
ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳಿಗೆ ಅಧಿಕೃತ ಚಾಲನೆ, ಪೂಜೆ ನೆರವೇರಿಸಿದ ಸಚಿವ
ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಂದರಗಂಬ ಪೂಜೆ ಶಿವಾಜಿ ವೃತ್ತದ ದೇಗುಲದ ಮುಂಭಾಗದಲ್ಲಿ ಮಂಗಳವಾರ ನೆರವೇರಿತು. ಈ ಮೂಲಕ ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳಿಗೆ ಅಧಿಕೃತ ಚಾಲನೆ ದೊರೆಯಿತು.
ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಂದಗಂಬಕ್ಕೆ ಕಂಕಣ ಧಾರಣೆ ಮಾಡಿದರು. ಪತ್ನಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ಮಂಗಳಾರತಿ ನೆರವೇರಿಸಿ ಭಕ್ತಿಯಿಂದ ನಮಿಸಿದರು. ಧರ್ಮದರ್ಶಿಗಳು, ಗೌಡರು, ಬಣಕಾರರು ಸೇರಿದಂತೆ ನೂರಾರು ಭಕ್ತರು ಸಾಕ್ಷಿಯಾದರು.
21 ಅಡಿ ಎತ್ತರದ ಹಂದರಗಂಬದ ಸಿದ್ಧತೆ ಕಾರ್ಯ ಸೋಮವಾರದಿಂದ ಆರಂಭವಾಗಿತ್ತು. ಹಲವು ವರ್ಷಗಳಿಂದ ಹಂದರಕ್ಕೆ ಮೀಸಲಾದ ಈ ಕಂಬವನ್ನು ಹೊರತೆಗೆದು ಶುಚಿಗೊಳಿಸಲಾಯಿತು. ತರಹೇವಾರಿ ಪುಷ್ಪಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.
ಹಂದರಗಂಬ ಪೂಜೆಯ ಅಂಗವಾಗಿ ದೇವಿಗೆ ಮಂಗಳವಾರ ಬೆಳಿಗ್ಗೆ ಅಭಿಷೇಕ ನೆರವೇರಿಸಲಾಯಿತು. ನಾಗರಾಜ ಜೋಯಿಸರ ಸಾರಥ್ಯದಲ್ಲಿ ಪೂಜಾ ಕೈಂಕರ್ಯ, ಮಂತ್ರಘೋಷಗಳು ಮೊಳಗಿದವು. ಜಾತ್ರಾ ಮಹೋತ್ಸವಕ್ಕೆ ವಿಘ್ನಗಳು ಎದುರಾಗದಂತೆ ಪ್ರಾರ್ಥಿಸಲಾಯಿತು. ಗರ್ಭಗುಡಿಯಿಂದ ಕಂಕಣ ತಂದು ಹಂದರಗಂಬಕ್ಕೆ ಕಟ್ಟಲಾಯಿತು. ಬಳಿಕ ಹಾಲು, ತುಪ್ಪವನ್ನು ಅರ್ಪಿಸಿ ಹಂದರಗಂಬವನ್ನು ಹುಗಿಯಲಾಯಿತು.
ಹಂದರಗಂಬ ಪೂಜೆ ನೆರವೇರಿದ್ದರಿಂದ ಜ.23ರಂದು ಡಬ್ಬಿಗಡಿಗೆ (ದೇಣಿಗೆ ಸಂಗ್ರಹ) ಕಾರ್ಯ ಆರಂಭವಾಗಲಿದೆ. ವಾಲಗ, ಭಜಂತ್ರಿ ಮೂಲಕ ಡಬ್ಬಿಗಡಿಗೆ ನಗರದ ಎಲ್ಲೆಡೆ ಸಾಗಲಿದೆ. ಭಕ್ತರು ನೀಡುವ ಕಾಣಿಕೆ, ದೇಣಿಗೆಯಿಂದ ಜಾತ್ರಾ ಮಹೋತ್ಸವ ನೆರವೇರಿಸುವ ವಾಡಿಕೆ ಇಲ್ಲಿದೆ.
