿ ಸರ್ಕಾರ ಬೀಜೋತ್ಪಾದನಾ ಕೇಂದ್ರವನ್ನು ಸ್ಥಾಪಿಸಿ ಹಲವು ವಿಧದ ಬೀಜಗಳ ಉತ್ಪಾದನೆ ಮಾಡುತ್ತಿತ್ತು. 40 ವರ್ಷಗಳ ಹಿಂದೆ ಅದು ಸ್ಥಗಿತವಾಗಿತ್ತು. ಈಗ ಅದೇ ಸ್ಥಳದಲ್ಲಿ ಬೃಹತ್‌ ಉಗ್ರಾಣಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಖಾಲಿ ಬಿಡುವ ಬದಲು ಹಿಂದಿನಂತೆ ಈ ಕಟ್ಟಡಗಳಲ್ಲಿ ರೈತರಿಗೆ ಅಗತ್ಯವಾದ ಬಿತ್ತನೆ ಬೀಜಗಳ ಉತ್ಪಾದನಾ ಕೇಂದ್ರ ಆರಂಭಿಸಬೇಕು. ಇದರಿಂದ ರೈತರು ಬಿತ್ತನೆಗಾಗಿ ಮೆಕ್ಕೆಜೋಳ, ಹೈಬ್ರಿಡ್‌ ಜೋಳ, ತೊಗರಿ, ಅವರೆ, ಹುರಳಿ, ಅಲಸಂದೆ, ರಾಗಿ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ಅನ್ಯಜಿಲ್ಲೆಗಳಿಂದ ಖರೀದಿಸುವುದು ತಪ್ಪುತ್ತದೆ’ ಎನ್ನುತ್ತಾರೆ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌.

‘ಚನ್ನಗಿರಿ ತಾಲ್ಲೂಕಿನಲ್ಲಿ ಅಂದಾಜು 40,000 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಪುಣ್ಯಸ್ಥಳದಲ್ಲಿರುವ ಉಗ್ರಾಣಗಳಲ್ಲಿ ಅಡಿಕೆ ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕು’ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಜಿ.ಬಿ.ಜಗನ್ನಾಥ್‌ ಆಗ್ರಹಿಸಿದ್ದಾರೆ. 

ಈ ಎರಡೂ ಗ್ರಾಮಗಳ ಉಗ್ರಾಣಗಳ ನಿರ್ವಹಣೆಗೆ ನಿಗಮವು ಒಬ್ಬ ವ್ಯವಸ್ಥಾಪಕರನ್ನು, ಒಬ್ಬ ಹಂಗಾಮಿ ಡಿ.ದರ್ಜೆ ನೌಕರನನ್ನು ನೇಮಿಸಿದೆ. ಆದರೆ, ಇಲ್ಲಿ ಯಾವ ಚಟುವಟಿಕೆಗಳೂ ನಡೆಯುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.‌

ರೈತರು ಹಾಗೂ ವ್ಯಾಪಾರಿಗಳು ಪುಣ್ಯಸ್ಥಳ ಮತ್ತು ಹೊಸಳ್ಳಿಯಲ್ಲಿರುವ ಉಗ್ರಾಣಗಳನ್ನು ಧಾನ್ಯ ಸಂಗ್ರಹಕ್ಕಾಗಿ ಬಳಸಿಕೊಳ್ಳುತ್ತಿಲ್ಲ. ಯಾರಾದರೂ ಬಳಸಿಕೊಳ್ಳಲು ಮುಂದೆ ಬಂದರೆ ಅವಕಾಶ ಕಲ್ಪಿಸಲಾಗುವುದು
ಎಚ್.ಎಂ.ಗಂಗಾಧರಯ್ಯ ಉಗ್ರಾಣ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.