ADVERTISEMENT

ಮೂಲ ಸೌಲಭ್ಯಗಳಿಂದ ವಂಚಿತ ದೇವನಾಯ್ಕನಹಳ್ಳಿ: ಗ್ರಾಮಸ್ಥರಿಂದ ಶಾಸಕ ಶಾಂತನಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 16:12 IST
Last Updated 6 ಆಗಸ್ಟ್ 2023, 16:12 IST
ಹೊನ್ನಾಳಿ ಪುರಸಭೆ ವ್ಯಾಪ್ತಿಯ ದೇವನಾಯ್ಕನಹಳ್ಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಶಾಸಕ ಡಿ.ಜಿ. ಶಾಂತನಗೌಡ ಅವರಿಗೆ ನಿವಾಸಿಗಳು ಮನವಿ ಸಲ್ಲಿಸಿದರು
ಹೊನ್ನಾಳಿ ಪುರಸಭೆ ವ್ಯಾಪ್ತಿಯ ದೇವನಾಯ್ಕನಹಳ್ಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಶಾಸಕ ಡಿ.ಜಿ. ಶಾಂತನಗೌಡ ಅವರಿಗೆ ನಿವಾಸಿಗಳು ಮನವಿ ಸಲ್ಲಿಸಿದರು   

ಹೊನ್ನಾಳಿ: ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿಯಿಂದ ಹೊನ್ನಾಳಿ ಪುರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿರುವ ದೇವನಾಯ್ಕನಹಳ್ಳಿಯು (ಟಿಬಿ ಸರ್ಕಲ್) ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ. 

ಶಾಸಕ ಡಿ.ಜಿ. ಶಾಂತನಗೌಡ ಅವರನ್ನು ಭಾನುವಾರ ಅವರ ಕಚೇರಿಯಲ್ಲಿ ಭೇಟಿ ಮಾಡಿ ನಿವಾಸಿಗಳು ಮನವಿ ಸಲ್ಲಿಸಿದರು. ‘ದೇವನಾಯ್ಕನಹಳ್ಳಿ ಹಾಗೂ ಹಿರೇಮಠ ಗ್ರಾಮಗಳು ಈ ಹಿಂದೆ ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ಸೇರಿದ್ದವು. ಪುರಸಭೆಯಾಗುವ ಸಂದರ್ಭದಲ್ಲಿ ಈ ಗ್ರಾಮಗಳನ್ನು ಹೊನ್ನಾಳಿಗೆ ಸೇರ್ಪಡೆ ಮಾಡಿಕೊಂಡಿದ್ದರಿಂದ ನಾವು ಪುರಸಭೆ ವ್ಯಾಪ್ತಿಗೆ ಸೇರಿದ್ದೇವೆ. ಆದರೂ ಮೂಲ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗಲೂ ನಮ್ಮ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆ ಇರಲಿಲ್ಲ’ ಎಂದು ಆಜಮ್ ಖಾನ್ ಮತ್ತು ಜೆಪ್ರುಲ್ಲಾ ಅವರು ಹೇಳಿದರು.

‘ದೇವನಾಯ್ಕನಹಳ್ಳಿಯಿಂದ ಶಿವಮೊಗ್ಗ ಮುಖ್ಯ ರಸ್ತೆಯ ಎಡಭಾಗದಲ್ಲಿರುವ ಕೆಲವು ರಸ್ತೆಗಳು, ದುರ್ಗಾಂಬಿಕಾ ದೇವಿ ದೇವಸ್ಥಾನದ ಬಲಭಾಗದ ರಸ್ತೆಗಳು ತುಂಬಾ ಹಾಳಾಗಿವೆ. ಮಳೆಗಾಲದಲ್ಲಂತೂ ಓಡಾಡಲು ಯೋಗ್ಯವಾಗಿರುವುದಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಚರಂಡಿ ಸ್ವಚ್ಛ ಮಾಡಿ ಎಷ್ಟೋ ವರ್ಷಗಳೇ ಕಳೆದಿವೆ. ಮಳೆ ನೀರು ಈ ಭಾಗದ ರಸ್ತೆಗಳ ಮೇಲೆ ಸಂಗ್ರಹವಾಗುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಹುತೇಕರು ದ್ವಿಚಕ್ರ ವಾಹನಗಳನ್ನು ಮುಖ್ಯ ರಸ್ತೆಯಲ್ಲಿಯೇ ಬಿಟ್ಟು ತಮ್ಮ ಮನೆಗಳಿಗೆ ತೆರಳುವ ಪ್ರಸಂಗ ಬಂದಿದೆ’ ಎಂದು ಹೇಳಿದರು. 

ADVERTISEMENT

ಕಳೆದ 30 ವರ್ಷಗಳಿಂದ ಇಲ್ಲಿನ ರಸ್ತೆಗಳು ಡಾಂಬರು ಕಂಡಿಲ್ಲ. ಪುರಸಭೆ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. 

ಶಾಸಕ ಶಾಂತನಗೌಡ ಅವರು ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ‘ಸಮಸ್ಯೆಗಳ ಬಗ್ಗೆ ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸ್ವಲ್ಪ ಸಮಯ ಕೊಡಿ’ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಿವಾಸಿಗಳಾದ ಸಿದ್ದೇಶ್, ಸೋಮಶೇಖರ್, ಶರತ್, ನಿವೃತ್ತ ಪೊಲೀಸ್ ಎಂ.ಬಸವರಾಜಪ್ಪ, ಅಬ್ದುಲ್ ವಾಜಿದ್, ದ್ಯಾಮಣ್ಣ, ಮಹಾಂತೇಶ್, ರಾಘವೇಂದ್ರಚಾರ್, ಕರವೇ ವಿನಯ್ ಕುಮಾರ್, ಪುಟ್ಟಸ್ವಾಮಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.