ಹಂದರಗಂಬ ಹಾಕಿದ ಬಳಿಕ ದೇಗುಲದ ಮುಂಭಾಗದಲ್ಲಿ ಮಹಾಮಂಟಪ ನಿರ್ಮಾಣ ಕಾರ್ಯ ಶುರುವಾಗಲಿದೆ. ಪೂರ್ವ ದಿಕ್ಕಿನಲ್ಲಿ ಅಮ್ಮನ ಬಾಬದಾರರು ಫೆ. 20ರಂದು ಮತ್ತೊಂದು ಹಂದರಗಂಬ ಹಾಕಲಿದ್ದಾರೆ. ಅಲ್ಲಿಂದ ಜಾತ್ರೆಯು ಮತ್ತೊಂದು ಘಟ್ಟಕ್ಕೆ ಹೊರಳಲಿದೆ. ಫೆ.24ರಂದು ಉಡಿತುಂಬುವ ಕಾರ್ಯ ನಡೆಯಲಿದ್ದು, ನಗರದಲ್ಲಿ ದೇವಿಯ ಮೆರವಣಿಗೆ ನಡೆಯಲಿದೆ. ಫೆ.25ರಂದು ಮಧ್ಯಾಹ್ನದ ಬಳಿಕ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಅಸ್ತಿತ್ವಕ್ಕೆ ಬಂದ ಸಮಿತಿ
ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಟ್ರಸ್ಟ್ ವತಿಯಿಂದ ಐದು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಸಮಿತಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
‘ಕುರಿ ಕಾಳಗ ಸಮಿತಿ, ಕುಸ್ತಿ ಸಮಿತಿ, ಪೆಂಡಾಲ್ ಸಮಿತಿ, ಸಾಂಸ್ಕೃತಿಕ ಸಮಿತಿ ಹಾಗೂ ಮೆರವಣಿಗೆ ಸಮಿತಿ ರಚಿಸಲಾಗಿದೆ. ಫೆ.26ರಿಂದ ಆರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು 15 ದಿನ ನಡೆಯಲಿವೆ’ ಎಂದು ಸಾಂಸ್ಕೃತಿಕ ಸಮಿತಿಯ ಕರಿಗಾರ ಬಸಪ್ಪ ಮಾಹಿತಿ ನೀಡಿದರು.
ಮೂರು ಮಾರ್ಗಗಳಿಗೆ ದೀಪಾಲಂಕಾರ
ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಮೂರು ಮಾರ್ಗಗಳಿಗೆ ನೆರಳು ಮತ್ತು ದೀಪಾಲಂಕಾರದ ವ್ಯವಸ್ಥೆ ಕಲ್ಪಿಸಲು ದೇಗುಲ ಟ್ರಸ್ಟ್ ತೀರ್ಮಾನಿಸಿದೆ. ಅಲಂಕಾರಿಕ ಮಂಟಪ ಮತ್ತು ವಿದ್ಯುತ್ ದೀಪಾಲಂಕಾರಕ್ಕೆ ₹ 23.50 ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ.
‘ದುರ್ಗಾಂಬಿಕಾ ದೇಗುಲದಿಂದ ಹಗೆದಿಬ್ಬದ ವೃತ್ತ, ದೊಡ್ಡಪೇಟೆ ಗಣಪತಿ ದೇಗುಲದ ವರೆಗೆ ಹಾಗೂ ಜೆ.ಗಣೇಶರಾವ್ ವೃತ್ತದಿಂದ ಹೊಂಡದ ವೃತ್ತದವರೆಗೆ ನೆರಳು ಮತ್ತು ದೀಪದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ದೇಗುಲದ ಬಾಬುದಾರ ಬಾಬುರಾವ್ ಪವಾರ್ ತಿಳಿಸಿದರು.
ಅರುಣಾ ಟಾಕೀಸು ವೃತ್ತ ಹಾಗೂ ಹಗೆದಿಬ್ಬ ವೃತ್ತದಲ್ಲಿರುವ ದ್ವಾರಬಾಗಿಲು, ಛತ್ರಪತಿ ಶಿವಾಜಿ, ರಾಜಾವೀರ ಮದಕರಿ ನಾಯಕ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಪ್ರತಿಮೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.